ಸಾಗರ: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ದಿನಬಳಕೆ ವಸ್ತುಗಳ ದರವನ್ನು ಹೆಚ್ಚಿಸಿರುವ ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಗುರುವಾರ ಕಾಂಗ್ರೆಸ್ ವತಿಯಿಂದ ಸಿಲಿಂಡರ್‌ಗೆ ಹಾರ ಹಾಕಿ ಪೂಜೆ ಮಾಡಿ, ಜಾಗಟೆ ಬಾರಿಸುವ ಮೂಲಕ ಸಾಗರ ಹೊಟೇಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕೆಪಿಸಿಸಿ ಕಾರ್ಯದರ್ಶಿ ಡಾ| ರಾಜನಂದಿನಿ, ಕೇಂದ್ರ ಸರ್ಕಾರದ ಬೆಲೆಏರಿಕೆ ನೀತಿಯಿಂದಾಗಿ ಜನಸಾಮಾನ್ಯರು ಬದುಕು ನಡೆಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಆರೇಳು ದಿನಗಳಲ್ಲಿ ಪೆಟ್ರೋಲ್, ಡಿಸೇಲ್ ದರ ಏಳೆಂಟು ರೂಪಾಯಿ ಹೆಚ್ಚಿದೆ. ಅಡುಗೆ ಅನಿಲ ಸಿಲಿಂಡರ್ ದರ ಸಾವಿರ ರೂಪಾಯಿ ಸಮೀಪಿಸುತ್ತಿದೆ. ನರೇಂದ್ರ ಮೋದಿಯವರದ್ದು ಬಂಡವಾಳಶಾಹಿಗಳ ಪರವಾದ ಸರ್ಕಾರ ಎನ್ನುವುದು ಸಾಬೀತಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್. ಜಯಂತ್ ಮಾತನಾಡಿ, ಈ ದೇಶದಲ್ಲಿ ಬೆಲೆ ಏರಿಕೆ ಮಾತ್ರವಲ್ಲದೆ ಜನರು ಬದುಕಲು ಸಾಧ್ಯವಾಗದಂತೆ ಕೋಮುಭಾವನೆಯನ್ನು ಕೆರಳಿಸುವ ಕೆಲಸವನ್ನು ಬಿಜೆಪಿ ಸರ್ಕಾರ ಕೇಂದ್ರ ಮತ್ತು ರಾಜ್ಯದಲ್ಲಿ ಮಾಡುತ್ತಿದೆ. ದೇಶವನ್ನು ಸಂಪೂರ್ಣ ಹಾಳು ಮಾಡಬೇಕಾದರೆ ಎರಡು ಕೋಮುಗಳ ನಡುವೆ ಕಿಚ್ಚು ಹೊತ್ತಿಸಿದರೆ ಸಾಕು ಎಂದು ಹಿರಿಯರು ಹೇಳಿದ್ದಾರೆ. ಬಿಜೆಪಿ ಸರ್ಕಾರ ಜನರ ಭಾವನೆಗಳ ಜೊತೆ ಚೆಲ್ಲಾಟವಾಡುತ್ತಿದೆ. ಕಾಂಗ್ರೆಸ್ ಇಂತಹದ್ದನ್ನು ಸಹಿಸಿಕೊಳ್ಳುವುದಿಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ವತಿಯಿಂದ ಬಿಜೆಪಿ ಸರ್ಕಾರ ಪತನವಾಗುವವರೆಗೂ ಹೋರಾಟ ನಡೆಸಲಾಗುತ್ತದೆ ಎಂದರು.
ತಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ತೆರಿಗೆ ಹೆಚ್ಚಳ ಮಾಡಿದ್ದೇ ನರೇಂದ್ರ ಮೋದಿ ಸರ್ಕಾರದ ಹೆಗ್ಗಳಿಕೆಯಾಗಿದೆ. ಪದೇಪದೇ ಇಂಧನ, ಅಡುಗೆ ಅನಿಲ ಸಿಲಿಂಡರ್ ದರ ಹೆಚ್ಚಳ ಮಾಡುವ ಮೂಲಕ ಕೇಂದ್ರ ಸರ್ಕಾರ ಜನಸಾಮಾನ್ಯರ ಬದುಕಿಗೆ ಬರೆ ಹಾಕುವ ಕೆಲಸ ಮಾಡುತ್ತಿದೆ ಎಂದರು. ಪ್ರತಿಭಟನೆಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಐ.ಎನ್. ಸುರೇಶಬಾಬು, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರಫೀಕ್ ಬಾಬಾಜಾನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಮಧುಮಾಲತಿ, ಸುಮಂಗಲ ಇನ್ನಿತರರು ಇದ್ದರು.