Advertisement

ಯುದ್ಧ ವಿಮಾನ ಖರೀದಿ ಸರಿಯಾದ ದಿಕ್ಕಿನಲ್ಲಿ ಹೆಜ್ಜೆ

02:00 AM Jul 06, 2020 | Hari Prasad |

ಭಾರತವು ರಷ್ಯಾದಿಂದ 33 ಅತ್ಯಾಧುನಿಕ ಯುದ್ಧ ವಿಮಾನಗಳ ಖರೀದಿಗೆ ನಿರ್ಧರಿಸಿರುವುದು ವಾಯುಸೇನೆಗೆ ನಿಸ್ಸಂಶಯವಾಗಿಯೂ ಬಲ ತುಂಬಲಿದೆ.

Advertisement

ಅಷ್ಟೇ ಅಲ್ಲದೆ ಗಡಿ ಭಾಗದಲ್ಲಿ ಎದುರಾಗುತ್ತಿರುವ ಸವಾಲುಗಳು ವಿಷಮಿಸಿದರೆ ಅವನ್ನೆಲ್ಲ ಸಕ್ಷಮವಾಗಿ ಎದುರಿಸಲು ಸಹಾಯ ಮಾಡಲಿದೆ.

ಪೂರ್ವ ಲಡಾಖ್‌ನಲ್ಲಿ ಕಳೆದ ಎರಡು ತಿಂಗಳುಗಳಿಂದ ಭಾರ‌ತ ಮತ್ತು ಚೀನ ನಡುವೆ ಸೃಷ್ಟಿಯಾಗಿರುವ ಬಿಕ್ಕಟ್ಟು ಹಾಗೂ ಒಟ್ಟಾರೆ ಘಟನಾಕ್ರಮಗಳನ್ನೆಲ್ಲ ಪರಿಗಣಿಸಿದಾಗ ಭಾರತವು ತನ್ನ ಸೈನ್ಯ ಬಲವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವುದು ಅಗತ್ಯವಾಗಿದೆ.

ಆದಾಗ್ಯೂ ವಾಯುಪಡೆಯನ್ನು ಆಧುನೀಕರಣಗೊಳಿಸುವ ಪ್ರಕ್ರಿಯೆ ಹಿಂದಿನಿಂದಲೂ ಜಾರಿಯಲ್ಲಿದೆ. ಆದರೆ ಕೆಲವು ಸಮಯದಿಂದ ಈ ಪ್ರಕ್ರಿಯೆಗೆ ವೇಗ ನೀಡಲಾಗಿದೆ. ಇದೇ ವೇಳೆಯಲ್ಲೇ ಜುಲೈ ಅಂತ್ಯದ ವೇಳೆಗೆ ಫ್ರಾನ್ಸ್‌ನಿಂದ ಆರು ರಫೇಲ್‌ ಬಹುಪಯೋಗಿ ಯುದ್ಧವಿಮಾನಗಳೂ ಭಾರತಕ್ಕೆ ಬಂದಿಳಿಯಲಿರುವುದು ನಿಸ್ಸಂಶಯವಾಗಿಯೂ ಭಾರತೀಯ ವಾಯುಪಡೆಯ ಮನೋಬಲವನ್ನು ಹೆಚ್ಚಿಸಲಿದೆ.

ಇನ್ನು ರಷ್ಯಾದಿಂದ ಯುದ್ಧ ವಿಮಾನಗಳ ಖರೀದಿ ವಿಚಾರಕ್ಕೆ ಬಂದರೆ ಈ ಹಿಂದೆ ರಕ್ಷಣಾ ಸಚಿವರ ಮಾಸ್ಕೋ ಯಾತ್ರೆಯ ಸಮಯದಲ್ಲಿ ಮಿಗ್‌-29 ಮತ್ತು ಸುಖೋಯ್‌ ವಿಮಾನಗಳ ಖರೀದಿಯ ವಿಚಾರದಲ್ಲಿ ಚರ್ಚೆಗಳು ನಡೆದಿದ್ದವು. ಈ ವಿಷಯಕ್ಕೆ ಸರ್ಕಾರವು ತ್ವರಿತವಾಗಿಯೇ ಅಂತಿಮ ರೂಪ ನೀಡಿದ್ದಷ್ಟೇ ಅಲ್ಲದೇ ಗುರುವಾರ ರಕ್ಷಣಾ ಖರೀದಿ ಸಮಿತಿಯು ಯುದ್ಧವಿಮಾನಗಳ ಖರೀದಿಗೆ ಒಪ್ಪಿಗೆ ನೀಡಿದೆ.

Advertisement

ಚೀನದೊಂದಿಗೆ ಹೆಚ್ಚುತ್ತಿರುವ ಬಿಕ್ಕಟ್ಟಿನ ಸಮಯದಲ್ಲೇ ಈ ಸುದ್ದಿಗಳನ್ನು ಗಮನಿಸಿದಾಗ ಭಾರತೀಯ ಸೇನೆಯು ಸಾಮರಿಕ ರೂಪದಲ್ಲಿ ಮಹತ್ವಪೂರ್ಣವಾದ ಪ್ರದೇಶಗಳಲ್ಲಿ ಪ್ರಬಲ ರಣನೀತಿಯ ಮೇಲೆ ಕೆಲಸ ಮಾಡುತ್ತಿದೆ ಎನ್ನುವ ಸೂಚನೆ ಸಿಗುತ್ತಿದೆ. ಹೊಸ ಒಪ್ಪಂದದ ಪ್ರಕಾರ ಭಾರತವು ರಷ್ಯಾದಿಂದ 21 ಮಿಗ್‌-29 ಯುದ್ಧವಿಮಾನಗಳು 12 ಸುಖೋಯ್‌ ಎಂಕೆಐ ಫೈಟರ್‌ಜೆಟ್‌ಗಳನ್ನು ಖರೀದಿಸಲಿದೆ.

ಮಿಗ್‌-29 ರಷ್ಯಾದಿಂದಲೇ ಬರಲಿದ್ದರೆ ಸುಖೋಯ್‌ ವಿಮಾನಗಳು ಹಿಂದೂಸ್ತಾನ ಏರೋನಾಟಿಕಲ್ಸ್‌ ಲಿಮಿಟೆಡ್‌ನಲ್ಲೇ ತಯಾರಿಯಾಗಲಿವೆ. ಸುಖೋಯ್‌ ವಿಮಾನ ನಿರ್ಮಾಣಕ್ಕಾಗಿ ತಂತ್ರಜ್ಞಾನ ಸಹಯೋಗದ ವಿಚಾರವಾಗಿ ಭಾರತ ಮತ್ತು ರಷ್ಯಾದ ನಡುವೆ ಒಪ್ಪಂದವಿದೆ. ಇದಷ್ಟೇ ಅಲ್ಲದೇ ಹಳೆಯ ಮಿಗ್‌ ವಿಮಾನಗಳನ್ನು ಆಧುನಿಕಗೊಳಿಸಲಾಗುತ್ತದೆ ಎಂದು ವರದಿಗಳು ಹೇಳುತ್ತಿವೆ.

ಹಾಗೆಂದು ಈಗ ಚೀನ ಮತ್ತು ಭಾರತದ ನಡುವೆ ಗಡಿಭಾಗದಲ್ಲಿ ಯುದ್ಧ ನಡೆಯುತ್ತದೆ ಎಂದೇನೂ ಅರ್ಥವಲ್ಲ. ಆದರೆ ಚೀನದ ಕುತಂತ್ರದ ಅರಿವಿರುವ ಭಾರತವು ಗಡಿ ಭಾಗದಲ್ಲಿ ಬಲಿಷ್ಠವಾಗಿದ್ದಷ್ಟೂ ಡ್ರ್ಯಾಗನ್‌ ರಾಷ್ಟ್ರದ ಉದ್ಧಟತನಗಳನ್ನು ಅದರ ವಿಸ್ತರಣಾವಾದಿ ಅತ್ಯಾಸೆಗಳನ್ನು ಹತ್ತಿಕ್ಕಲು ಸಾಧ್ಯವಾಗುತ್ತದೆ. ಇನ್ನೊಂದೆಡೆ ಭಾರತಕ್ಕೆ ನಿತ್ಯ ಒಂದಲ್ಲ ಒಂದು ತೊಂದರೆಯುಂಟುಮಾಡಲು ಪ್ರಯತ್ನಿಸುವ ಪಾಕಿಸ್ಥಾನಕ್ಕೂ ಇದರಿಂದ ಪ್ರಬಲ ಸಂದೇಶ ರವಾನೆಯಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next