ಗೊರೇಬಾಳ: ತುಂಗಭದ್ರಾ ಜಲಾಶಯದಿಂದ ಎಡದಂಡೆ ನಾಲೆಗೆ ನೀರು ಹರಿಸಲು ಆಗ್ರಹಿಸಿ ಸಿಂಧನೂರು ತಾಲೂಕಿನ ಹಂಚಿನಾಳ ಕ್ಯಾಂಪ್‌ನಲ್ಲಿ ರೈತರು ಸುಮಾರು ಎರಡು ತಾಸಿಗೂ ಅಧಿಕ ರಾಜ್ಯ ಹೆದ್ದಾರಿಯಲ್ಲಿ ರಸ್ತೆತಡೆ ನಡೆಸಿದರು. ಈ ವೇಳೆ ಮಾತನಾಡಿದ ಮುಖಂಡ ಜಿ. ಸತ್ಯನಾರಾಯಣ, ಮುನಿರಾಬಾದ್‌ನ ತುಂಗಭದ್ರಾ ಜಲಾಶಯದಲ್ಲಿ ಈಗಾಗಲೇ 52 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಇತ್ತೀಚೆಗೆ ನಡೆದ ಐಸಿಸಿ ಸಭೆಯಲ್ಲಿ ರೈತರಿಗೆ ನೀರು ಬಿಡುವ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದೆ ಸಭೆ ಮುಂದೂಡಲಾಗಿದ್ದು, ರೈತರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಅಧಿ ಕಾರಿಗಳು ಕಾರ್ಖಾನೆಗಳ ಮಾಲಿಕರ ಜೊತೆ ಕೈಜೋಡಿಸಿ ನೀರಿನ ಸಂಗ್ರಹಣೆಯ ಲೆಕ್ಕದಲ್ಲಿ ಏರುಪೇರು ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಕಾರ್ಖಾನೆಗಳಿಗೆ ನೀಡುತ್ತಿರುವ ನೀರನ್ನು ಕೂಡಲೇ ಸ್ಥಗಿತಗೊಳಿಸಿ ಬೆಳೆಗಳಿಗೆ ಒದಗಿಸಬೇಕು. ಐಸಿಸಿ ಸಭೆ ಕರೆದು ಎಡದಂಡೆ ನಾಲೆಗೆ ನೀರು ಹರಿಸುವ ಸ್ಪಷ್ಟ ದಿನವನ್ನು ಘೋಷಿಸಬೇಕೆಂದು ಆಗ್ರಹಿಸಿದರು. ರೈತ ಮುಖಂಡ ಮರಿಯಪ್ಪ ಸಾಲೋಣಿ ಮಾತನಾಡಿ, ಜನಪ್ರತಿನಿಧಿ ಗಳು, ಅಧಿಕಾರಿಗಳು ರೈತರ ದಾರಿ ತಪ್ಪಿಸುತ್ತಿದ್ದಾರೆ. ಕೆಳಭಾಗದ ರೈತರು, ಮೇಲ್ಭಾಗದ ರೈತರು ಎಂದು ರೈತರಲ್ಲಿಯೇ ಗೊಂದಲ ಸೃಷ್ಟಿಸುತ್ತಿದ್ದಾರೆ. ಭತ್ತ, ಕಬ್ಬು ಬೆಳೆಯಿರಿ ಎಂದು ನಮ್ಮ ಪಹಣಿಯಲ್ಲಿ ಬರೆದಿದ್ದಿರಿ. ಜಲಾಶಯದಲ್ಲಿ ನೀರಿದ್ದರೂ ಬಿಡುತ್ತಿಲ್ಲ. ರೈತ ಆತ್ಮಹತ್ಯೆ ಮಾಡಿಕೊಂಡ ಮೇಲೆ ಪರಿಹಾರ ಕೊಡುವುದಕ್ಕಿಂತ ನೀರು ಬಿಡುವ ಮೂಲಕ ರೈತರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು. ಬಳಿಕ ಗೊರೇಬಾಳ ಉಪ ತಹಶೀಲ್ದಾರ ಮಲ್ಲಶೆಟ್ಟಿ ಚಿದ್ರೆ ಅವರಿಗೆ ಮನವಿ ಸಲ್ಲಿಸಿ ರಸ್ತಾ ರೋಕೋ ಹಿಂಪಡೆಯಲಾಯಿತು. ರೈತ ಮುಖಂಡರಾದ ಜಿ. ಶರಣೇಗೌಡ, ಎಸ್.ಲಿಂಗರಾಜ, ಶರಣಪ್ಪ ಹೂಗಾರ, ಪಿ.ರಾಮಪ್ಪ, ವಿರೂಪಾಕ್ಷಗೌಡ ತುರಡಗಿ ಎಪಿಎಂಸಿ ಮಾಜಿ ಸದಸ್ಯ ಎಂ. ರಂಗನಗೌಡ, ಎನ್ ಸಣ್ಣಭೀಮನಗೌಡ, ಶಂಭಣ್ಣ ಸಾಹುಕಾರ, ಜೆ.ಬಸನಗೌಡ, ಜಿಪಂ ಮಾಜಿ ಸದಸ್ಯ ಶರಣಪ್ಪ, ಎನ್.ಶಿವನಗೌಡ, ಎನ್.ವಿ. ಸತ್ಯನಾರಾಯಣ, ಎನ್.ಶರಣೇಗೌಡ ಸೇರಿದಂತೆ ಸುತ್ತ-ಮುತ್ತಲಿನ ಗ್ರಾಮಗಳ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಬಂದೋಬಸ್ತ್: ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್ಗೆ ಕ್ರಮ ಕೈಗೊಂಡಿದ್ದರು.