ಮಹದೇವಪುರ: ನಗರದಲ್ಲಿ ಅತಿ ಹೆಚ್ಚು ಕೈಗಾರಿಕೆಗಳನ್ನು ಹೊಂದಿರುವ ಮಹದೇವಪುರ ಕ್ಷೇತ್ರದಲ್ಲಿ ಕನ್ನಡಿಗರಿಗೆ ಸೂಕ್ತ ಸ್ಥಾನ ಕಲ್ಪಿಸಿಕೊಡಲು ಎಲ್ಲಾ ಸಂಘಟನೆಗಳು ಹೋರಾಡಬೇಕು ಎಂದು ಪಾಲಿಕೆ ಸದಸ್ಯ ನಿತೀಶ್ ಪುರುಷೋತ್ತಮ್ ಕರೆ ನೀಡಿದರು.
ಗರುಡಾಚರ್ ಪಾಳ್ಯದ ಸರ್ಕಾರಿ ಸಂಯುಕ್ತ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಸಾಹಿತ್ಯ ಪರಿಷತ್‌ನ ವಾರ್ಡ್ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗಾರಿಕೆಗಳು, ಮಾಹಿತಿ ಮತ್ತು ಜೈವಿಕ ತಂತ್ರಜಾnನ ಸಂಸ್ಥೆಗಳು ಹೆಚ್ಚಿನ ಪ್ರಮಾಣದಲ್ಲಿದ್ದರೂ, ಕನ್ನಡಿಗರು ಅವುಗಳ ಅನುಕೂಲ ಪಡೆದುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ವಲಸಿಗರೇ ಹೆಚ್ಚಿನ ಉದ್ಯೋಗ ಪಡೆಯುತ್ತಿದ್ದಾರೆ.
ಕನ್ನಡಿಗರಿಗೆ ಉದ್ಯೋಗ ನೀಡುವಲ್ಲಿ ಖಾಸಗಿ ಸಂಸ್ಥೆಗಳು ಇಚ್ಚಾಶಕ್ತಿ ತೋರುತ್ತಿಲ್ಲ. ಕನ್ನಡಿಗರು ತಮ್ಮದೇ ನೆಲದಲ್ಲಿ ಆರ್ಥಿಕವಾಗಿ ಹಿಂದುಳಿಯುವಂತಾಗಿರುವುದು ಬೇಸರದ ಸಂಗತಿ. ಶೀಘ್ರವೇ ಸರೋಜಿನಿ ಮಹಿಷಿ ವರದಿಯನ್ನು ಸಮಗ್ರವಾಗಿ ಜಾರಿಗೆ ತರುವ ಮೂಲಕ ಕನ್ನಡಿಗರಿಗೆ ಕೈಗಾರಿಕೆಗಳಲ್ಲಿ ಉದ್ಯೋಗ ಮೀಸಲಾತಿ ನೀಡಬೇಕಿದೆ. ಉದ್ಯೋಗ ಮೀಸಲಾತಿ ದೊರೆತರೆ ಕನ್ನಡಿಗರ ಜೀವನ ಸುಧಾರಣೆಗೊಳ್ಳಲಿದೆ,” ಎಂದರು.
“ಕ್ಷೇತ್ರದ ಜನತೆಗೆ ಗ್ರಂಥಾಲಯ, ಕನ್ನಡ ಭವನದ ಅಗತ್ಯವಿದೆ. ಶೀಘ್ರವೇ ಕನ್ನಡ ಭವನ ನಿರ್ಮಾಣಕ್ಕೆ ಬಿಬಿಎಂಪಿ ಅನುದಾನದಲ್ಲಿ ಸ್ಥಳ ಗುರುತಿಸಿ, ಕಾಮಗಾರಿ ಆರಂಭಿಸಲಾಗುವುದು,” ಎಂದು ತಿಳಿಸಿದರು. ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಮಾಯಣ್ಣ ಮಾತನಾಡಿ, “ಕನ್ನಡದ ನೆಲದಲ್ಲಿ ಪರಕೀಯರು ಸಂಪತ್ತು ಲೂಟಿ ಹೊಡೆಯುತ್ತಿದ್ದಾರೆ. ಕನ್ನಡಿಗರು ಬಡವರಾಗಿಯೇ ಉಳಿಯುವುದಕ್ಕೆ ಕಸಾಪ ಬಿಡುವುದಿಲ್ಲ.
ಪರಿಷತ್‌ವತಿಯಿಂದ ಕೈಗಾರಿಕೆಗಳಿಗೆ ಮತ್ತು ಖಾಸಗಿ ಸಂಸ್ಥೆಗಳಿಗೆ ನೋಟಿಸ್ ಹೊರಡಿಸಿ, ಉದ್ಯೋಗ ಮೀಸಲಾತಿ ಕೊಡುವಂತೆ ಆಗ್ರಹಿಸಲಾಗುವುದು,”ಎಂದರು. ಗರುಡಾಚಾರ್ ಪಾಳ್ಯ ವಾರ್ಡ್‌ನ ಕಸಾಪ ಘಟಕದ ಹೊಣೆಗಾರಿಕೆಯನ್ನು ವಹಿಸಿಕೊಂಡ ರಮೇಶ್ ಗೌಡ ಅವರಿಗೆ ಈ ವೇಳೆ ಅಭಿನಂದನೆ ಸಲ್ಲಿಸಲಾಯಿತು.