ಮುಧೋಳ: ಪ್ರವಾಹ ಪರಿಹಾರ ವಿತರಣೆಯಲ್ಲಿ ನೈಜ ಸಂತ್ರಸ್ತರಿಗೆ ಅನ್ಯಾಯವಾಗಿದೆ ಎಂದು ಡಿಸಿಎಂ ನಿವಾಸದ ಎದುರು ಪ್ರತಿಭಟನೆ ನಡೆಸಲು ಮುಂದಾಗಿದ್ದ ವಕೀಲ ಯಲ್ಲಪ್ಪ ಹೆಗಡೆ ಬಂಧನವನ್ನು ರೈತ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ.
ನಗರದ ಜಿಎಲ್‌ಬಿಸಿ ಪ್ರವಾಸಿ ಮಂದಿರಲ್ಲಿ ನಡೆದ ಸಭೆಯಲ್ಲಿ ಹೋರಾಟಗಾರನ ಮೇಲೆ ಹಲ್ಲೆ ನಡೆಸಿ, ಬಂಧಿಸಿರುವ ಘಟನೆ ಕುರಿತು ಸಮಗ್ರ ತನಿಖೆಯಾಗಬೇಕು. ನ್ಯಾಯ ಕೇಳಲು ಬರುವ ನ್ಯಾಯವಾದಿಯನ್ನೇ ಬಂಧನ ಮಾಡಿರುವುದು ಸರಿಯಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಜಿಪಂ ಉಪಾಧ್ಯಕ್ಷರೂ ಆಗಿರುವ ರೈತ ಮುಖಂಡ ಮುತ್ತಪ್ಪ ಕೋಮಾರ ಮಾತನಾಡಿ, ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡಲಾಗಿದೆ.
ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ನೈಜ ಸಂತ್ರಸ್ತರು ಒಬ್ಬರೂ ಪರಿಹಾರದಿಂದ ವಂಚಿತವಾಗಬಾರದು ಎಂದು ಹೇಳಿದ್ದರು. ಆದರೂ ಅಧಿಕಾರಿಗಳು ತಾರತಮ್ಯ ಮಾಡಿದ್ದಾರೆ. ಸರ್ವೇಯಲ್ಲಿ ಕೈಬಿಟ್ಟಿದ್ದರೆ ಪರಿಹಾರದ ಪಟ್ಟಿಗೆ ಸೇರಿಸುವುದಾಗಿ ಹೇಳಿದ್ದರು. ಆದರೆ, ಅಧಿಕಾರಿಗಳು ಆಗಿನ್ ಬಂದ್ ಆಗಿದೆ ಎಂದು ಹೇಳುತ್ತಿದ್ದಾರೆ. ಕೂಡಲೇ ಲಾಗಿನ್‌ಆರಂಭಿಸಿ ಸರ್ಕಾರ ನೈಜ ಸಂತ್ರಸ್ತರಿಗೆ ನ್ಯಾಯ ಕೊಡಿಸಬೇಕು. ಅಲ್ಲಿಯವರೆಗೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಪೊಲೀಸರು ವಿನಾಕಾರಣ ಹೋರಾಟಗಾರ ಯಲ್ಲಪ್ಪ ಹೆಗಡೆ ವಿರುದ್ಧ ಪ್ರಕರಣ ದಾಖಲಿಸಿ ಹಲ್ಲೆ ಮಾಡಿದ್ದಾರೆ. ಇದರ ಕುರಿತು ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಸಂಗಮೇಶ ಬಾಡಗಿ ಮಾತನಾಡಿ, ನೆರೆ ಪರಿಹಾರದಲ್ಲಿ ವಂಚಿತರ ಪಟ್ಟಿ ನೀಡಿ, ಅದರ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿ ನ್ಯಾಯ ದೊರಕಿಸಿಕೊಡುವುದಾಗಿ ಹೇಳಿದರು. ಡಿವೈಎಸ್ಪಿ ಆರ್.ಕೆ.ಪಾಟೀಲ, ಪಿಎಸ್‌ಐ ಮಲ್ಲಿಕಾರ್ಜುನ ಬಿರಾದಾರ ಹೋರಾಟಗಾರರೊಂದಿಗೆ ಮಾತನಾಡಿದರು.
ಮುಖಂಡರಾದ ಶ್ರೀಶೈಲ ನಾಯಿಕ, ರಾಜು ನದಾಫ್, ತುಕಾರಾಮ ಮ್ಯಾಗಿನಮನಿ, ಗಂಗಾಧರ ಮೇಟಿ, ಹಣಮಂತ ನವಾಬ, ಈರಪ್ಪ ಹಂಚಿನಾಳ, ಶ್ರೀಶೈಲ ಭೂಮಾರ, ಸಿದ್ದು ಬನಾಜನವರ, ಪುಲಕೇಶಿ ನಾಂದ್ರೇಕರ ಮುಂತಾದ ಮುಖಂಡರು ಇದ್ದರು.