Advertisement

ತುಳು ಭಾಷೆ ಸಾಂವಿಧಾನಿಕ ಸ್ಥಾನಕ್ಕೆ ಹೋರಾಡಿ

06:20 AM Dec 18, 2017 | Team Udayavani |

ಬೆಂಗಳೂರು : ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು ಭಾಷೆಯನ್ನು ಕೇಂದ್ರ ಸರ್ಕಾರ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವವರೆಗೂ ಶಾಂತಿಯುತ ಹೋರಾಟ ನಿರಂತರವಾಗಿರಬೇಕು ಎಂದು ರಾಜ್ಯಪಾಲ ವಜುಭಾಯಿ ವಾಲಾ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ತುಳುಕೂಟ ಬೆಂಗಳೂರು ವತಿಯಿಂದ ಭಾನುವಾರ ವಿಜಯನಗರದ ಬಂಟರ ಸಂಘದಲ್ಲಿ ಹಮ್ಮಿಕೊಂಡಿದ್ದ ತುಳುನಾಡ ಉತ್ಸವ ಮತ್ತು ತುಳು ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನ ಸುಗ್ಗಿದ ಐಸಿರ ಉದ್ಘಾಟಿಸಿ ಮಾತನಾಡದ ಅವರು, ಪ್ರತ್ಯೇಕ ಭಾಷೆ ಅಥವಾ ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಇಟ್ಟಿಲ್ಲ. ಬದಲಾಗಿ ಪಂಚದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳುವನ್ನು ಸಂವಿಧಾನ 8ನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಇದನ್ನು ಕೂಲಂಕಷವಾಗಿ ಪರಿಶೀಲಿಸಿ, 8ನೇ ಪರಿಚ್ಛೇದಕ್ಕೆ ಸೇರಿಸುವಂತಾಗಬೇಕು ಎಂದರು.

ಕನ್ನಡ, ತಮಿಳು, ತೆಲುಗು ಹಾಗೂ ಮಲೆಯಾಳಂನಂತೆ ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ಕುರಿತ ಮನವಿಯನ್ನು ಸಂಘಟಕರು ತಮಗೆ ಸಲ್ಲಿಸಿದರೆ, ಅದನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗುತ್ತದೆ. ಚುನಾವಣೆ ಸಂದರ್ಭದಲ್ಲಿ ಯಾವುದೇ ಮನವಿ ನೀಡಿದರೂ, ರಾಜಕಾರಣಿಗಳು ವೋಟಿಗಾಗಿಯಾದರೂ ಅದನ್ನು ಈಡೇರಿಸುತ್ತಾರೆ. 2018ರಲ್ಲಿ ಕರ್ನಾಟಕದ ಚುನಾವಣೆ ಹಾಗೂ 2019ರಲ್ಲಿ ಕೇಂದ್ರದ ಚುನಾವಣೆ ಬರಲಿದೆ. ಹೀಗಾಗಿ ಮನವಿ ಸಲ್ಲಿಸಲು ಇದು ಸಕಾಲ ಎಂಬ ಸಲಹೆ ನೀಡಿದರು.

ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವುದು ರಾಜಕೀಯ ಪ್ರಶ್ನೆಯಲ್ಲ. ಇದು ರಾಷ್ಟ್ರೀಯ ವಿಚಾರ. ತುಳು ಭಾಷೆಯ ಉಳಿವಿಗೆ ಹಾಗೂ ತುಳು ಸಂಸ್ಕೃತಿಯ ಅಭಿವೃದ್ಧಿಗೆ ಮತ್ತು ರಾಷ್ಟ್ರದ ಬಲವರ್ಧನೆಗೆ ಇದು ಅವಶ್ಯಕ ಎಂದರು.

ಕಂಬಳ ಸಂಸ್ಕೃತಿ ಮುಂದುವರಿಯಲಿ :
ತುಳುನಾಡಿನ ಆಚರಣೆಗಳು ವಿಭಿನ್ನವಾಗಿದೆ. ಭಾರತ ಎಂಬ ಮಹಾಸಾಗರದಲ್ಲಿ ಎಲ್ಲಾ ಭಾಷೆಗಳು ಒಂದಾಗಿ ಸಾಗಬೇಕು. ತುಳುನಾಡಿನ ಸಾಂಸ್ಕೃತಿಕ ಕ್ರೀಡೆಯಾಗಿರುವ ಕಂಬಳ ನಿರಂತರವಾಗಿ ನಡೆಯಬೇಕು. ಕಂಬಳದಲ್ಲಿ ಕೋಣಗಳನ್ನು ಓಡಿಸುತ್ತಾರೇ ವಿನಃ ನೋವು ಮಾಡುವುದಿಲ್ಲ. ನಮ್ಮೊಳಗಿನ ಸಾಮರ್ಥ್ಯ ಹೆಚ್ಚುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಎಲ್ಲೆಲ್ಲೂ ತುಳುಭಾಷಿಕರು:
ಗುಜರಾತ್‌ನಲ್ಲಿ ವ್ಯಾಪಾರಿಗಳು ಹೆಚ್ಚಿದ್ದಾರೆ. ವ್ಯಾಪಾರ ವಿಸ್ತರಣೆಗೆ ದೇಶ ವಿದೇಶಕ್ಕೆ ಹೋಗುತ್ತಾರೆ. ಅತ್ಯಂತ ಬುದ್ಧಿಶಾಲಿಗಳಾಗಿರುವ ತುಳುಭಾಷಿಕರು ಬ್ಯಾಂಕಿಂಗ್‌, ವಿಜಾನn, ತಂತ್ರಜ್ಞಾನ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಮುಂದಿದ್ದಾರೆ ಎಂದು ಬಣ್ಣಿಸಿದರು.

ತುಳುಸಾಹಿತ್ಯ ಬೆಳೆಯಲಿ:
ಕರ್ನಾಟಕ ಲೋಕಾಯುಕ್ತ ನ್ಯಾ.ಪಿ.ವಿಶ್ವನಾಥ ಶೆಟ್ಟಿ ಮಾತನಾಡಿ, ಪಂಚದ್ರಾವಿಡ ಭಾಷೆಗಳಲ್ಲಿ ನಾಲ್ಕಕ್ಕೆ ಸಂವಿಧಾನ ಸ್ಥಾನಮಾನ ಸಿಕ್ಕಿದೆ. ತುಳು ಭಾಷೆಗೂ ಸಂವಿಧಾನ ಸ್ಥಾನಮಾನ ಸಿಗಬೇಕು. ತುಳು ಭಾಷೆಗೆ ಲಿಪಿ ಇರುವುದು ಸಾಬೀತಾಗಿದೆ. ಹೀಗಾಗಿ ತುಳು ಭಾಷೆಯ ಸಾಹಿತ್ಯ ಕೃಷಿ ಹೆಚ್ಚಾಗಬೇಕು. ತುಳು ಬಲ್ಲ ಕನ್ನಡ ಸಾಹಿತಿಗಳು ತುಳುವಿನಲ್ಲಿ ಬರೆಯಲು ಅಭ್ಯಾಸ ಮಾಡಬೇಕು. ತುಳು ಭಾಷೆಯ ಅಧ್ಯಯನ ಹೆಚ್ಚಾಗಬೇಕು ಎಂದು ಹೇಳಿದರು.

ಜಗತ್ತಿನ ಎಲ್ಲಾ ಕಡೆಗಳಲ್ಲೂ  ತುಳುನಾಡಿನವರಿದ್ದಾರೆ. ಆದರೆ, ಐಎಎಸ್‌ ಮತ್ತು ಐಪಿಎಸ್‌ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರ ಸಂಖ್ಯೆ ಕಡಿಮೆ ಇದೆ. ತುಳುನಾಡಿನವರು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದರು.

ವಸತಿ ಸಚಿವ ಎಂ. ಕೃಷ್ಣಪ್ಪ, ಮುಂಬೈ ಬಂಟರ ಸಂಘದ ಮಾಜಿ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಪತ್ರಕರ್ತ ಸದಾಶಿವ ಶೆಣೈ, ಅಖೀಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ್‌ ದೇವಾಡಿಗ, ತುಳುಕೂಟ ಬೆಂಗಳೂರು ಇದರ ಅಧ್ಯಕ್ಷ ಕೆ.ಜಯರಾಮ ಸೂಡ, ಸ್ವಾಗತ ಸಮಿತಿ ಗೌರವಾಧ್ಯಕ್ಷ ಕೆ.ವಿ.ರಾಜೇಂದ್ರ ಕುಮಾರ್‌, ಪ್ರಧಾನ ಕಾರ್ಯದರ್ಶಿ ಸುಂದರರಾಜ್‌ ರೈ ಮೊದಲಾದವರು ಉಪಸ್ಥಿತರಿದ್ದರು.

ತುಳುಕೂಟಕ್ಕೆ ಜಮೀನಿನ ಭರವಸೆ:
ಬಂಟರ ಸಂಘ, ದೇವಾಡಿಗರ ಸಂಘ ಸೇರಿದಂತೆ ವಿವಿಧ ಸಮುದಾಯದವರು ಜಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ವಸತಿ ಇಲಾಖೆಯಿಂದ ಅರ್ಜಿ ಸ್ವೀಕರಿಸುವ ದಿನಾಂಕವನ್ನು ಡಿ.15ರ ತನಕವೂ ವಿಸ್ತರಿಸಿದ್ದೆವು. ಬೆಂಗಳೂರು ತುಳು ಕೂಟದಿಂದ ಅರ್ಜಿ ಸಲ್ಲಿಸಿಲ್ಲ. ಸಂಘಟನೆಗಳಿಗೆ  ಜಮೀನು ನೀಡಲು ಸಿಎ ಸೈಟ್‌ ಖಾಲಿ ಇದೆ. ಎರಡು ಎಕರೆ ವರೆಗೂ ಜಮೀನು ಮಂಜೂರು ಮಾಡಲಾಗುತ್ತದೆ. ತುಳು ಕೂಟದಿಂದ ಮನವಿ ನೀಡಿದರೆ ಸೂರ್ಯನಗರ ಅಥವಾ ಕೆಂಗೇರಿಯಲ್ಲಿ ಜಮೀನು ಒದಗಿಸುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಜತೆಗೆ ಭವನ ನಿರ್ಮಾಣಕ್ಕೂ ಬೇಕಾದ ಸಹಕಾರ ನೀಡಲಾಗುತ್ತದೆ ಎಂದು ವಸತಿ ಸಚಿವ ಎಂ.ಕೃಷ್ಣಪ್ಪ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next