Advertisement

ಬಾಲ್ಯವಿವಾಹ ತಡೆ ಜತೆ‌ಗೆ ಪ್ರಕರಣ ದಾಖಲಿಸಿ: ಡಿಸಿ ಸೂಚನೆ

05:52 PM Aug 27, 2022 | Team Udayavani |

ಬೆಳಗಾವಿ: ಬಾಲ್ಯವಿವಾಹ ಪ್ರಕರಣಗಳು ಕಂಡುಬಂದಾಗ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಅವುಗಳನ್ನು ತಡೆಯುವುದರ ಜೊತೆಗೆ ತಕ್ಷಣವೇ ಸ್ಥಳೀಯ
ಪೊಲೀಸ್‌ ಠಾಣೆಯಲ್ಲಿ ಎಫ್‌.ಐ.ಆರ್‌ ದಾಖಲಿಸಬೇಕು. ಅಧಿಕಾರಿಗಳು ಇದರ ಮುಂದಾಳತ್ವ ವಹಿಸಿಕೊಂಡು ಸಂಬಂಧಪಟ್ಟ ಇಲಾಖೆಗಳ ಸಮನ್ವಯದೊಂದಿಗೆ ಬಾಲ್ಯವಿವಾಹ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಹೇಳಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಬಾಲ್ಯ ವಿವಾಹಗಳನ್ನು ತಡೆಗಟ್ಟಲು ಜಿಲ್ಲಾ ಮಟ್ಟದ ಸಮನ್ವಯ ಸಮಿತಿ, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಪ್ರಕರಣಗಳು ನ್ಯಾಯಾಲಯ ಹಂತಗಳಲ್ಲಿ ಬಾಕಿ ಇವೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ತಾಲೂಕು ಮಟ್ಟದಲ್ಲಿ ವಕೀಲರನ್ನು ನೇಮಕ ಮಾಡಲಾಗಿದ್ದು, ಕೂಡಲೇ ನ್ಯಾಯಾಲಯ ನಡೆಸುವ ಲೋಕ್‌ ಅದಾಲತ್‌ಗಳಲ್ಲಿ ಪ್ರಕರಣಗಳನ್ನು ಇತ್ಯರ್ಥ ಮಾಡಬೇಕು ಎಂದರು.

ನಿಪ್ಪಾಣಿಯಲ್ಲಿ 13 ಪ್ರಕರಣಗಳು ಬಾಕಿ ಇವೆ. ನ್ಯಾಯಾಲಯಗಳಲ್ಲಿ ನಡೆಯುವ ಲೋಕ್‌ ಅದಾಲತ್‌ ಮೂಲಕ ಬಾಕಿ ಪ್ರಕರಣಗಳ ಇತ್ಯರ್ಥ ಮಾಡಬೇಕು. ಅದೇ ರೀತಿ ಅಥಣಿ, ಬೆಳಗಾವಿ ಗ್ರಾಮೀಣ ಭಾಗದಲ್ಲಿರುವ ಪ್ರಕರಣಗಳ ವಕಾಲತ್ತು ವಹಿಸಲು ಸರ್ಕಾರಿ ವಕೀಲರ ನೇಮಕ ಮಾಡಬೇಕು ಎಂದು ಸೂಚನೆ ನೀಡಿದರು.

ಜಿಲ್ಲೆಯಲ್ಲಿರುವ ಸಾಂತ್ವನ ಕೇಂದ್ರಗಳ ಮಾಹಿತಿ ಜನರಿಗೆ ತಲುಪುವಂತೆ ಹೆಚ್ಚು ಪ್ರಚಾರ ಕೊಡಬೇಕು. ಅಂಗನವಾಡಿ ಕೇಂದ್ರಗಳಿಗೆ ಬಾಣಂತಿಯರು, ಮಹಿಳೆಯರು, ಮಕ್ಕಳು ಬರುವುದರಿಂದ ಅವರಿಗೆ ಈ ಮಾಹಿತಿ ಅನುಕೂಲವಾಗಲಿದೆ. ಪ್ರತಿ ಅಂಗನವಾಡಿ ಕೇಂದ್ರಗಳಲ್ಲಿ ಮಾಹಿತಿ ಸಿಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಮತ್ತು ತಾಲೂಕಾ ಮಟ್ಟದ ಅಧಿಕಾರಿಗಳಿಗೆ, ಎನ್‌.ಜಿ. ಓ ಗಳಿಗೆ ಸಾಂತ್ವನ ಕೇಂದ್ರದ ಮಾಹಿತಿ ಹಾಗೂ ಅಲ್ಲಿ ಕಾರ್ಯ ನಿರ್ವಹಿಸುವವರ ಸಂಪರ್ಕದ ಮಾಹಿತಿ ನೀಡಬೇಕು. ಅದೇ ರೀತಿ ಜಿಲ್ಲಾಡಳಿತದ ವೆಬ್‌ಸೈಟ್‌ ಮೂಲಕ ಸಹ ಈ ಮಾಹಿತಿ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

Advertisement

ಸಭೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಸಂಜೀವ ಪಾಟೀಲ, ಜಿಲ್ಲಾ ನಿರೂಪಣಾಧಿಕಾರಿ ಯಲ್ಲಪ್ಪ ಗಡಾದಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಚಂದ್ರಶೇಖರ ಸುಖಸಾರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಎಂ.ಎಂ.ಬಸವರಾಜ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next