Advertisement

Border Dispute: ಭಾರತದ ಗಡಿಯಲ್ಲಿ ಚೀನಾ ಹೊಸ ವಸಾಹತು ನಿರ್ಮಾಣ

01:35 AM Oct 15, 2024 | Team Udayavani |

ನವದೆಹಲಿ: ಭಾರತ ಮತ್ತು ಚೀನಾ ನಡುವೆ ಸಂಘರ್ಷದ ಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನಗಳು ನಡೆಯುತ್ತಿರುವಾಗಲೇ, ಗಡಿಯಲ್ಲಿರುವ ಪ್ಯಾಂಗಾಂಗ್‌ ಲೇಕ್‌ ಬಳಿ ಚೀನಾ ಹೊಸದಾಗಿ ಸೇನಾ ಬಳಕೆಗೆ ವಸಾಹತು ನಿರ್ಮಾಣ ಮಾಡುತ್ತಿದೆ.

Advertisement

2020ರಲ್ಲಿ ಚೀನಾ ಮತ್ತು ಭಾರತ ನಡುವೆ ಸಂಭವಿಸಿದ ಗಾಲ್ವಾನ್‌ ಸಂಘರ್ಷದ ಸ್ಥಳದಿಂದ 38 ಕಿ.ಮೀ. ದೂರದಲ್ಲಿ ಈ ವಸಾಹತು ನಿರ್ಮಾಣವಾಗುತ್ತಿದೆ. ಪ್ಯಾಂಗಾಂಗ್‌ ತ್ಸೋ ಲೇಕ್‌ ಜಗತ್ತಿನಲ್ಲೇ ಎತ್ತರ ಪ್ರದೇಶದಲ್ಲಿರುವ ಉಪ್ಪು ನೀರಿನ ಸರೋವರವಾಗಿದೆ. ಚೀನಾ ವಸಾಹತು ನಿರ್ಮಾಣ ಚಿತ್ರಗಳನ್ನು ಉಪಗ್ರಹದ ಮೂಲಕ ಸೆರೆ ಹಿಡಿಯಲಾಗಿದೆ.

ಸುಮಾರು 17 ಎಕರೆಯಲ್ಲಿ 100ಕ್ಕೂ ಹೆಚ್ಚು ಕಟ್ಟಡಗಳನ್ನು ಕ್ಷಿಪ್ರಗತಿಯಲ್ಲಿ ನಿರ್ಮಿಸಲಾಗುತ್ತಿದೆ. ಈ ವಸಾಹುತು ಮೂಲೆಯಲ್ಲಿ ಸುಮಾರು 150 ಮೀ. ಉದ್ದದ ಆಯತಾಕಾರದ ಸ್ಟ್ರಿಪ್‌ ಕೂಡ ನಿರ್ಮಾಣ ಮಾಡಲಾಗುತ್ತಿದ್ದು, ಭವಿಷ್ಯದಲ್ಲಿ ಹೆಲಿಕಾಪ್ಟರ್‌ಗೆ ಬಳಕೆಯಾಗಬಹುದು ಎಂದು ತಕ್ಷಶಿಲಾ ಇನ್‌ಸ್ಟಿಟ್ಯೂಷನ್‌ನಲ್ಲಿ ಪ್ರೊಫೆಸರ್‌ ಆಗಿರುವ ವೈ ನಿತ್ಯಾನಂದಂ ಹೇಳಿದ್ದಾರೆ.

ಈ ವಸಾಹತು ನಿರ್ಮಾಣವನ್ನು 2024ರ ಏಪ್ರಿಲ್‌ನಲ್ಲಿ ಶುರು ಮಾಡಲಾಗಿದ್ದು, ಸರೋವರದ ಕಡೆಗೆ ಇಳಿಜಾರು ಇರುವ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಆಡಳಿತಾತ್ಮಕ ಮತ್ತು ಕಾರ್ಯಾಚರಣೆಗಳಿಗಾಗಿ 2 ಭಾಗಗಳಲ್ಲಿ ನಿರ್ಮಾಣ ಮಾಡಲಾಗಿದೆ ಎನ್ನುತ್ತವೆ ಸೇನಾ ಮೂಲಗಳು. ವಸತಿಗಾಗಿ ನಿರ್ಮಾಣ ಮಾಡಲಾಗುತ್ತಿರುವ ಕಟ್ಟಡಗಳು ಬಹುತೇಕ ಪೂರ್ಣಗೊಳ್ಳುವ ಹಂತವನ್ನು ತಲುಪಿವೆ ಎನ್ನಲಾಗುತ್ತಿದೆ.

ತೈವಾನ್‌ ದ್ವೀಪ ಸುತ್ತುವರಿದು ಚೀನಾ ಸೇನೆ ಸಮರಾಭ್ಯಾಸ
ತೈಪೆ: ಚೀನಾದ ರಕ್ಷಣಾ ಪಡೆಗಳು ಸೋಮವಾರ ಬೆಳಗ್ಗೆ 125ಕ್ಕೂ ಹೆಚ್ಚು ಯುದ್ಧ ವಿಮಾನಗಳು, ಯುದ್ಧ ನೌಕೆಗಳೊಂದಿಗೆ ತೈವಾನ್‌ ದ್ವೀಪವನ್ನು ಸುತ್ತುವರಿದು ಸಮರಾಭ್ಯಾಸ ನಡೆಸಿದೆ. ದಾಖಲೆ ಮಟ್ಟದ ಯುದ್ಧ ವಿಮಾನಗಳು, ಯುದ್ಧ ನೌಕೆಗಳ ಮೂಲಕ ತೈವಾನ್‌ನ ಪ್ರಮುಖ ಬಂದರುಗಳನ್ನು ಚೀನಾ ಮುಚ್ಚಿ ತೈವಾನ್‌ಗೆ ಎಚ್ಚರಿಕೆ ನೀಡಿದೆ.

Advertisement

ತಾವು ಚೀನಾದ ಭಾಗ ಎಂಬುದನ್ನು ಒಪ್ಪಿಕೊಳ್ಳದೇ, ಪ್ರತ್ಯೇಕತಾವಾದ ಅನುಸರಿಸಲು ಮುಂದಾದ ತೈವಾನ್‌ಗೆ ಎಚ್ಚರಿಕೆ ನೀಡಲು ಈ ಸಮರಾಭ್ಯಾಸ ನಡೆಸಲಾಗಿದೆ ಎಂದು ಚೀನಾ ಸ್ಪಷ್ಟಪಡಿಸಿದೆ. 4 ದಿನಗಳ ಹಿಂದಷ್ಟೇ ತೈವಾನ್‌ ಅಧ್ಯಕ್ಷ ಲಾಯ್‌ ಚಿಂಗ್‌-ಟೆ “ತೈವಾನ್‌ ಅನ್ನು ಪ್ರತಿನಿಧಿಸಲು ಚೀನಾಗೆ ಹಕ್ಕಿಲ್ಲ’ ಎಂದಿದ್ದರು. ಈ ಹೇಳಿಕೆಗೆ ಇದು ಚೀನಾದ ಪ್ರತ್ಯುತ್ತರ ಎಂದು ಸ್ವತಃ ಚೀನಾ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next