Advertisement
1971ರಿಂದ ಆಡಲಾಗುತ್ತಿರುವ, ಈವರೆಗಿನ 14 ವಿಶ್ವಕಪ್ ಹಾಕಿ ಪಂದ್ಯಾವಳಿಯಲ್ಲಿ ಭಾರತ ಜಯಿಸಿದ್ದು ಕೇವಲ 3 ಪದಕ. ಚೊಚ್ಚಲ ವಿಶ್ವಕಪ್‌ನಲ್ಲಿ ಕಂಚು, 1973ರಲ್ಲಿ ಬೆಳ್ಳಿ, 1975ರಲ್ಲಿ ಚಿನ್ನ… ಹೀಗೆ ಕೂಟದಿಂದ ಕೂಟಕ್ಕೆ ಪ್ರಗತಿ ಕಾಣುತ್ತಲೇ ಹೋದ ಭಾರತ 1975ರ ಬಳಿಕ ಪೋಡಿಯಂ ಏರಿಲ್ಲ. ಇನ್ನೂ ಘೋರ ದುರಂತವೆಂದರೆ, 1978ರಿಂದ 2014ರ ವಿಶ್ವಕಪ್‌ಗ್ಳಲ್ಲಿ ಗ್ರೂಪ್ ಹಂತವನ್ನೂ ದಾಟದಿರುವುದು!
Related Articles
Advertisement
ಈ ಬಾರಿ ಭಾರತದ ಮೇಲೆ ಹೆಚ್ಚುವರಿ ನಿರೀಕ್ಷೆ ಒಂದಿದೆ. ಅದು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಗೆದ್ದ ಕಂಚಿನ ಪದಕ. ಒಲಿಂಪಿಕ್ಸ್ ಪದಕದ ಬರಗಾಲ ನೀಗಿಸಿಕೊಂಡ ಭಾರತ ವಿಶ್ವಕಪ್‌ನಲ್ಲೂ ಪದಕದ ಬರಗಾಲವನ್ನು ನೀಗಿಸಿಕೊಳ್ಳಲಿ ಎಂಬುದು ಎಲ್ಲರ ಹಾರೈಕೆ.
ಗ್ರಹಾಂ ರೀಡ್ 2019ರಲ್ಲಿ ಪ್ರಧಾನ ಕೋಚ್ ಆಗಿ ನೇಮಕಗೊಂಡ ಬಳಿಕ ಭಾರತೀಯ ಹಾಕಿ ಅನೇಕ ಗಮನಾರ್ಹ ನಿರ್ವಹಣೆ ತೋರಿದೆ. 2021-22ರ ಋತುವಿನ ಎಫ್ಐಎಚ್ ಪ್ರೊ ಲೀಗ್ ಹಾಕಿ ಪಂದ್ಯಾವಳಿಯಲ್ಲಿ 3ನೇ ಸ್ಥಾನ ಪಡೆದದ್ದು ಇದಕ್ಕೊಂದು ಉತ್ತಮ ನಿದರ್ಶನ.
ಪ್ರತಿಭಾನ್ವಿತ ಆಟಗಾರರು:
ನಾಯಕ ಹಾಗೂ “ಎಫ್ಐಎಚ್ ವರ್ಷದ ಆಟಗಾರ’ ಪ್ರಶಸ್ತಿ ಪುರಸ್ಕೃತರಾದ ಹರ್ಮನ್‌ಪ್ರೀತ್ ಸಿಂಗ್ ಅತ್ಯುತ್ತಮ ಡಿಫೆಂಡರ್ ಹಾಗೂ ಅಷ್ಟೇ ಉತ್ತಮ ಡ್ರ್ಯಾಗ್ ಫ್ಲಿಕರ್ ಕೂಡ ಆಗಿದ್ದಾರೆ. ಹಾಗೆಯೇ ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ಭದ್ರ ಕೋಟೆಯಿದ್ದಂತೆ. ಮಿಡ್-ಫೀಲ್ಡ್ ಸ್ಟಾರ್‌ಗಳಾದ ಮನ್‌ಪ್ರೀತ್ ಸಿಂಗ್ ಮತ್ತು ಹಾರ್ದಿಕ್ ಸಿಂಗ್, ಸ್ಟ್ರೈಕರ್ ಮನ್‌ದೀಪ್ ಸಿಂಗ್, ಮಾಜಿ ನಾಯಕನೂ ಆಗಿರುವ ಡಿಫೆಂಡರ್ ಅಮಿತ್ ರೋಹಿದಾಸ್, ಫಾರ್ವರ್ಡ್ ಆಟಗಾರ ಆಕಾಶ್‌ದೀಪ್ ಸಿಂಗ್ ಅವರನ್ನೊಳಗೊಂಡ ಭಾರತದ ಪಡೆ ಸಾಕಷ್ಟು ಬಲಿಷ್ಠವಾಗಿದೆ. ಆದರೆ ಕೂಟದಲ್ಲಿ ಭಾರತಕ್ಕಿಂತಲೂ ಬಲಿಷ್ಠವಾಗಿರುವ ಸಾಕಷ್ಟು ತಂಡಗಳಿವೆ!
ಬೇಕಿದೆ ಗೆಲುವಿನ ಆರಂಭ:
ಸ್ಪೇನ್ ವಿರುದ್ಧ ಗೆಲುವಿನ ಆರಂಭ ಕಂಡುಕೊಳ್ಳುವುದು ಭಾರತದ ಗುರಿ. ಮೊದಲ ಜಯ ಯಾವತ್ತೂ ತಂಡಕ್ಕೊಂದು ಸ್ಫೂರ್ತಿ. ಇದರಿಂದ “ಡಿ’ ವಿಭಾಗದಿಂದ ನೇರವಾಗಿ ಕ್ವಾರ್ಟರ್ ಫೈನಲ್ ಅವಕಾಶ ಎದುರಾಗುವ ಸಾಧ್ಯತೆ ಇದೆ. ಇಲ್ಲವಾದರೆ “ಕ್ರಾಸ್ ಓವರ್’ ಪಂದ್ಯಗಳನ್ನಾಡಿ ಮುನ್ನಡೆಯಬೇಕಾಗುತ್ತದೆ. ಸ್ಪೇನ್ ಬಳಿಕ ಭಾರತಕ್ಕೆ ಇಂಗ್ಲೆಂಡ್ ಮತ್ತು ವೇಲ್ಸ್ ಸವಾಲು ಎದುರಾಗಲಿದೆ.
ಆದರೆ ಯುರೋಪಿಯನ್ ತಂಡ ವಾದ ಸ್ಪೇನ್ ಸುಲಭ ಎದುರಾಳಿ ಯೇನಲ್ಲ. 1971 ಮತ್ತು 1998ರಲ್ಲಿ ರನ್ನರ್ ಅಪ್, 2006ರಲ್ಲಿ ಕಂಚು ಗೆದ್ದ ಸಾಧನೆಗೈದಿದೆ. ಆರ್ಜೆಂಟೀನಾದ ಮಾಜಿ ಆಟಗಾರ ಮ್ಯಾಕ್ಸ್ ಕಾಲ್ಡಾಸ್ ಸ್ಪೇನ್ ಕೋಚ್ ಆಗಿದ್ದು, ಅಲ್ವರೊ ಇಗ್ಲೆàಸಿಯಾಸ್ ನಾಯಕತ್ವ ಹೊಂದಿದೆ. ಆದರೆ ಸ್ಪೇನ್ ತಂಡದ ಶೇ. 90ರಷ್ಟು ಆಟಗಾರರಿಗೆ ಇದೇ ಮೊದಲ ವಿಶ್ವಕಪ್ ಎಂಬುದನ್ನು ಮರೆಯುವಂತಿಲ್ಲ.
ಇತ್ತಂಡಗಳ ನಡುವೆ 30 ಪಂದ್ಯಗಳು ನಡೆದಿವೆ. ಭಾರತ 13ರಲ್ಲಿ, ಸ್ಪೇನ್ 11ರಲ್ಲಿ ಗೆದ್ದಿವೆ. ಉಳಿದ 6 ಪಂದ್ಯಗಳು ಡ್ರಾಗೊಂಡಿವೆ.
ವಿಶ್ವಕಪ್ ಹಾಕಿ: ಇಂದಿನ ಪಂದ್ಯಗಳು:
ಪಂದ್ಯ ಸ್ಥಳ ಆರಂಭ
- ಆರ್ಜೆಂಟೀನಾ- ದಕ್ಷಿಣ ಆಫ್ರಿಕಾ /ಭುವನೇಶ್ವರ ಅ. 1.00
- ಆಸ್ಟ್ರೇಲಿಯ- ಫ್ರಾನ್ಸ್ /ಭುವನೇಶ್ವರ ಅ. 3.00
- ಇಂಗ್ಲೆಂಡ್-ವೇಲ್ಸ್ /ರೂರ್ಕೆಲ ಸಂ. 5.00
- ಭಾರತ-ಸ್ಪೇನ್ /ರೂರ್ಕೆಲ ರಾ. 7.00