Advertisement
ದಾವಣಗೆರೆ ಪ್ರಾದೇಶಿಕ ನಿರ್ದೇಶಕರಾಗಿ ಕೆಲಸ ನಿರ್ವಹಿಸುತ್ತಿದ್ದ ಡಾ. ಸುಧಾಕರ್ ಹೊಸಹಳ್ಳಿ, ಮಂಡ್ಯ ಪ್ರಾದೇಶಿಕ ಕೇಂದ್ರದ ಡಾ. ನಂದಕುಮಾರಿ ಸೇರಿದಂತೆ 8 ಮಂದಿ ಪ್ರಾದೇಶಿಕ ನಿರ್ದೇಶಕರನ್ನು ಕಳೆದ ಮೇ 27ರಂದು ವರ್ಗಾವಣೆಗೊಳಿಸಿ ಮುಕ್ತ ವಿ.ವಿ. ಕುಲಸಚಿವರು ಆದೇಶ ಹೊರಡಿಸಿದ್ದರು.
Related Articles
Advertisement
ಮಾತಿನ ಚಕಮಕಿ: ಮುಕ್ತ ವಿವಿ ತಾಂತ್ರಿಕ ತೊಂದರೆಯಿಂದ ಇಬ್ಬರು ನಿರ್ದೇಶಕರೂ ಗೊಂದಲದಲ್ಲಿ ಸಿಲುಕಿದ್ದಾರೆ. ಡಾ. ನಂದಕುಮಾರಿ ಅವರು ವರ್ಗಾವಣೆ ಆದೇಶ ರದ್ದಾಗಿರುವುದರಿಂದ ಇಲ್ಲೇ ಕೆಲಸ ಮುಂದುವರಿಸುವುದೇ, ಡಾ. ಸುಧಾಕರ್ ಹೊಸಹಳ್ಳಿ ಅವರು ಮಂಡ್ಯ ಪ್ರಾದೇಶಿಕ ಕಚೇರಿಯಲ್ಲಿ ವರದಿ ಮಾಡಿಕೊಂಡಿರುವ ಕಾರಣ ಅವರನ್ನು ಬಿಡುಗಡೆಗೊಳಿಸಿ ದಾವಣಗೆರೆ ಪ್ರಾದೇಶಿಕ ಕಚೇರಿಗೆ ತೆರಳಿ ಕರ್ತವ್ಯ ನಿರ್ವಹಿಸಬೇಕೇ ಎಂಬ ಬಗ್ಗೆ ಗೊಂದಲ ಇರುವ ಕಾರಣ ಡಾ. ಸುಧಾಕರ್ ಮಂಡ್ಯ ಕಚೇರಿಯಲ್ಲಿ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಲು ಮುಂದಾಗಿದ್ದರು. ಆದರೆ, ಡಾ. ನಂದಕುಮಾರಿ ಅವರು ಹಾಜರಾತಿ ಪುಸ್ತಕ ಕೊಡಲು ನಿರಾಕರಿಸಿದ್ದು, ಇದರಿಂದಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ಕುಲಸಚಿವರಿಗೆ ದೂರು: ಸುಧಾಕರ್ ಅವರು ತಮ್ಮನ್ನು ನಿಂದಿಸಿದ್ದೂ ಅಲ್ಲದೆ, ಮಹಿಳೆ ಎನ್ನುವುದನ್ನೂ ಮರೆತು ಲಘುವಾಗಿ ಮಾತನಾಡಿ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಮಂಡ್ಯ ಪ್ರಾದೇಶಿಕ ನಿರ್ದೇಶಕಿ ಡಾ. ನಂದಕುಮಾರಿ ವಿ.ವಿ. ಕುಲಸಚಿವರಿಗೆ ದೂರು ನೀಡಿದ್ದಾರೆ.
ಆಮರಣಾಂತ ಉಪವಾಸ ಸತ್ಯಾಗ್ರಹ: ತಾವು ಡಾ. ನಂದಕುಮಾರಿಯೊಂದಿಗೆ ಅನುಚಿತವಾಗಿ ವರ್ತಿಸಿಲ್ಲ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ. ಒಂದು ವೇಳೆ ನಾನು ಅವರ ವಿರುದ್ಧ ಅನುಚಿತವಾಗಿ ನಡೆದುಕೊಂಡಿದ್ದಲ್ಲಿ ದಾಖಲೆಗಳನ್ನು ಹಾಜರುಪಡಿಸಿ ನನ್ನನ್ನು ಜೈಲಿಗೆ ಹಾಕಲಿ. ಇಲ್ಲವೇ ಶಿಸ್ತು ಕ್ರಮ ಕೈಗೊಳ್ಳಲಿ. ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಳ್ಳಲಾಗಿದೆ. ನನ್ನನ್ನು ತೇಜೋವಧೆ ಮಾಡಲು ಕೆಲವರು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿ ಸುಧಾಕರ್ ಪ್ರಾದೇಶಿಕ ಕಚೇರಿ ಆವರಣದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಯಾವುದೇ ಪ್ರಯೋಜನವಾಗಿಲ್ಲ: ಮುಕ್ತ ವಿ.ವಿ. ಕುಲಸಚಿವರು ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದು, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಡಾ. ಸುಧಾಕರ್ ಅವರು ದಾವಣಗೆರೆ ಕೇಂದ್ರದಲ್ಲಿ ಕೆಲಸ ನಿರ್ವಹಿಸುವುದನ್ನು ಬಿಟ್ಟು ಇಲ್ಲಿ ಧರಣಿ ಆರಂಭಿಸಿ ಇಲ್ಲದ ಗೊಂದಲ ಸೃಷ್ಟಿಸುತ್ತಿದ್ದಾರೆ. ಈ ಬಗ್ಗೆ ತಾವು ಅವರಿಗೆ ಮನವರಿಕೆ ಮಾಡಿಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಈಗಾಗಲೇ ಸಂಬಂಧಿಸಿದ ರಿಜಿಸ್ಟ್ರಾರ್‌ರವರ ಗಮನಕ್ಕೆ ಈ ವಿಚಾರ ತಿಳಿಯಪಡಿಸಲಾಗಿದೆ ಎಂದು ಮಂಡ್ಯ ಪ್ರಾದೇಶಿಕ ನಿರ್ದೇಶಕಿ ಡಾ. ನಂದಕುಮಾರಿ ತಿಳಿಸಿದರು.
ಈಗಾಗಲೇ ಮುಕ್ತ ವಿ.ವಿ. ಬಗ್ಗೆ ಗೊಂದಲ ನಿರ್ಮಾಣವಾಗಿದೆ. ಪ್ರವೇಶಾತಿ ಆರಂಭವಾಗಿದ್ದು, ಇಂತಹ ಸಂದರ್ಭದಲ್ಲಿ ಇಬ್ಬರು ನಿರ್ದೆಶಕರ ನಡುವಿನ ಗೊಂದಲವನ್ನು ಪರಿಹರಿಸುವಲ್ಲಿ ವಿಶ್ವವಿದ್ಯಾನಿಲಯ ವಿಫಲವಾಗಿದೆ. ತಾಂತ್ರಿಕ ಕಾರಣ ಒಡ್ಡಿ ಗೊಂದಲ ನಿರ್ಮಿಸಿರುವ ವಿಶ್ವವಿದ್ಯಾಲಯ ತಕ್ಷಣವೇ ಇದಕ್ಕೆ ಪರಿಹಾರ ಒದಗಿಸಬೇಕಿದೆ. ಇಲ್ಲದಿದ್ದಲ್ಲಿ ವಿದ್ಯಾರ್ಥಿಗಳು ತೊಂದರೆ ಎದುರಿಸಬೇಕಾಗುತ್ತದೆ.