Advertisement

ಮಹದಾಯಿ ಹೋರಾಟಗಾರರ ಅರೆಬೆತ್ತಲೆ ಮೆರವಣಿಗೆ

03:45 AM Mar 07, 2017 | Harsha Rao |

ನರಗುಂದ:ಜೀವ ಜಲಕ್ಕಾಗಿ ಸುದೀರ್ಘ‌ ಹೋರಾಟ ನಡೆಸಿರುವ ರೈತರು ಹಾಗೂ ಮಹದಾಯಿ ಹೋರಾಟಗಾರರು 600ನೇ ದಿನ ರಾಜ್ಯ, ಕೇಂದ್ರ ಸರ್ಕಾರಗಳ ವಿರುದ್ಧ ಸಿಡಿದೆದ್ದು, ಅರೆಬೆತ್ತಲೆ ಮೆರವಣಿಗೆ ನಡೆಸಿ ಗಂಭೀರ ಎಚ್ಚರಿಕೆ ನೀಡಿದರು.

Advertisement

ಸೋಮವಾರ 600ನೇ ದಿನದ ಹೋರಾಟ ಅಂಗವಾಗಿ ಕರೆ ನೀಡಿದ್ದ ನರಗುಂದ ಬಂದ್‌ ಪ್ರಯುಕ್ತ ಪಟ್ಟಣ ದಂಡಾಪುರ
ಬಡಾವಣೆ ಉಡಚಾ ಪರಮೇಶ್ವರಿ ದೇವಸ್ಥಾನ ಆವರಣದಿಂದ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಯಿತು.

ಪ್ರತಿಭಟನಾಕಾರರು ಅರೆಬೆತ್ತಲೆಯಾಗಿ ಸಾಗಿ, ರೈತನ ಸ್ಥಿತಿಗತಿಯನ್ನು ಬಿಚ್ಚಿಟ್ಟರು. ಸಾರ್ವಜನಿಕರೂ ಹೋರಾಟಕ್ಕೆ
ಕೈಜೋಡಿಸಿದ್ದರು. ಕರಡಿ ಮಜಲು ವಾದ್ಯ ಮೇಳದೊಂದಿಗೆ ಹೊರಟ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಂಚರಿಸಿತು. ಹೆದ್ದಾರಿಯ ಶಿವಾಜಿ ವೃತ್ತದಲ್ಲಿ ಧರಣಿ ನಡೆಸಿದ ರೈತರು, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

2016 ಅ. 17ರಂದು ಹೋರಾಟಕ್ಕೆ ಜೀವನ ಮೀಸಲಿಟ್ಟು ಸನ್ಯಾಸ ದೀಕ್ಷೆ ಸ್ವೀಕರಿಸಿರುವ ರೈತ ಸೇನಾ ಕರ್ನಾಟಕ
ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಸ್ವಾಮೀಜಿ, ಉಪಾಧ್ಯಕ್ಷ ಶಂಕರಪ್ಪ ಅಂಬಲಿ, ರೈತ ಸಂಘ ತಾಲೂಕು ಅಧ್ಯಕ್ಷ ಬಸವರಾಜ ಸಾಬಳೆ ಮತ್ತಿತರರು ಪಾಲ್ಗೊಂಡಿದ್ದರು.

ರಂಗಭೂಮಿ ಕಲಾವಿದೆ ಸುಮತಿ ಶ್ರೀ ನವಲಿ ಹಿರೇಮಠ ನೇತೃತ್ವದಲ್ಲಿ ಮಹಿಳೆಯರೂ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ರೈತರು ಹೆಗಲ ಮೇಲಿದ್ದ ಟವೆಲ್‌ ಬೀಸಿ, ರೈತರ ಶಕ್ತಿ ಪ್ರದರ್ಶಿಸಿದರು.

Advertisement

ನರಗುಂದ ಬಂದ್‌: ನರಗುಂದ ಪಟ್ಟಣದ ಬಹುತೇಕ ವ್ಯಾಪಾರಸ್ಥರು ಅಂಗಡಿ ಮುಂಗಟ್ಟು ಬಂದ್‌ ಮಾಡಿ ಹೋರಾಟಕ್ಕೆ
ಕೈಜೋಡಿಸಿದರು. ಕೆಲವು ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಮಧ್ಯಾಹ್ನದ ವೇಳೆಗೆ ಸಾರಿಗೆ ಬಸ್‌ ಸಂಚಾರ ಸ್ಥಗಿತ
ಮಾಡಲಾಗಿತ್ತು. ಒಟ್ಟಾರೆ ನರಗುಂದ ಬಂದ್‌ ಶಾಂತಿಯುತವಾಗಿ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next