ಬೆಂಗಳೂರಿನಲ್ಲಿ ಮಳೆ ಬಿದ್ದ ಮಾರನೆಯ ಆ ದಿನ ಚೆನ್ನಾಗಿ ನೆನಪಿದೆ. 1999ರ ಆಗಸ್ಟ್ 20ರ ಮುಂಜಾನೆ. ವೈಮಾಂತರಿಕ್ಷ ತಂತ್ರಜ್ಞಾನದಲ್ಲಿ ಗುಣಮಟ್ಟ ಇಂಜಿನಿಯರಿಂಗ್ ಎಂಬ ಸಮ್ಮೇಳನದ ಉದ್ಘಾಟನೆಗೆಂದು ಪ್ರಧಾನಮಂತ್ರಿಗಳ ವೈಜ್ಞಾನಿಕ ಸಲಹೆಗಾರರಾಗಿದ್ದ ಅಬ್ದುಲ್ ಕಲಾಂ ಬೆಂಗಳೂರಿಗೆ ಬಂದಿದ್ದರು. ವೇದಿಕೆ ಅಣಿಗೊಳಿಸುವ ಹೊಣೆ ನನ್ನ ಮೇಲಿತ್ತು. ಎಂದಿನ ಕೆದರಿದ ಉದ್ದನೆಯ ಕೂದಲು ಮತ್ತು ನಗುಮುಖದೊಂದಿಗೆ ಆಗಮಿಸಿದ ಸೂಟುಧಾರಿ ಕಲಾಂ ಅವರ ಕೋಟಿಗೆ ಸಮ್ಮೇಳನದ ಬ್ಯಾಡ್‌ಜ್ ಚುಚ್ಚಲು ಹೋದೆ. ಈ ಗುರುತಿನ ಚೀಟಿ ಅಗತ್ಯವಿದೆಯೆ? ಎಂದು ಪ್ರಶ್ನಿಸಿದರು. ನೀವೂ ಸೇರಿದಂತೆ, ಗುರುತಿನ ಚೀಟಿಯಿಲ್ಲದ ಯಾರನ್ನೂ ನನ್ನ ಹುಡುಗರು “ವೇದಿಕೆ ಹತ್ತಲು ಬಿಡರು ಎಂದು ಚಟಾಕಿ ಹಾರಿಸಿದೆ. ವೇದಿಕೆ ಮೇಲೆ ಕೂರುವ ಹೊಣೆಯಿಂದ ತಪ್ಪಿಸಿಕೊಳ್ಳಲು ಇದಕ್ಕಿಂತ ಉತ್ತಮ ಮಾರ್ಗ ಮತ್ತೂಂದಿಲ್ಲ’ ಎಂದು ಜೋರಾಗಿಯೇ ಅವರು ನಗಲಾರಂಭಿಸಿದರು. ಟೈಮ್ಸ ಆಫ್ ಇಂಡಿಯಾದ ಛಾಯಾಗ್ರಾಹಕ ಸೆರೆಹಿಡಿದ ಆ ಚಿತ್ರಕ್ಕೆ ಮರುದಿನದ ಸಂಚಿಕೆಯ ಮುಖಪುಟದಲ್ಲೇ ಸ್ಥಾನ.
ಅದು 1994ರ ಸಮಯ. ವಿಮಾನಗಳಲ್ಲಿ ಕನ್ನಡ ಪತ್ರಿಕೆಗಳು ಸಿಗುವುದಿರಲಿ, ಕನ್ನಡದ ಉಸಿರೂ ಅಷ್ಟಾಗಿ ಕೇಳುತ್ತಿರಲಿಲ್ಲ. ಹೀಗೊಂದು ದಿನ ದೆಹಲಿಯಿಂದ ಬೆಂಗಳೂರಿಗೆ ಬರುವಾಗ ವಿಮಾನದಲ್ಲಿ ಕಡೆಯ ಸೀಟು ಸಿಕ್ಕಿತು. ಇಳಿಯಲು ಹೆಚ್ಚು ಹೊತ್ತು ಕಾಯಬೇಕಲ್ಲ, ಎಂದು ಬೈದುಕೊಂಡೇ ಆಸೀನನಾಗಿದ್ದೆ. ತಲೆಯೆತ್ತಿದರೆ, ಕನ್ನಡ ಪತ್ರಿಕೆಯೊಂದು ಕಣ್ಣಿಗೆ ಬೀಳಬೇಕೆ? ಎಳೆದ ರಭಸಕ್ಕೆ ಮೊದಲ ಪುಟದ ತುದಿ ಹರಿದೇ ಬಿಟ್ಟಿತು. ಅರ್ಧ ಗಂಟೆ ಮನಸೋ ಇಚ್ಛೆ ಓದಿ ತೊಡೆಯ ಮೇಲಿರಿಸಿಕೊಂಡಿದ್ದೆ. “ಮೊದಲ ದರ್ಜೆಯ ಪಯಣಿಗರೊಬ್ಬರಿಗೆ ಕನ್ನಡ ಪತ್ರಿಕೆ ಬೇಕಂತೆ. ನೀವು ಓದಿ ಮುಗಿಸಿದ್ದರೆ ಕೊಡುತ್ತೀರಾ?’ ಎಂಬ ಕೋರಿಕೆಯೊಡನೆ ಗಗನಸಖೀಯಲ್ಲ, ಸಖ ಮುಗುಳ್ನಕ್ಕು ಕೇಳಿದ. ಪಯಣ ಮುಗಿಸುವತನಕ ಕನ್ನಡ ಪತ್ರಿಕೆ ಬೇಕು. ತಂದು ಕೊಡಿ ಎಂದು ಕೇಳಿದ, ನನ್ನಂಥ ಹಠಮಾರಿ ಅದ್ಯಾರು ಎಂಬ ಕುತೂಹಲ ಉಳಿದಿತ್ತು. ವಿಮಾನದ ಮೆಟ್ಟಿಲು ಇಳಿಯುವಾಗ ನೋಡುತ್ತೇನೆ: ರಾಜಕಾರಣಿ ಜೀವರಾಜ ಆಳ್ವರ ಕೈಯಲ್ಲಿದ್ದ ಆ ಕನ್ನಡ ಪತ್ರಿಕೆಯ ಮೊದಲ ಪುಟ ಹರಿದಿತ್ತು!
ಡಿಸೆಂಬರ್ 1991ರ ಸಮಯವದು. ಕಚೇರಿ ಕೆಲಸಕ್ಕೆಂದು ದೆಹಲಿಗೆ ಹೋಗಿದ್ದವನು ಮದ್ರಾಸಿಗೆ ಬೆಳಗ್ಗೆ ಬಂದಿ¨ªೆ. ಬೆಂಗಳೂರು ಎಕ್ಸ್‌ಪ್ರೆಸ್ ಹೊರಡಲು ಸಾಕಷ್ಟು ಸಮಯವಿತ್ತು. ಇನ್ನೂ ಆರು ತಿಂಗಳ ಮಗುವಾಗಿದ್ದ ಮಗಳು ಮೇಘನಾಳಿಗೆಂದು ದೊಡ್ಡ ಟೆಡ್ಡಿಬೇರ್ ಕೊಂಡದ್ದರಿಂದ ಲಗೇಜ್ ಸಾಕಷ್ಟು ಭಾರವಿತ್ತು. ಮಧ್ಯಾಹ್ನ, ಲಗೇಜು ತುಂಬಿಸಿದ ಕೆಲಕ್ಷಣದಲ್ಲೇ ರೈಲು ಹೊರಟಿತು. ಅಂತೂ ಇಂತೂ ಬಂಗಾರಪೇಟೆ ಸಮೀಪ ಬಂದಾಗ ರಾತ್ರಿ ಎಂಟೂವರೆ. ಇನ್ನೊಂದು ಗಂಟೆಯಲ್ಲಿ ಬೆಂಗಳೂರು. ಮತ್ತೂಂದು ಗಂಟೆಯಲ್ಲಿ ಮನೆ ಎಂಬ ಹುರುಪಿನಲ್ಲಿದ್ದೆ. ಸ್ವಲ್ಪ ದೂರ ಚಲಿಸಿದ ರೈಲು ಏಕೋ ನಿಂತಿತು. ಸಿಗ್ನಲ ಬಿದ್ದಿಲ್ಲವೇನೋ ಎಂಬ ಊಹೆ ಎಲ್ಲರದು. ಬೆಂಗಳೂರಿನಲ್ಲಿ ಬಂದ್‌ನ ಹಿಂದಿನ ದಿನವೇ ದೊಡ್ಡ ಅನಾಹುತ ನಡೆದುದರ ಕಲ್ಪನೆ ನಮ್ಮಲ್ಲಿ ಯಾರಿಗೂ ಇರಲಿಲ್ಲ.
ನಿಂತ ರೈಲು ಕೊನೆಗೆ ಹೊರಟಿದ್ದು ರಾತ್ರಿ ಹತ್ತೂವರೆಗೆ. ಬೆಂಗಳೂರು ತಲುಪಿದಾಗ ಹನ್ನೆರಡರ ರಾತ್ರಿ. ಅಷ್ಟೊಂದು ಲಗೇಜಿನೊಂದಿಗೆ ಹೊರಬರಲು ಹರಸಾಹಸ ಪಡುತ್ತಿದ್ದಾಗ ಸಿಕ್ಕ ಪೋರ್ಟರ್, “ಸಾರ್, ಆಟೋ ತುಂಬಾ ಕಡಿಮೆ ಸಂಖ್ಯೆಯಲ್ಲಿದೆ. ಬೇಕಿದ್ದರೆ ನನ್ನ ಜತೆ ಓಡಿ ಬರಬೇಕು’ ಎನ್ನುತ್ತಲೇ ನನ್ನೆಲ್ಲ ಲಗೇಜಿನ ಜತೆ ಹೊರಗಡೆ ತಂದುಬಿಟ್ಟ. ಇನ್ನೂರು ರೂಪಾಯಿ ಕೊಟ್ಟರೆ ಮಾತ್ರ ಜಯನಗರ, ದಾರಿಯಲ್ಲಿ ಕತ್ರಿಗುಪ್ಪೆಯ ಪ್ಯಾಸೆಂಜರ್ ಒಬ್ಬರಿದ್ದಾ ರೆ ಎಂದ ಆಟೋದವನು. ಗೋಣಾಡಿಸಿ ಹೊರಟರೆ ದಾರಿಯುದ್ದಕ್ಕೂ ಸುಟ್ಟ ಟೈರುಗಳು, ಗಾಜೊಡೆದ ಬಸ್ಸು- ಕಾರುಗಳು. ಸಮಯಕ್ಕೆ ಸರಿಯಾಗಿ ಪೋರ್ಟರ್ ನೆರವು ನೀಡಿರದಿದ್ದರೆ, ಆಟೋರಿಕ್ಷಾ ಚಾಲಕ ಬರುವುದಿಲ್ಲ ಎಂದಿದ್ದರೆ… ಏನಾಗುತ್ತಿತ್ತೂ? ಊಹಿಸಲಾಗದು.
– ಹಾಲ್ದೊಡ್ಡೇರಿ ಸುಧೀಂದ್ರ, ಹಿರಿಯ ವಿಜ್ಞಾನಿ