ವಿಧಾನ ಪರಿಷತ್: ಶಾಸಕರ ಕಬಡ್ಡಿ ಆಟ ಮತ್ತು ಅವರ ರಾಜಕಾರಣ ಒಂದಕ್ಕೊಂದು ತಳುಕುಹಾಕಿಕೊಂಡು ಸ್ವಾರಸ್ಯಕರ ಚರ್ಚೆಗೆ ಶನಿವಾರದ ಸದನ ವೇದಿಕೆಯಾಯಿತು. ಈ “ಕಬಡ್ಡಿ ಆಟ’ದಲ್ಲಿ ಪ್ರತಿಪಕ್ಷದಿಂದ 17 ಜನರನ್ನು ಆಡಳಿತ ಪಕ್ಷ ಎಳೆದುಕೊಂಡರೆ, ಮತ್ತೂಬ್ಬರನ್ನು ಕಳಿಸಿಕೊಡಲು ಸ್ವತಃ ಪ್ರತಿಪಕ್ಷ ತಯಾರಾಯಿತು. ಆದರೆ, ಅವರಿಗೆ ಮಂತ್ರಿಗಿರಿ ನೀಡುವ ಷರತ್ತು ವಿಧಿಸಿತು. ಅವಕಾಶ ಸಿಕ್ಕರೆ, ಕಬಡ್ಡಿ ಆಡದೆ, ಮತ್ತೂಬ್ಬರು ನಮ್ಮ ಕಡೆಗೆ ಬರಲು ತುದಿಗಾಲಲ್ಲಿ ನಿಂತಿದ್ದಾರೆಂಬ ಸುಳಿವು ನೀಡಿ ಆಡಳಿತ ಪಕ್ಷ ಎದುರಾಳಿಗೆ ಚೋಕ್ ಕೊಟ್ಟಿತು!
ಈ ಹಿಂದೆ ಶಾಸಕರ ದಿನ ಆಚರಿಸಲಾಗುತ್ತಿತ್ತು. ಅದು ಎಂ.ಪಿ. ಪ್ರಕಾಶ್, ಎಂ.ವೀರಪ್ಪ ಮೊಯ್ಲಿ ಸೇರಿ ಅನೇಕ ಶಾಸಕರಲ್ಲಿನ ಸುಪ್ತ ಪ್ರತಿಭೆ ಅನಾವರಣಕ್ಕೆ ವೇದಿಕೆಯೂ ಆಗಿತ್ತು. ನಾವು ಮತ್ತು ನೀವು ಕೂಡ ಕಬಡ್ಡಿ ಆಡಿದ್ದು, ನಿಮಗೆ ನೆನಪಿರಬಹುದು ಎಂದು ಸಭಾಪತಿ ಪ್ರತಾಪ್‌ಚಂದ್ರ ಎದುರು ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಮೆಲುಕುಹಾಕಿ “ಕಬಡ್ಡಿ ಆಟ’ಕ್ಕೆ ಚಾಲನೆ ನೀಡಿದರು. ಆಗ ಕಾಂಗ್ರೆಸ್ ಸದಸ್ಯ ಸಿ.ಎಂ.ಇಬ್ರಾಹಿಂ, ಈಗಾಗಲೇ ನೀವು (ಆಡಳಿತ ಪಕ್ಷದವರು) ಕಬಡ್ಡಿ ಆಡಿ, 17 ಜನರನ್ನು ಎಳೆದುಕೊಂಡಿದ್ದೀರಿ.
ಮತ್ತೆ ಕಬಡ್ಡಿ ಆಡಿ ಇನ್ನಷ್ಟು ಜನರನ್ನು ಎಳೆಯುವುದು ಬೇಡ ಎಂದು ಚಟಾಕಿ ಹಾರಿಸಿದರು. ತಕ್ಷಣ ಎದ್ದುನಿಂತ ಸಚಿವ ಅಶೋಕ್, ಹೊರಟ್ಟಿಯವರು ಆಗ ಕಬಡ್ಡಿ ಆಡಲಿಲ್ಲ, ಈಗ ಆಡಲು ಶುರುಮಾಡಿದ್ದಾರೆ ಎಂದು ಕಾಲೆಳೆದರು. ಕಾಂಗ್ರೆಸ್ ಸದಸ್ಯ ಐವಾನ್ ಡಿಸೋಜಾ ಮಧ್ಯ ಪ್ರವೇಶಿಸಿ, ಎಷ್ಟಾದರೂ ಕಬಡ್ಡಿ ರಾಜಕಾರಣಿಗಳಿಗೆ ಪ್ರಿಯವಾದ ಆಟವಲ್ಲವೇ? ಎಂದು ನಕ್ಕರು. ಸಚಿವ ಕೆ.ಎಸ್. ಈಶ್ವರಪ್ಪ, ಅಂ.ರಾ. ಬಾಸ್ಕೆಟ್ ಬಾಲ್ ಸಂಸ್ಥೆ (ಫಿಬಾ)ಯ ಸದಸ್ಯರಾಗಿ ಆಯ್ಕೆಯಾದ ಕೆ. ಗೋವಿಂದರಾಜು ಅವರಿಗೆ ಅಭಿನಂದನೆ ಸಲ್ಲಿಸಿ, ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಕ್ರೀಡಾ ಖಾತೆ ನೀಡುವಂತೆ ಒತ್ತಾಯಿಸಿದ್ದನ್ನು ನೆನಪಿಸಿದರು.
ಇದಕ್ಕೆ ಪ್ರತಿಪಕ್ಷದ ಸದಸ್ಯರು, ಈಗಲೂ ನೀವು ಕರೆದುಕೊಂಡು ಮಂತ್ರಿಗಿರಿ ಕೊಡಬಹುದು’ ಎಂದು ಕಾಲೆಳೆದರು. “ಧಾರಾಳವಾಗಿ ಬರಲಿ’ ಎಂದು ಆಹ್ವಾನ ನೀಡಿದ ಈಶ್ವರಪ್ಪ, ಅವಕಾಶ ಸಿಕ್ಕರೆ ಕಬಡ್ಡಿ ಆಡದೆ ಸಿ.ಎಂ. ಇಬ್ರಾಹಿಂ ಬರಲು ತಯಾರಾಗಿದ್ದಾರೆಂದು ಹೇಳಿದರು. ಇದಕ್ಕೂ ಮುನ್ನ ಸದನದಲ್ಲಿ ಫಿಬಾಗೆ ಆಯ್ಕೆಯಾದ ಕೆ.ಗೋವಿಂದರಾಜು ಅವರಿಗೆ ಸದಸ್ಯರೆಲ್ಲರೂ ಅಭಿನಂದನೆ ಸಲ್ಲಿಸಿದರು. ಸಭಾಪತಿಗಳು ಅಭಿನಂದನೆ ಸೂಚನೆ ಮಂಡಿಸಿದರು.