Advertisement

ಕಡತ ವಿಲೇವಾರಿಗೆ ಶರವೇಗ

06:00 AM Mar 22, 2018 | |

ಬೆಂಗಳೂರು: ರಾಜ್ಯಾಡಳಿತದ ಶಕ್ತಿ ಕೇಂದ್ರ ವಿಧಾನಸೌಧ, ವಿಕಾಶಸೌಧ ಸೇರಿ ಆಡಳಿತ ಯಂತ್ರದ ಪ್ರಮುಖ ಕೇಂದ್ರಗಳು ಈಗ “ಕಡತ ವಿಲೇವಾರಿ’ ತರಾತುರಿಯಲ್ಲಿವೆ. ಯಾವುದೇ ಕ್ಷಣದಲ್ಲಿ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾಗುವ ಹಿನ್ನೆಲೆಯಲ್ಲಿ ಬಹುತೇಕ ಸರ್ಕಾರಿ ಕಚೇರಿಗಳ ಹಿರಿಯ-ಕಿರಿಯ ಅಧಿಕಾರಿಗಳು ಬಿಡುವಿಲ್ಲದ ಕೆಲಸದಲ್ಲಿ ಮಗ್ನರಾಗಿದ್ದಾರೆ.

Advertisement

ಸರ್ಕಾರದ ಹಲವಾರು ಯೋಜನೆಗಳ ಅನುಷ್ಠಾನ, ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಒಂದೆಡೆಯಾದರೆ ಹಲವಾರು ದಿನಗಳಿಂದ ನೆನಗುದಿಗೆ ಬಿದ್ಧಿದ್ದ ಕಡತಗಳ ವಿಲೇವಾರಿಗೆ ಅಧಿಕಾರಿಗಳ ಮೇಲೆ ಒತ್ತಡ ಹೆಚ್ಚುತ್ತಿದೆ. ಮುಖ್ಯಮಂತ್ರಿಗಳು, ಸಚಿವರ ಇಲಾಖೆಗಳಿಗೆ ಸಂಬಂಧಪಟ್ಟ ಕಡತಗಳು ಶಕ್ತಿ ಕೇಂದ್ರದಲ್ಲಿ ಒಂದು ಮೇಜಿನಿಂದ ಇನ್ನೊಂದು ಮೇಜಿಗೆ ಓಡಾಡುತ್ತಿರುವುದು ಒಂದೆಡೆಯಾದರೆ, ಶಾಸಕರ ಕ್ಷೇತ್ರದ ಯೋಜನೆಗಳ ಕಡತಗಳೂ ತರಾತುರಿಯಲ್ಲಿ ಸರ್ಕಾರದ ಆದೇಶ ರೂಪಕ್ಕಿಳಿಯುತ್ತಿವೆ.

ಇದೇ 23 ರಂದು ಕೇಂದ್ರ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಲಿದೆ ಎನ್ನುವ ಸುದ್ದಿ ದಟ್ಟವಾಗಿ ಹರಡಿದ್ದರ ಪರಿಣಾಮ ಸರ್ಕಾರಿ ಕಚೇರಿಗಳಲ್ಲಿ ಕಡತಗಳು ಕ್ಷಿಪ್ರಗತಿಯಲ್ಲಿ ವಿಲೇವಾರಿಯಾಗುತ್ತಿವೆ.

ಅಧಿಕಾರಿಗಳ ಮೇಲೆ ಒತ್ತಡ:
ನೀತಿ ಸಂಹಿತೆ ಅಡ್ಡಿಬರುವುದರಿಂದ ವಿಳಂಬ ಮಾಡದೇ ಕಡತ ವಿಲೇವಾರಿಗೆ ಅಧಿಕಾರಿಗಳ ಮೇಲೆ ಸಚಿವರು, ಶಾಸಕರು ಒತ್ತಡ ಹಾಕುತ್ತಿದ್ದಾರೆ. ಕಾನೂನಿನ ಪರಿಮಿತಿಯೊಳಗಿರುವ ಫೈಲ್‌ಗ‌ಳನ್ನೂ ಅಧಿಕಾರಿಗಳು ಸಹಿ ಹಾಕಿ ಕಳುಹಿಸುತ್ತಿದ್ದಾರೆ. ಹಲವು ಕಡತಗಳನ್ನು ವಿಲೇವಾರಿ ಮಾಡಲು ಸಚಿವರು, ಶಾಸಕರು ಮತ್ತವರ ಬೆಂಬಲಿಗರಿಂದ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ. ಅಧಿಕಾರಿಗಳು ನಿಯಮ ಉಲ್ಲಂ ಸಲು ನಿರಾಕರಿಸಿದರೂ ಪ್ರಭಾವ ಶಾಲಿ ಸಚಿವರು ಪಟ್ಟು ಹಿಡಿದು ಕಡತಗಳನ್ನು ವಿಲೇವಾರಿ ಮಾಡಿಸಿಕೊಳ್ಳುತ್ತಿದ್ದಾರೆಂದು ಹೇಳಲಾಗಿದೆ.

ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೆ, ಕಡತವನ್ನು ಸಚಿವ ಸಂಪುಟಕ್ಕೆ ಕಳಿಸಿ ಅಲ್ಲಿ ನಾವು ವಿಶೇಷ ಅನುಮತಿ ಪಡೆದು ಮುಖ್ಯಮಂತ್ರಿಗಳಿಂದ, ಇಲ್ಲವೇ ಸಂಬಂಧಪಟ್ಟ ಸಚಿವರಿಂದ ಅನುಮೋದನೆ ಪಡೆದುಕೊಳ್ಳುತ್ತೇವೆಂದು ಬಲವಂತವಾಗಿ ಕಡತಕ್ಕೆ ಅಧಿಕಾರಿಗಳಿಂದ ಸಹಿ ಹಾಕಿಸಲಾಗುತ್ತಿದೆ. ಇದರಿಂದ ಅಧಿಕಾರಿಗಳು ಸಂಕಷ್ಟಕ್ಕೆ ಎದುರಿಸಬೇಕಾಗಿವೆ. ಕಾನೂನಿನ ವ್ಯಾಪ್ತಿ ಮೀರಿ ಸಹಿಯನ್ನೂ ಹಾಕಲಾಗದೇ, ಸಚಿವರ ಎದುರು ಉತ್ತರ ನೀಡಲಾಗದೇ ಪೇಚಿಗೆ ಸಿಲುಕಿದ್ದಾರೆ.

Advertisement

ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಮೆಗಳನ್ನು ಪ್ರತಿಷ್ಟಾಪಿಸುವಂತಿಲ್ಲವೆಂದು ಸುಪ್ರೀಂ ಕೋರ್ಟ್‌ ತೀರ್ಪಿದ್ದರೂ ಹಿರಿಯ ಸಚಿವರೊಬ್ಬರು ತಮ್ಮ ಕ್ಷೇತ್ರದಲ್ಲಿ 7 ಪ್ರತಿಮೆಗಳ ಅನಾವರಣಕ್ಕೆ ಪಟ್ಟು  ಹಿಡಿದು ಒತ್ತಡ ಹೇರಿದ್ದರಿಂದ ಅಧಿಕಾರಿ ಗೊಂದಲಕ್ಕೊಳಗಾಗಿ ದಾರಿಕಾಣದೆ ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

23 ರಂದು ಸಂಪುಟ ಸಭೆ
ಕೇಂದ್ರ ಚುನಾವಣೆ ಆಯೋಗ ಶುಕ್ರವಾರ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಪ್ರಕಟಿಸಲಿದೆ ಎನ್ನುವ ವದಂತಿ ಹಿನ್ನೆಲೆಯಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಗೊಳ್ಳುವ ಮುನ್ನವೇ ಸರ್ಕಾರದ ಕೆಲವು ಯೋಜನೆಗಳಿಗೆ ಅನುಮೋದನೆ ಪಡೆಯಲು ಸಿಎಂ ಸಿದ್ದರಾಮಯ್ಯ ಮಾ.23 ರಂದು ಸಚಿವ ಸಂಪುಟ ಸಭೆ ಕರೆದಿದ್ದಾರೆ. ವಿಧಾನಸೌಧದಲ್ಲಿ ಮಧ್ಯಾಹ್ನ 3 ಗಂಟೆಗೆ ಸಂಪುಟ ಸಭೆ ನಡೆಯಲಿದ್ದು, ವಾರದಲ್ಲಿ ನಡೆಯುತ್ತಿರುವ ಎರಡನೇ ಸಂಪುಟ ಸಭೆ ಇದಾಗಿದೆ.

ಸೋಮವಾರವಷ್ಟೇ ಸಂಪುಟ ಸಭೆ ನಡೆದು ಅದರಲ್ಲಿ ಲಿಂಗಾಯತ -ವೀರಶೈವ ಸಮುದಾಯಕ್ಕೆ ಪ್ರತ್ಯೇಕ ಅಲ್ಪ ಸಂಖ್ಯಾತ ಧರ್ಮದ ಮಾನ್ಯತೆ ನೀಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವ ತೀರ್ಮಾನ ಕೈಗೊಳ್ಳಲಾಗಿತ್ತು. 23ರ ಸಭೆಯಲ್ಲೂ ಅನೌಪಚಾರಿಕವಾಗಿ ಲಿಂಗಾಯತ ಪ್ರತ್ಯೇಕ ಧರ್ಮ ವಿವಾದ ಚರ್ಚೆಗೆ ಬರಲಿದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next