Advertisement

ಹೋರಾಟ ಮಾಡದೇ ದಕ್ಕದು ಹಕ್ಕು

07:49 AM Mar 11, 2019 | |

ರಾಯಚೂರು: ಹೋರಾಟ ನಡೆಸದ ಹೊರತು ಯಾವುದೂ ಸುಲಭಕ್ಕೆ ದಕ್ಕುವುದಿಲ್ಲ. ಅದರಲ್ಲೂ ಹಿಂದುಳಿದ ಪರಿಶಿಷ್ಟ ಪಂಗಡದ ಮಹಿಳೆಯರು ತಮ್ಮ ಹಕ್ಕು, ಸೌಲಭ್ಯಗಳನ್ನು ಹೋರಾಡಿಯೇ ಪಡೆಯಬೇಕಾದ ಅನಿವಾರ್ಯತೆ ಇದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ| ಸಿದ್ಧಲಿಂಗಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ನಗರ ಹೊರವಲಯದ ಹರ್ಷಿತಾ ಗಾರ್ಡ್‌ನ್‌ನಲ್ಲಿ ಅಖೀಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದಿಂದ ರವಿವಾರ ಏರ್ಪಡಿಸಿದ್ದ ರಾಜ್ಯಮಟ್ಟದ ವಾಲ್ಮೀಕಿ ಮಹಿಳಾ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

ಹಿಂದುಳಿದ ಸಮಾಜದ ಮಹಿಳೆಯರು ಮುನ್ನೆಲೆಗೆ ಬರಬೇಕಾದರೆ ಹೋರಾಟ ಅನಿವಾರ್ಯ. ಮಹಿಳೆಯರು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು. ಅದರಿಂದ ಸಮಾಜದ ಪ್ರಗತಿ ಸಾಧ್ಯ. ಶಿಕ್ಷಣದ ಜತೆ ಜತೆಗೆ ಎಲ್ಲರೂ ಒಗ್ಗೂಡಿ ಹೋರಾಡಿದಾಗ ಸದೃಢ ಸಮಾಜ ನಿರ್ಮಿಸಲು ಸಾಧ್ಯ ಎಂದರು. 

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್‌ ಮಾತನಾಡಿ, ಅವಕಾಶ ಸಿಗುವುದು ದೊಡ್ಡದಲ್ಲ. ಸಿಕ್ಕ ಅವಕಾಶಗಳನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದು ಮುಖ್ಯ. ಈ ಸಮಾಜದಲ್ಲಿ ಜನಿಸಿದ ಫಲವಾಗಿ ಶಾಸಕನಾಗಿದ್ದೇನೆ. ಬಜೆಟ್‌ನಲ್ಲಿ ಎಸ್‌ಟಿ ಸಮಾಜದ ಪ್ರಗತಿಗೆ ಸಿಗುವ ಅನುದಾನವನ್ನು ಸರಿಯಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ. ಕೇಂದ್ರ ಸರ್ಕಾರ ಎಸ್‌ಟಿಗೆ ಶೇ.7.5ರಷ್ಟು ಮೀಸಲಾತಿ ನೀಡಿದರೆ, ರಾಜ್ಯದಲ್ಲಿ ಕೇವಲ ಶೇ.3ರಷ್ಟಿದೆ. ಆ ಪ್ರಮಾಣ ಹೆಚ್ಚಳಕ್ಕೂ ಶ್ರಮಿಸುವುದಾಗಿ ಭರವಸೆ ನೀಡಿದರು.

ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್‌ ಮಾತನಾಡಿದರು. ರಾಜನಹಳ್ಳಿಯ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಹಾಸಭಾ ಜಿಲ್ಲಾಧ್ಯಕ್ಷೆ ಡಾ| ಶಾರದಾ ಪಿ.ಹುಲಿನಾಯಕ ಪ್ರಾಸ್ತಾವಿಕ ಮಾತನಾಡಿದರು.
 
ವಾಲ್ಮೀಕಿ ನಾಯಕ ಮಹಾಸಭಾ ರಾಜ್ಯಾಧ್ಯಕ್ಷ ಎಂ.ನರಸಿಂಹಯ್ಯ, ಮಹಿಳಾ ಘಟಕ ರಾಜ್ಯಾಧ್ಯಕ್ಷೆ ಜಯಶ್ರೀ ಗುಡ್ಡಕಾಯು, ಉಪಾಧ್ಯಕ್ಷ ವೈ.ಬಿ. ಪಾಟೀಲ, ಪ್ರಧಾನ ಕಾರ್ಯದರ್ಶಿ ವಿ.ಎಂ.ಮೇಟಿ, ನೌಕರರ ಸಂಘದ ರಾಜ್ಯಾಧ್ಯಕ್ಷ ಕೆ.ಸಿ.ನಾಗರಾಜ, ಜಿಪಂ ಸದಸ್ಯ ಖಾಸಿಂ ನಾಯಕ, ಸುಜಾತಾ ಪಾಟೀಲ ದೇವದುರ್ಗ, ಡಾ| ಅಮರೇಶ ಯಾತಗಲ್‌, ಆರ್‌.ಗೋಪಾಲಕೃಷ್ಣ ಇತರರು ಉಪಸ್ಥಿತರಿದ್ದರು.

Advertisement

ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ಜನಸಂಖ್ಯೆ ಅತಿ ಹೆಚ್ಚಿನ ಸಂಖ್ಯೆಯಲ್ಲಿದೆ. ಮಹಿಳೆಯರಿಗೂ ಸೂಕ್ತ ಸ್ಥಾನಮಾನಗಳು ಸಿಕ್ಕಾಗಲೇ ಸಮಾಜದ ಏಳಿಗೆ ಸಾಧ್ಯ. ಆ ನಿಟ್ಟಿನಲ್ಲಿ ಮಹಿಳೆಯರ ಜಾಗೃತಿ ಮೂಡಿಸುತ್ತಿರುವ ಈ ಕಾರ್ಯ ಶ್ಲಾಘನೀಯ. ಮಹಿಳೆಯರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಸಂಕಲ್ಪ ತೊಡಬೇಕು.
 ಪ್ರತಾಪಗೌಡ ಪಾಟೀಲ, ರಾಜ್ಯ ಉಗ್ರಾಣ ನಿಗಮ ಅಧ್ಯಕ್ಷ

ಎಸ್‌ಟಿ ಮೀಸಲಾತಿ ಪ್ರಮಾಣ ಹೆಚ್ಚಳಕ್ಕಾಗಿ ಹಿಂದೆ ದೊಡ್ಡಮಟ್ಟದ ಹೋರಾಟ ನಡೆಸಲಾಗಿತ್ತು. ಆದರೆ, ಅದಕ್ಕೆ ಫಲ ಸಿಕ್ಕಿಲ್ಲ. ರಾಜ್ಯದಲ್ಲಿ ಸಮಾಜದ 15 ಶಾಸಕರಿದ್ದು, ಎಲ್ಲರೂ ಸಮಾಜದ ಸ್ವಾಮೀಜಿಗಳ ಕೈಗೆ ರಾಜೀನಾಮೆ ಪತ್ರ ಸಲ್ಲಿಸಿ ಅವರ ನೇತೃತ್ವದಲ್ಲಿಯೇ ಹೋರಾಟಕ್ಕೆ ಮುಂದಾಗುತ್ತೇವೆ. 
 ರಾಜಾ ವೆಂಕಟಪ್ಪ ನಾಯಕ, ರಾಜ್ಯ ಪ್ರವಾಸೋದ್ಯಮ ನಿಗಮ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next