Advertisement

ಸರಕಾರಿ ಕಚೇರಿಗಳಲ್ಲಿ ದಲ್ಲಾಳಿ, ಪ್ರಭಾವಿಗಳಿಗೆ ಅಂಕುಶ: ಸುನಿಲ್‌

12:05 AM Feb 13, 2022 | Team Udayavani |

ಕಾರ್ಕಳ: ಸರಕಾರಿ ಕಚೇರಿಗಳಲ್ಲಿ ದಲ್ಲಾಳಿಗಳು, ಪ್ರಭಾವಿಗಳಿಗೆ ಅಂಕುಶ ಹಾಕಿ ಜನಸಾಮಾನ್ಯರೇ ನೇರವಾಗಿ ಬಂದು ಕೆಲಸ ಮಾಡಿಸಿಕೊಂಡು ಹೋಗುವಂತಹ ವಾತಾವರಣ ನಿರ್ಮಾಣವಾಗಬೇಕಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ ಕುಮಾರ್‌ ಹೇಳಿದರು.

Advertisement

ಕಾರ್ಕಳದಲ್ಲಿ ಕಡತ ವಿಲೇವಾರಿ ಸಪ್ತಾಹಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

ಕೊರೊನಾ, ಲಾಕ್‌ಡೌನ್‌ನಿಂದ ಜನಸಾಮಾನ್ಯರ ಕಚೇರಿ ಕೆಲಸಗಳಿಗೆ ಹಿನ್ನಡೆಯಾಗಿದೆ. ಕೊರೊನಾ ಕರ್ತವ್ಯದಲ್ಲಿ ಅಧಿಕಾರಿಗಳು ತೊಡಗಿಸಿಕೊಂಡಿದ್ದು ಕೂಡ ಹಿನ್ನಡೆಗೆ ಇನ್ನೊಂದು ಕಾರಣ. ನಿಧಾನಗತಿ ಪಡೆದಿದ್ದ ಆಡಳಿತಕ್ಕೆ ವೇಗ ನೀಡಲಾಗುತ್ತಿದ್ದು, ಮೊದಲ ಹೆಜ್ಜೆಯಾಗಿ ಕಾರ್ಕಳದಲ್ಲಿ ಕಡತ ವಿಲೇವಾರಿ ಸಪ್ತಾಹ, ಬೃಹತ್‌ ಕಂದಾಯ ಮೇಳ ನಡೆಯಲಿದೆ. ಮಾರ್ಚ್‌ನಲ್ಲಿ ದ.ಕ. ಜಿಲ್ಲೆಯಲ್ಲಿ ಚಾಲನೆ ನೀಡಲಿದ್ದೇವೆ ಎಂದರು.

ಈ ಪ್ರಕ್ರಿಯೆಯನ್ನು ಮುಂದೆ ರಾಜ್ಯದ ಎಲ್ಲೆಡೆಗೆ ವಿಸ್ತರಿಸಿ ಜಡ್ಡುಗ‌ಟ್ಟಿದ ಇಲಾಖೆಗಳ ಆಡಳಿತಕ್ಕೆ ಚುರುಕು ನೀಡುವ ಕಾರ್ಯ ಮಾಡಲಿದ್ದೇವೆ. ಸರಕಾರಿ ಕಚೇರಿಗಳು ಸಾರ್ವಜನಿಕ ಸೇವೆಗೆ ಮುಕ್ತವಾಗಿರಬೇಕು. ದಲ್ಲಾಳಿ ಇಲ್ಲದೆ, ಪ್ರಭಾವ ಬಳಸದೆ ಸಾಮಾನ್ಯ ಜನರ ಕೆಲಸಗಳು ಆಗುತ್ತಿಲ್ಲ; ಅಧಿಕಾರಿಗಳು ಬಾಹ್ಯ ಒತ್ತಡವಿಲ್ಲದೆ ಕಡತ ಮುಟ್ಟುತ್ತಿಲ್ಲ ಎನ್ನುವ ದೂರುಗಳಿವೆ. ಈ ಮನಸ್ಥಿತಿಯಿಂದ ಅಧಿಕಾರಿಗಳು ಹೊರ ಬಂದು ಕೆಲಸ ಮಾಡಬೇಕು. ಕಚೇರಿಗೆ ಬರುವ ಜನಸಾಮಾನ್ಯರನ್ನು ಕುಳ್ಳಿರಿಸಿ ಅವರ ಸಮಸ್ಯೆ ಆಲಿಸಬೇಕು. ಇಂತಹದ್ದೊಂದು ವಾತಾವರಣ ಕಚೇರಿಗಳಲ್ಲಿ ಸೃಷ್ಟಿಯಾಗಬೇಕು. ದಲ್ಲಾಳಿ, ಪ್ರಭಾವಿ ಪರಂಪರೆ ದೂರವಾಗಬೇಕು ಎಂದರು.

ಮಾ. 10: ಯಕ್ಷರಂಗಾಯಣಕ್ಕೆ ಭೂಮಿ ಪೂಜೆ :

Advertisement

ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಉತ್ಸವ ನಡೆಸಲಾಗುವುದು. ಬಜೆಟ್‌ನಲ್ಲಿ ಅನುದಾನ ಕೇಳಲಾಗಿದೆ. ಮುಂದೂಡಲ್ಪಟ್ಟ ಕಾರ್ಕಳ ಉತ್ಸವವನ್ನು ಮಾ. 10ರಿಂದ 20ರ ವರೆಗೆ ನಡೆಸಲು ನಿರ್ಧರಿಸಿದ್ದೇವೆ. ಮಾ. 10ರಂದು ಯಕ್ಷರಂಗಾಯಣ ಕೇಂದ್ರಕ್ಕೆ ಭೂಮಿ ಪೂಜೆ ನಡೆಯಲಿದೆ ಎಂದು ಸಚಿವ ಸುನಿಲ್‌ ಕುಮಾರ್‌ ಈ ಸಂದರ್ಭದಲ್ಲಿ  ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next