ಹೊಸದಿಲ್ಲಿ: ಮುಂಬರುವ ಎಫ್ಐಎಚ್ ಪ್ರೊ ಹಾಕಿ ಕೂಟಕ್ಕೆ ಭಾರತ ತಂಡ ಪ್ರಕಟಗೊಂಡಿದ್ದು ಮನ್‌ಪ್ರೀತ್ ಸಿಂಗ್ ತಂಡವನ್ನು ಮುನ್ನಡೆಸಲಿದ್ದಾರೆ. ವಿಶ್ವದ ಎರಡನೇ ರ್‍ಯಾಂಕಿನ ಆಸ್ಟ್ರೇಲಿಯ ವಿರುದ್ಧ ನಡೆಯಲಿರುವ ಈ ಸೆಣಸಾಟಕ್ಕಾಗಿ ಹಾಕಿ ಇಂಡಿಯಾವು ಮಂಗಳವಾರ 24 ಸದಸ್ಯರ ತಂಡವನ್ನು ಪ್ರಕಟಿಸಿದೆ.
ಹರ್ಮನ್‌ಪ್ರೀತ್ ಸಿಂಗ್ ಉಪನಾಯಕರಾಗಿ ತಂಡಕ್ಕೆ ನೆರವಾಗಲಿದ್ದಾರೆ. ಫೆ. 21 ಮತ್ತು 22ರಂದು ಭುವನೇಶ್ವರದ ಕಳಿಂಗಾ ಮೈದಾನದಲ್ಲಿ ಈ ಸೆಣಸಾಟ ನಡೆಯಲಿದೆ. ಮುಂಬರುವ ಟೋಕಿಯೊ ಒಲಿಂಪಿಕ್ಸ್‌ಗೆ ಸಮರ್ಥ ತಂಡವನ್ನು ರೂಪಿಸುವ ನಿಟ್ಟಿನಲ್ಲಿ ಭಾರತಕ್ಕೆ ಈ ಸೆಣಸಾಟ ಮಹತ್ವದ್ದಾಗಿದೆ.
ಎಫ್ಐಎಚ್ ವಿಶ್ವ ರ್‍ಯಾಂಕಿಂಗ್‌ನಲ್ಲಿ 4ನೇ ಸ್ಥಾನಕ್ಕೆ ಏರಿದ ಸಾಧನೆ ಮಾಡಿರುವ ಭಾರತವು ತನ್ನ ಮೊದಲ ಪ್ರೊ ಲೀಗ್ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಬೆಲ್ಜಿಯಂ ವಿರುದ್ಧ 2-1 ಗೋಲುಗಳಿಂದ ಗೆಲುವು ದಾಖಲಿಸಿತ್ತು. ಆದರೆ ದ್ವಿತೀಯ ಪಂದ್ಯದಲ್ಲಿ 2-3 ಗೋಲುಗಳಿಂದ ಸೋತಿತ್ತು.
24 ಸದಸ್ಯರ ತಂಡದಲ್ಲಿ ಪಿ.ಆರ್. ಶ್ರೀಜೇಶ್ ಮತ್ತು ಕೃಷ್ಣ ಪಾಠಕ್ ಗೋಲ್‌ಕೀಪರ್‌ಗಳಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಅಮಿತ್ ರೋಹಿದಾಸ್, ಸುರೇಂದರ್ ಕುಮಾರ್, ಬಿರೇಂದ್ರ ಲಾಕ್ರ, ಹರ್ಮನ್‌ಪ್ರೀತ್ ಸಿಂಗ್, ವರುಣ್ ಕುಮಾರ್, ಗುರಿಂದರ್ ಸಿಂಗ್ ಮತ್ತು ರೂಪಿಂದರ್ ಪಾಲ್ ಸಿಂಗ್ ತಂಡದಲ್ಲಿರುವ ಪ್ರಮುಖ ಆಟಗಾರರಾಗಿದ್ದಾರೆ.
” ಬಲಿಷ್ಠ ಬೆಲ್ಜಿಯಂ ವಿರುದ್ಧ ಭಾರತ ತೋರಿದ ಶ್ರೇಷ್ಠ ಪ್ರದರ್ಶನ ಆಟಗಾರರಲ್ಲಿ ಹೆಚ್ಚಿನ ಆತ್ಮವಿಶ್ವಾಸ ಮೂಡಿಸಿದೆ. ಆಸ್ಟ್ರೇಲಿಯ ವಿರುದ್ಧವೂ ಉತ್ತಮ ಪ್ರದರ್ಶನ ತೋರಲು ಮನ್‌ಪ್ರೀತ್ ಸಿಂಗ್ ಪಡೆ ಎದುರು ನೋಡುತ್ತಿದೆ’ ಎಂದು ತಂಡದ ಮುಖ್ಯ ಕೋಚ್ ಗ್ರಹಾಂ ರೀಡ್ ಹೇಳಿದ್ದಾರೆ.
ಭಾರತ ತಂಡ
ಮನ್‌ಪ್ರೀತ್ ಸಿಂಗ್ (ನಾಯಕ), ಪಿ.ಆರ್. ಶ್ರೀಜೇಶ್, ಕೃಷ್ಣ ಪಾಠಕ್, ಅಮಿತ್ ರೋಹಿದಾಸ್, ಸುರೇಂದರ್ ಕುಮಾರ್, ಬಿರೇಂದ್ರ ಲಾಕ್ರ, ಹರ್ಮನ್‌ಪ್ರೀತ್ ಸಿಂಗ್(ಉಪನಾಯಕ), ವರುಣ್ ಕುಮಾರ್, ಗುರಿಂದರ್ ಸಿಂಗ್, ರೂಪಿಂದರ್ ಪಾಲ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ಹಾರ್ದಿಕ್ ಸಿಂಗ್, ಚಿಂಗ್ಲೆನ್ಸನ ಸಿಂಗ್, ರಾಜ್‌ಕುಮಾರ್ ಪಾಲ್, ಆಕಾಶ್‌ದೀಪ್ ಸಿಂಗ್, ಸುಮಿತ್, ಲಲಿತ್ ಉಪಾಧ್ಯಾಯ, ಗುರ್ಸಹಿಬ್ಜಿತ್ ಸಿಂಗ್, ದಿಲ್‌ಪ್ರೀತ್ ಸಿಂಗ್, ಎಸ್.ವಿ. ಸುನೀಲ್, ಜರ್ಮನ್‌ಪ್ರೀತ್ ಸಿಂಗ್, ಸಿಮ್ರಾನ್‌ಜಿàತ್ ಸಿಂಗ್, ನೀಲಕಂಠ ಶರ್ಮ, ರಮಣ್‌ದೀಪ್ ಸಿಂಗ್.