Advertisement
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ, ಅರಣ್ಯ ಹಕ್ಕು ಸಮಿತಿಗಳ ಜಿಲ್ಲಾ ಒಕ್ಕೂಟ, ಬಗರ್ ಹುಕುಂ ಸಾಗುವಳಿದಾರರ ಹೋರಾಟ ಸಮಿತಿ, ಕರ್ನಾಟಕ ಆದಿವಾಸಿ ಒಕ್ಕೂಟದ ವತಿಯಿಂದ ಭೂಮಿ ಹಕ್ಕಿಗಾಗಿ ಭಾನುವಾರದಿಂದ ಆರಂಭಿಸಿರುವ ಧರಣಿ ಸತ್ಯಾಗ್ರಹದ ನೇತೃತ್ವ ವಹಿಸಿ ಅವರು ಮಾತನಾಡಿದರು.
Related Articles
Advertisement
ಭೂಮಿ ಸಾಗುವಳಿ ಮಾಡುತ್ತಿರುವವರನ್ನು ಒಕ್ಕಲೆಬ್ಬಿಸುವುದನ್ನು ನಿಲ್ಲಿಸಬೇಕು. ಹಿರಿಯೂರು, ಚಳ್ಳಕೆರೆ, ಹೊಳಲ್ಕೆರೆ, ಹೊಸದುರ್ಗ, ಚಿತ್ರದುರ್ಗದಲ್ಲಿ ಅರ್ಜಿಗಳನ್ನು ಪರಿಶೀಲಿಸದೆ ಬಾಕಿ ಉಳಿಸಿಕೊಳ್ಳಲಾಗಿದೆ. ಸರ್ಕಾರ ಉನ್ನತ ಮಟ್ಟದ ಸಮಿತಿ ಸಭೆ ಕರೆದು ಸಮಸ್ಯೆ ಬಗೆಹರಿಸಲು ತುರ್ತು ಕ್ರಮ ಕೈಗೊಳ್ಳಬೇಕು.
ಜಿಲ್ಲೆಯ ಆರು ತಾಲೂಕುಗಳಲ್ಲಿ 1990-91, 1998-99ನೇ ಸಾಲಿನಲ್ಲಿ 1,12, 964 ಅರ್ಜಿಗಳನ್ನು ಬಗರ್‌ಹುಕುಂ ಸಮಿತಿಗೆ ಸಲ್ಲಿಸಲಾಗಿದೆ. ಎಲ್ಲ ಅರ್ಹತೆ ಇರುವ 53,322 ಅರ್ಜಿಗಳನ್ನು ಪರಿಶೀಲನೆ ಮಾಡದೆ 28 ವರ್ಷಗಳಿಂದ ಸರ್ಕಾರ ಬಾಕಿ ಉಳಿಸಿಕೊಂಡಿದೆ. ತುರ್ತು ಕ್ರಮ ಜರುಗಿಸಿ ಸಾಗುವಳಿ ಚೀಟಿ ವಿತರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಬೇಕು. ಅರಣ್ಯ ಹಕ್ಕು ಕಾಯ್ದೆಯಡಿ ಜಿಲ್ಲೆಯಲ್ಲಿ 5573 ಅರ್ಜಿಗಳನ್ನು ಸಲ್ಲಿಸಿದ್ದು, ಕೇವಲ 347 ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿದೆ. ಬಾಕಿ ಉಳಿಸಿಕೊಂಡಿರುವ 5526 ಅರ್ಜಿಗಳ ಪರಿಶೀಲನೆ ಪೂರ್ಣಗೊಳಿಸಿ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು.
ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ನುಲೇನೂರು ಶಂಕರಪ್ಪ ಮಾತನಾಡಿ, ಭೂಮಿ ಮತ್ತು ವಸತಿ ಹಕ್ಕುವಂಚಿತರಿಗೆ ಸಾಗುವಳಿ ಚೀಟಿಗಳನ್ನು ನೀಡಬೇಕಾದರೆ ಮೊದಲು ಕಾನೂನು ತೊಡಕುಗಳನ್ನು ನಿವಾರಿಸಬೇಕು. ಒಡೆತನದ ಹಕ್ಕು ನೀಡುವ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಒತ್ತಾಯಿಸಿದರು. ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಸದಸ್ಯ ಶಿವಕುಮಾರ್ ಗುಳಗಟ್ಟ, ಎಚ್.ಎನ್. ಶಿವಮೂರ್ತಿ,
ನರಸಿಂಹಮೂರ್ತಿ, ಕರಿಯಪ್ಪ ಗುಡಿಮನಿ, ಶಫಿವುಲ್ಲಾ, ಸೊಲ್ಲಾಪುರ ರಂಗಣ್ಣ, ಸೂರಣ್ಣ, ಕೆ.ಕೆ.ಎನ್.ಎಸ್.ಎಸ್ ಜಿಲ್ಲಾ ಸಮಿತಿ ಅಧ್ಯಕ್ಷ ಗಣೇಶ್ ಮೊದಲಾದವರು ಧರಣಿಯಲ್ಲಿ ಪಾಲ್ಗೊಂಡಿದ್ದರು. ಬಗರ್ ಹುಕುಂ ಸಾಗುವಳಿದಾರರ ಹೋರಾಟ ಸಮಿತಿ ಸದಸ್ಯ ಮುಸ್ಟೂರಪ್ಪ ನಿಧನಕ್ಕೆ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಪ್ರಕರಣ ವಾಪಸ್ ಪಡೆಯಲು ಒತ್ತಾಯ ಜಿಲ್ಲೆಯಲ್ಲಿ ಅರಣ್ಯ ಮತ್ತು ಕಂದಾಯ ಭೂಮಿ ಸಾಗುವಳಿದಾರರ ಸ್ವಾಧೀನದಲ್ಲಿರುವ ಭೂಮಿಯನ್ನು ಗಣಿ ಮತ್ತು ಇನ್ನಿತರೆ ವ್ಯವಸಾಯೇತರ ಉದ್ದೇಶಗಳಿಗಾಗಿ ಮಂಜೂರು ಮಾಡುವುದನ್ನು ತಕ್ಷಣ ನಿಲ್ಲಿಸಬೇಕು. ಜಿಲ್ಲೆಯಲ್ಲಿ 94 ಸಿ ಮತ್ತು 94 ಸಿಸಿ ಅಡಿ ವಸತಿ ಹಕ್ಕಿಗಾಗಿ ಕಳೆದ ಸೆ. 16ರವರೆಗೆ ಸಲ್ಲಿಸಿರುವ ಎಲ್ಲ ಫಲಾನುಭವಿಗಳ ಅರ್ಜಿಗಳನ್ನು ಪರಿಶೀಲಿಸಿ ಹಕ್ಕುಪತ್ರ ವಿತರಿಸಬೇಕು. ಜಿಲ್ಲೆಯಲ್ಲಿ ಐದು ಎಕರೆಗಿಂತ ಕಡಿಮೆ ಸಾಗುವಳಿ ಮಾಡಿಕೊಂಡಿರುವ ಬಡ ಸಾಗುವಳಿದಾರರ ವಿರುದ್ಧ ಭೂಕಬಳಿಕೆ ನಿಷೇಧ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳನ್ನು ರಾಜ್ಯ ಸರ್ಕಾರದ ಇತ್ತೀಚಿನ ತೀರ್ಮಾನದಂತೆ ಮರುಪರಿಶೀಲಿಸಿ ಹಿಂದಕ್ಕೆ ಪಡೆಯಬೇಕು ಮತ್ತು ಹೊಸದಾಗಿ ಪ್ರಕರಣಗಳನ್ನು ದಾಖಲಿಸಬಾರದು ಎಂದು ಪ್ರಜಾಶಕ್ತಿ ಬೋರಯ್ಯ ಮನವಿ ಮಾಡಿದರು.