Advertisement
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಾಕಿಯಿದ್ದ 176 ಕಡತ, ಮಂಗಳೂರು ಉಪವಿಭಾಗಾಧಿಕಾರಿ ಕಚೇರಿಯ 153, ಪುತ್ತೂರು ಉಪ ವಿಭಾಗಾಧಿಕಾರಿ ಕಚೇರಿಯ 48, ಮಂಗಳೂರು ತಹಶೀಲ್ದಾರ್ ಕಚೇರಿಯ 742, ಬಂಟ್ವಾಳದ 102, ಬೆಳ್ತಂಗಡಿ 165, ಪುತ್ತೂರು 176, ಸುಳ್ಯ 151, ಮೂಡುಬಿದಿರೆ 99 ಮತ್ತು ಕಡಬದಲ್ಲಿ 56 ಕಡತಗಳು ಮೊದಲ ದಿನ ವಿಲೇವಾರಿಯಾಗಿವೆ ಎಂದು ದ.ಕ. ಪ್ರಭಾರ ಅಪರ ಜಿಲ್ಲಾಧಿಕಾರಿ ಪ್ರಸನ್ನ ಕುಮಾರ್ “ಉದಯವಾಣಿ’ಗೆ ತಿಳಿಸಿದ್ದಾರೆ.
ಕಡತ ವಿಲೇವಾರಿ ಸಪ್ತಾಹ ಜೂ.24ರಿಂದ ಆರಂಭವಾಗಿದ್ದು 30ರ ವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಸಾಮಾನ್ಯ ಕಡತಗಳ ಜತೆಗೆ ವಿಶೇಷವಾಗಿ ದೀರ್ಘಕಾಲದಿಂದ ಬಾಕಿ ಉಳಿದವನ್ನು ವಿಲೇವಾರಿ ಮಾಡಲಾಗುತ್ತದೆ. ಕಡತಗಳನ್ನು ಯಾವ ರೀತಿ ವಿಲೇವಾರಿ ಮಾಡಬೇಕು ಎಂಬ ಬಗ್ಗೆ ಇಲಾಖಾ ಮುಖ್ಯಸ್ಥರು, ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿ ತಮ್ಮ ಅಧೀನ ಸಿಬಂದಿಗೆ ಮಾರ್ಗದರ್ಶನ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 40,617 ಮತ್ತು ಉಡುಪಿ ಜಿಲ್ಲೆಯಲ್ಲಿ 16,347 ಕಂದಾಯ ಇಲಾಖೆಯ ಕಡತಗಳು ಇತ್ಯರ್ಥವಾಗದೆ ಬಾಕಿ ಉಳಿದಿವೆ ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ. ರವಿವಾರವೂ ರಜೆ ಪಡೆಯದೆ ಸಿಬಂದಿ ಕಡತ ವಿಲೇವಾರಿ ಪ್ರಕ್ರಿಯೆ ನಡೆಸಲಿದ್ದಾರೆ. ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ “ಉದಯವಾಣಿ’ ಜತೆಗೆ ಮಾತನಾಡಿ, ಕಡತ ವಿಲೇವಾರಿ ಸಪ್ತಾಹ ಸೋಮವಾರದಿಂದ ಆರಂಭವಾಗಿದೆ. ಜಿಲ್ಲೆಯಲ್ಲಿ ಇತ್ಯರ್ಥವಾಗದೆ ಬಾಕಿ ಉಳಿದಿರುವ ಕಡತಗಳ ಶೀಘ್ರ ವಿಲೇವಾರಿಗಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗಿದೆ. 30ರವರೆಗೆ ಇದು ನಡೆಯಲಿದೆ ಎಂದರು.