Advertisement

ವಿಧಾನಸಭೆಯಲ್ಲಿ ಫೈಟರ್ಸ್ “ಫ್ರೆಂಡ್ಸ್‌’ಆದ್ರು

11:52 PM Jul 29, 2019 | Team Udayavani |

ಬೆಂಗಳೂರು: ವಾರದ ಹಿಂದೆ ವಿಧಾನಸಭೆಯಲ್ಲಿ ನಿರ್ಮಾಣವಾಗಿದ್ದ ಬಿಸಿ ವಾತಾವರಣ ಸೋಮವಾರದ ವೇಳೆಗೆ ತಿಳಿ ಹಾಗೂ ಶಾಂತ ಸ್ಥಿತಿಗೆ ಬಂದಿತ್ತು. ಪರಸ್ಪರ ಆರೋಪಗಳಲ್ಲಿ ತೊಡಗಿ “ಫೈಟರ್‌’ಗಳಾಗಿದ್ದ ನಾಯಕರು “ಫ್ರೆಂಡ್ಸ್‌’ಗಳಂತಾಗಿದ್ದರು. ಪ್ರಮುಖವಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸದನಕ್ಕೆ ಆಗಮಿಸಿದ ತಕ್ಷಣ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತಿದ್ದ ಸಿದ್ದರಾಮಯ್ಯ ಅವರತ್ತ ಬಂದು ಕೈ ಕುಲುಕಿದರು. ಸಿದ್ದರಾಮಯ್ಯ ಅವರು ಗುಡ್‌ಲಕ್‌ ಎಂದು ಶುಭ ಹಾರೈಸಿದರು.

Advertisement

ಈ ಸಂದರ್ಭದಲ್ಲಿ ಗ್ಯಾಲರಿಯಲ್ಲಿದ್ದ ಮಾಧ್ಯಮದ ಛಾಯಾಗ್ರಾಹಕರು ಇತ್ತ ತಿರುಗಿ ಕೈ ಕುಲುಕುವಂತೆ ಕೋರಿದರು. ಆಗ, ಛಾಯಾಗ್ರಾಹಕರತ್ತ ತಿರುಗಿ ಇಬ್ಬರೂ ಕೈ ಕುಲುಕಿ ನಕ್ಕರು. ವಿಶ್ವಾಸಮತ ನಿರ್ಣಯ ಮಂಡಿಸಿ ಯಡಿಯೂರಪ್ಪ ಮಾತನಾಡುವಾಗ, ಸಿದ್ದರಾಮಯ್ಯ ಹಾಗೂ ಎಚ್‌.ಡಿ.ಕುಮಾರಸ್ವಾಮಿಯವರು ದ್ವೇಷದ ರಾಜಕಾರಣ ಮಾಡಿಲ್ಲ. ನಾನೂ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದರು.

ಆ ನಂತರ ಮಾತನಾಡಿದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ನಾನು ಮತ್ತು ಯಡಿಯೂರಪ್ಪ ಅವರು ಸಾರ್ವಜನಿಕ ಜೀವನಕ್ಕೆ ಒಟ್ಟಿಗೆ ಒಂದೇ ಅವಧಿಯಲ್ಲಿ ಬಂದವರು. ಅವರು ಹದಿನೈದನೇ ವಿಧಾನಸಭೆಯ ಉಳಿದ ಅವಧಿ ಪೂರ್ತಿ ಮುಖ್ಯಮಂತ್ರಿಯಾಗಿರಲಿ ಎಂಬುದು ನನ್ನ ಆಸೆ. ಆದರೆ, ಎಷ್ಟು ದಿನ ಅಧಿಕಾರದಲ್ಲಿರುತ್ತಾರೋ ಗೊತ್ತಿಲ್ಲ ಎಂದು ಚಟಾಕಿ ಹಾರಿಸಿದರು. ಅಭಿವೃದ್ಧಿ ಕಾರ್ಯಕ್ಕೆ ನಮ್ಮ ಸಹಕಾರ ಇದ್ದೇ ಇರುತ್ತದೆ ಎಂದು ಸಿದ್ದರಾಮಯ್ಯ ಅವರು ಹೇಳಿದರು. ಸರ್ಕಾರ ಹಾದಿ ತಪ್ಪಿದಾಗ ಎಚ್ಚರಿಸಿ ಎಂದು ಯಡಿಯೂರಪ್ಪ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next