ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ರಂಗೇರುತ್ತಿರುವ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಚುನಾವಣಾ ಅಕ್ರಮಗಳಲ್ಲಿ ತೊಡಗಿದೆಯೇ? ಮತದಾರರ ಮೇಲೆ ಪ್ರಭಾವ ಬೀರುವ ನಿಟ್ಟಿನಲ್ಲಿ ವಿವಿಧ ಪಕ್ಷಗಳು, ಆಸೆ, ಅಮಿಷ ನೀಡಿ ಉಡುಗೊರೆ ಮತದಾರರಿಗೆ ವಿತರಿಸುತ್ತಿದೆಯೇ?. ಹಾಗಾದರೆ ತಡೆ ಏಕೆ? ನಿಮ್ಮ ಕ್ಷೇತ್ರಗಳ ವ್ಯಾಪ್ತಿಯಲ್ಲಿ ರಾಜಕೀಯ ಪಕ್ಷಗಳು ನಡೆಸುವ ಚುನಾವಣಾ ಅಕ್ರಮಗಳನ್ನು ರಾಜ್ಯ ಚುನಾವಣಾ ಆಯೋಗ ಮತದಾರರಿಗೆ ಬೆರಳ ತುದಿಯಲ್ಲಿ ಆಯೋಗಕ್ಕೆ ದೂರು ನೀಡುವ ಅವಕಾಶ ಕಲ್ಪಿಸಿದೆ.
ಜಿಲ್ಲೆಯ ಪ್ರಜ್ಞಾವಂತ ಮತದಾರರು ತಮ್ಮ ವ್ಯಾಪ್ತಿಯಲ್ಲಿ ರಾಜಕೀಯ ಪಕ್ಷಗಳು ಚುನಾವಣಾ ಅಕ್ರಮಗಳಲ್ಲಿ ತೊಡಗಿದ್ದರೆ ತಡ ಮಾಡದೇ ಸಿ.ವಿಜಿಲ್ ಸಿಟಿಜನ್ ಆ್ಯಪ್ ಡೌನ್‌ಲೋಡ್ ಮಾಡಿ ದೂರು ಕೊಡಬಹುದಾಗಿದೆ. ರಾಜ್ಯ ವಿಧಾನಸಭಾ ಚುನಾವಣೆಗೆ ಮಾದರಿ ನೀತಿ ಸಂಹಿತೆ ಮಾ.19 ರಿಂದಲೇ ಜಾರಿಯಲ್ಲಿದ್ದು, ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಸಾರ್ವಜನಿಕರು ದೂರು ದಾಖಲಿಸಲು ಭಾರತ ಚುನಾವಣಾ ಆಯೋಗದ ಸಿ-ವಿಜಿಲ್ ಸಿಟಿಜನ್ ಆ್ಯಪ್ ಅನ್ನು ಬಳಕೆ ಮಾಡಬಹುದಾಗಿದೆ.
ಈಗಾಗಲೇ ಜಿಲ್ಲಾದ್ಯಂತ ರಾಜಕೀಯ ಪಕ್ಷಗಳು ಮತದಾರರ ಮೇಲೆ ಪ್ರಭಾವ ಬೀರುವ ನಿಟ್ಟಿನಲ್ಲಿ ಹಣ, ಮದ್ಯ, ಮೂಗುನತ್ತು, ಸೀರೆ, ಕುಕ್ಕರ್, ಸ್ಟೌವ್, ಮಿಕ್ಸಿ ಮತ್ತಿತರ ಬೆಲೆ ಬಾಳುವ ವಸ್ತು ವಿತರಿಸುವ ಮೂಲಕ ಮತದಾರರಿಗೆ ಆಸೆ, ಅಮಿಷ ತೋರುತ್ತಿದ್ದು ಸಾರ್ವಜನಿಕರು ಸಿ-ವಿಜಿಲ್ ಸಿಟಿಜಿನ್ ಆ್ಯಪ್ ಮೂಲಕ ಆಯೋಗಕ್ಕೆ ದೂರು ಸರಮಾಲೆ ಸುರಿಸಿದ್ದಾರೆ.
ನೀವು ಏನು ಮಾಡಬೇಕು?: ಮೊಬೈಲ್‌ನ ಪ್ಲೇಸ್ಟೋರ್‌ನಲ್ಲಿ ಲಭ್ಯವಿರುವ ಸಿ-ವಿಜಿಲ್ ಸಿಟಿಜನ್ ಆ್ಯಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳುವ ಮೂಲಕ ಮೊಬೈಲ್ ಸಂಖ್ಯೆ ನೋಂದಾಯಿಸಿಕೊಂಡು ದೂರು ದಾಖಲು ಮಾಡಲು ಚುನಾವಣಾ ಆಯೋಗ ಮತದಾರರ, ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿದೆ.
ಸಿ-ವಿಜಿಲ್ ಸಿಟಿಜನ್ ಆ್ಯಪ್‌ನಲ್ಲಿ ದಾಖಲಾಗುವ ದೂರುದಾರರ ಮಾಹಿತಿ ಗೌಪ್ಯವಾಗಿಡಲಾಗುವುದು. ಸಾರ್ವಜನಿಕರು ಚುನಾವಣಾ ದೂರು ಇದ್ದಲ್ಲಿ ಸದರಿ ದೂರಿನ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪಡೆದು ಕೊಳ್ಳಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ತಿಳಿಸಿದ್ದಾರೆ.
ದೂರು ಕೊಟ್ಟ 100 ನಿಮಿಷಗಳಲ್ಲಿ ಕ್ರಮ : ಮತದಾರರು, ಸಾರ್ವಜನಿಕರು ಯಾವುದೇ ಅಭ್ಯರ್ಥಿಗಳು ಮತದಾ ರರಿಗೆ ಉಡುಗೊರೆ, ಹಣ, ಮದ್ಯ, ಇತರೇ ವಸ್ತುಗಳನ್ನು ವಿತರಿಸುವುದು ಕಂಡು ಬಂದಲ್ಲಿ ಕೂಡಲೇ ಸಿ-ವಿಜಿಲ್ ಸಿಜಿಟನ್ ಆ್ಯಪ್ ಮೂಲಕ ದೂರು ಕೊಟ್ಟರೆ ದೂರು ದಲ್ಲಿಸಿದ 100 ನಿಮಿಷಗಳಲ್ಲಿ ಅಗತ್ಯ ಕ್ರಮ ವಹಿಸಲು ಸಂಬಂದಪಟ್ಟ ಅಧಿಕಾರಿಗಳಿಗೆ ಚುನಾವಣಾ ಆಯೋಗ ಸೂಚಿಸಲಿದೆ.