Advertisement
ದಿಲ್ಲಿಯ ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನ (ಕೆಎಸ್‌ಎಸ್‌ಆರ್) ತರಬೇತಿ ವೇಳೆ ಡಿಶುಂ… ಡಿಶುಂ… ನಡೆದಿದ್ದು, ಈ ವೀಡಿಯೊ ವೈರಲ್ ಆಗಿದೆ. ಹೊಡೆದಾಡಿಕೊಂಡವರ ಪ್ರಾಥಮಿಕ ಸದಸ್ಯತ್ವ ರದ್ದುಗೊಳಿಸಿ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ಆದೇಶ ಹೊರಡಿಸಿದೆ. ಈ ಘಟನೆ ಬಗ್ಗೆ ಆ್ಯತ್ಲೆಟಿಕ್ಸ್ ಕಮಿಷನ್‌ಗೆ ತನಿಖೆ ನಡೆಸಿ ವರದಿ ನೀಡುವಂತೆ ರಾಷ್ಟ್ರೀಯ ಆ್ಯತ್ಲೆಟಿಕ್ಸ್ ಒಕ್ಕೂಟ ಸೂಚಿಸಿದೆ.
ರವಿವಾರ ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ಎಂದಿನಂತೆ ತರಬೇತಿ ನಡೆಯುತ್ತಿತ್ತು. ಈ ವೇಳೆ ಬಾಬರ್ ಖಾನ್ ಮತ್ತು ಭಾರತ ಡಬಲ್ ಟ್ರ್ಯಾಪ್ ತಂಡದ ಮಾಜಿ ಶೂಟರ್ ಯೋಗೀಂದರ್ ಪಾಲ್ ಸಿಂಗ್ ನಡುವೆ ವೇಳಾಪಟ್ಟಿಗೆ ಸಂಬಂಧಪಟ್ಟಂತೆ ವಾದ ನಡೆದಿದೆ. ಬಳಿಕ ಇದು ತಾರಕಕ್ಕೇರಿದೆ. ಒಂದು ಹಂತದಲ್ಲಿ ಇಬ್ಬರೂ ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಆಗಿನ್ನೂ ಅಲ್ಲಿ ಶೂಟಿಂಗ್ ತರಬೇತಿ ನಡೆಯುತ್ತಿತ್ತು. ಕೂಡಲೇ ಅಲ್ಲಿಗೆ ಓಡಿ ಬಂದ ಇತರರು ಅವರಿಬ್ಬರನ್ನು ತಡೆದರು. ಪರಸ್ಪರ ಕಾಲಿನಿಂದ ಒದ್ದರು!
ಪ್ರಖ್ಯಾತ ಶೂಟರ್‌ಗಳು ತರಬೇತಿ ಪಡೆಯುವ ರೇಂಜ್‌ನಲ್ಲಿ ಇಬ್ಬರು ಅಸಹ್ಯವಾಗಿ ವರ್ತಿಸಿದರು. ಹೊಡೆದಾಟದ ವೇಳೆ ಪರಸ್ಪರ ಕಾಲಿನಿಂದ ಒದ್ದುಕೊಂಡರು. ಇಬ್ಬರ ವರ್ತನೆ ಅಲ್ಲಿದ್ದವರಿಗೆ ಅಸಹ್ಯ ತರಿಸಿತು. ಈಗ ಶಿಸ್ತು ಸಮಿತಿ ಎದುರು ವಿಚಾರಣೆ ನಡೆಯಲಿದೆ. ಇವರ ವಿರುದ್ಧ ಬಿಗಿ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ.