ಕೋಲಾರ: ಕಟ್ಟು ಪಾಡುಗಳಿಗೆ ಜೋತು ಬೀಳದೆ ಮಹಿಳೆಯರು ಸಂವಿಧಾನಬದ್ಧ ಸಮಾನ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕೆಂದು ಜನಪರ ಚಿಂತಕಿ ಕೆ.ಆರ್.ಸೌಮ್ಯಾ ಹೇಳಿದರು. ತಾಲೂಕಿನ ಮಾಜೇನಹಳ್ಳಿಯಲ್ಲಿ ದಲಿತ ಸಂಘರ್ಷ ಸಮಿತಿ-ಕರ್ನಾಟಕ ವತಿಯಿಂದ ಶನಿವಾರ ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಆಯೋಜಿಸಿದ್ದ “ಭಾರತ ಸಂವಿಧಾನ ಮಹಿಳೆಯರ ಹಕ್ಕು ಹಾಗೂ ಸಮಾನತೆಗಾಗಿ’ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಅರಿವು ಯಾವುದೇ ಒಂದು ಗುಂಪಿಗೆ ಮಾತ್ರ ಸೀಮಿತವಲ್ಲ ಎಂದ ಅವರು, ಮಹಿಳೆಯನ್ನು ಸಹನಾಶೀಲೆಯಾಗಿ ವ್ಯವಸ್ಥೆ ಮಾರ್ಪಡಿಸಿದ್ದು, ಇದರಿಂದ ಪ್ರತಿಯೊಂದನ್ನು ಸಹಿಸಿಕೊಂಡು ಹೋಗಬೇಕು ಎಂಬ ವಾತಾವರಣ ನಿರ್ಮಾಣ ಮಾಡಲಾಗಿದೆ. ಆದರೆ, ಅಂಬೇಡ್ಕರ್ ಸಂವಿಧಾನ ಬದ್ಧವಾಗಿ ಮಹಿಳೆಯರಿಗೆ ಕಾನೂನುಬದ್ಧ ಹಕ್ಕು ನೀಡಿದ್ದು ಅವುಗಳನ್ನು ಅರಿತು ಪಡೆದುಕೊಳ್ಳಬೇಕೆಂದರು.
ಸಾವಿತ್ರಿ ಬಾಪುಲೆ ಶಿಕ್ಷಣ ಕ್ರಾಂತಿ ಮಾಡದಿದ್ದರೆ ಮಹಿಳೆಯರು ಇಂದಿಗೂ ಜೀತಗಾರರಂತೆ ಬದುಕು ಸಾಗಿಸಬೇಕಾಗಿತ್ತು. ಹೆಣ್ಣು ಮಕ್ಕಳಿಗೆ ಪೂಜ್ಯನೀಯ ಸ್ಥಾನ ನೀಡುತ್ತಲೇ ಗರ್ಭಗುಡಿಯಲ್ಲಿಯೂ ಅತ್ಯಾಚಾರವೆಸಲಾಗುತ್ತಿದೆ ಎಂದು ಟೀಕಿಸಿದರು. ಮೇಲ್ವರ್ಗದವರಿಗೆ ಕೆಲವೇ ದಿನಗಳಲ್ಲಿ ಮೀಸಲಾತಿ ಸೌಲಭ್ಯ ಕಲ್ಪಿಸಲು ಆಳುವ ಸರ್ಕಾರಗಳು ಮುಂದಾಗುತ್ತವೆ. ಆದರೆ, ಬಹು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಮಹಿಳಾ ಮೀಸಲಾತಿಯನ್ನು ಏಕೆ ಅನುಷ್ಠಾನಕ್ಕೆ ತರುತ್ತಿಲ್ಲವೆಂದು ಪ್ರಶ್ನಿಸಿದರು.
ಕೋಲಾರ ಜಿಲ್ಲಾ ಎಸ್‌ಸಿ - ಎಸ್‌ಟಿ ನೌಕರರ ಸಂಘದ ಅಧ್ಯಕ್ಷೆ ಎಸ್.ವಿಜಯಮ್ಮ, ಸಾವಿತ್ರಿ ಬಾಪುಲೆ, ಅಂಬೇಡ್ಕರ್ ಕೇವಲ ಪರಿಶಿಷ್ಟ ಜಾತಿ ವರ್ಗದವರಿಗೆ ಮಾತ್ರವೇ ಸೀಮಿತವಾಗಿಲ್ಲ. ಸಮಸ್ತ ಮಹಿಳೆಯರ ಉದ್ಧಾರಕರಾಗಿದ್ದಾರೆ. ಅವರ ಶ್ರಮವಿಲ್ಲದಿದ್ದರೆ ಮಹಿಳೆಯರ ಸ್ಥಿತಿಗತಿ ಅಧೋಗತಿಯಾಗಿರುತ್ತಿತ್ತು ಎಂದರು.
ಮಹಿಳೆಯರು ಪ್ರತಿ ಕ್ಷೇತ್ರಗಳಲ್ಲಿಯೂ ಸಮಾನ ಹಕ್ಕುಗಳನ್ನು ಪ್ರತಿಪಾದಿಸಿ ಅಭಿವೃದ್ಧಿ ಹೊಂದಬೇಕು. ಟೀವಿ, ಧಾರಾವಾಹಿಗಳು ಮಹಿಳೆಯರನ್ನು ರೌಡಿಗಳಂತೆ ಬಿಂಬಿಸುತ್ತಿರುವುದರ ವಿರುದ್ಧವೂ ಹೋರಾಟ ನಡೆಸಬೇಕಾಗಿದೆ ಎಂದು ತಿಳಿಸಿದರು. ಕನ್ನಡ ಉಪನ್ಯಾಸಕರ ವೇದಿಕೆ ಅಧ್ಯಕ್ಷ ಜೆ.ಜಿ.ನಾಗರಾಜ್, ಮಹಿಳೆಯರಿಂದಲೇ ದೇಶವು ಆರ್ಥಿಕವಾಗಿ ಸುಭದ್ರವಾಗಿದ್ದು ನೆಮ್ಮದಿಯುತ ಬದುಕಿಗೆ ಸಂವಿಧಾನದ ಅರಿವು ಅತ್ಯಗತ್ಯ ಎಂದರು.
ಪರಿಶಿಷ್ಟ ಜಾತಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಮುನಿರಾಜು, ಮಹಿಳೆಯರನ್ನು ಹಾಡಿ ಕೊಂಡಾಡುವುದು ಕೇವಲ ಮಹಿಳಾ ದಿನಾಚರಣೆಗೆ ಸೀಮಿತಗೊಳಿಸದೆ ಅವರ ಸೇವೆಯನ್ನು ನಿತ್ಯ ಸ್ಮರಿಸುವಂತಾಗಬೇಕೆಂದರು. ಇದೇ ವೇಳೆ ಜನಪರ ಚಿಂತಕಿ ಕೆ.ಆರ್.ಸೌಮ್ಯಾ, ಎಸ್.ವಿಜಯಮ್ಮ, ಗಾಯಕಿ ರತ್ನ ಸಕಲೇಶ್ವರ, ಮಾಜೇìನಹಳ್ಳಿ ಗ್ರಾಪಂ ಅಧ್ಯಕ್ಷೆ ಶಾರದಾ, ಎಂ.ರೇಣುಕಾ ಮತ್ತಿತರರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಮಹಿಳಾ ಕಾಲೇಜಿನ ಉಪನ್ಯಾಸಕಿ ರಶ್ಮೀ, ದಸಂಸಕ ಜಿಲ್ಲಾ ಸಂಚಾಲಕಿ ಎಸ್.ವಿ.ಉಮಾದೇವಿ, ಉಷಾ, ಎಂ.ರೇಣುಕಾ ಇದ್ದರು. ಕಲಾವಿದ ಯಲ್ಲಪ್ಪ, ತಂಡದ ಸದಸ್ಯರಾದ ಕೀಲುಹೊಳಲಿ ಸತೀಶ್, ಮುನಿಸ್ವಾಮಿ, ಚಂದ್ರಮ್ಮ, ಗಟ್ಟಮಾರನಹಳ್ಳಿ ಜಗದೀಶ್, ಮೋತಕಪಲ್ಲಿ ರತ್ನಮ್ಮ, ನಾಗಪ್ಪ ಹಿರೇಕರಪನಹಳ್ಳಿ, ಮುನಿರತ್ನಮ್ಮ ಜಯಮಂಗಲ, ಜ್ಯೋತಿ ಇತರರು ಗಾಯನ ನಡೆಸಿಕೊಟ್ಟರು.