Advertisement

ಜಿಪಂ ಅಧ್ಯಕ್ಷ ಗಾದಿಗೆ ತೆರೆಮರೆ ಕಸರತ್ತು 

04:43 PM Nov 16, 2018 | |

ಕೊಪ್ಪಳ: ಇಲ್ಲಿನ ಜಿಲ್ಲಾ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆಯಾಗಿದ್ದು, ರಾಜೀನಾಮೆ ಅಂಗೀಕಾರವಾದ ಬಳಿಕವೇ ಹೊಸಬರ ಆಯ್ಕೆ ಪ್ರಕ್ರಿಯೆ ನಡೆಸಲು ಕಾಂಗ್ರೆಸ್‌ ಮುಖಂಡರು ಸಜ್ಜಾಗಿದ್ದಾರೆ. ಮುಂದೆ ಲೋಕಸಭಾ ಚುನಾವಣಾ ದೂರದೃಷ್ಟಿಯಿಟ್ಟುಕೊಂಡು ಎಲ್ಲ ಲೆಕ್ಕಾಚಾರ ಹಾಕಿಕೊಂಡೇ ಹೊಸಬರಿಗೆ ಮಣೆ ಹಾಕಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

Advertisement

ಜಿಪಂನಲ್ಲಿ ಕಾಂಗ್ರೆಸ್‌ ಮೇಲುಗೈ ಸಾಧಿಸಿ, ಅಧಿಕಾರದ ಗದ್ದುಗೆ ಹಿಡಿದಿದೆ. ಆರಂಭದ ದಿನದಲ್ಲಿ ಕಾಂಗ್ರೆಸ್‌ ಹಿರಿಯ ಧುರೀಣ ಎಸ್‌.ಬಿ. ನಾಗರಳ್ಳಿ ಅವರನ್ನು ಜಿಪಂ ಅಧ್ಯಕ್ಷ ಗಾದಿಗೆ ತಂದು ಕೂರಿಸಲಾಗಿತ್ತು. ಆದರೆ ಅವರು ಒಂದು ವರ್ಷ ಆಡಳಿತ ನಡೆಸಿ, ಒಳ ರಾಜಕಾರಣದ ದಿಢೀರ್‌ ಬೆಳವಣಿಗೆ ಹಿನ್ನೆಲೆಯಲ್ಲಿ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ತರುವಾಯ ಮತ್ತೆ ಮಾಜಿ ಶಾಸಕ ಬಸವರಾಜ ಹಿಟ್ನಾಳ ಅವರ ಪುತ್ರ ರಾಜಶೇಖರ ಹಿಟ್ನಾಳ ಅವರನ್ನು ಅಧ್ಯಕ್ಷ ಗಾದಿಗೆ ಆಯ್ಕೆ ಮಾಡಲಾಯಿತು. ಆದರೆ ಒಳ ಒಪ್ಪಂದದ ಲೆಕ್ಕಾಚಾರಕ್ಕೆ ಅಧ್ಯಕ್ಷ ಸ್ಥಾನಕ್ಕೆ ಕಳೆದ ಅ. 29ರಂದು ಬೆಂಗಳೂರಿನಲ್ಲಿ ಹಿಟ್ನಾಳ ಅವರು ರಾಜೀನಾಮೆ ಸಲ್ಲಿಸಿ ಬಂದಿದ್ದಾರೆ. ಇವರೊಟ್ಟಿಗೆ ಲಕ್ಷ್ಮವ್ವ ನೀರಲೂಟಿ ಅವರು ಉಪಾಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಜಿಪಂನಲ್ಲಿ ರಾಜಕಾರಣದ ಆಟ ಭರ್ಜರಿಯಾಗಿ ನಡೆದಿದೆ.

ಜಿಪಂ ಅಧ್ಯಕ್ಷ ಸ್ಥಾನವು ಸಚಿವ ಸ್ಥಾನಕ್ಕೆ ಸಮನಾಗಿರುವುದರಿಂದ ಬೆಂಗಳೂರಿನಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಕೆ ಮಾಡಿದ್ದು, ಈಗಾಗಲೇ 15 ದಿನಗಳಾಗಿವೆ. ಹಿಟ್ನಾಳ ಅವರು ಅನಾರೋಗ್ಯ ಕಾರಣ ನೀಡಿ ರಾಜೀನಾಮೆ ಸಲ್ಲಿಕೆ ಮಾಡಿದ್ದರಿಂದ ಸಹಜವಾಗಿಯೇ ರಾಜೀನಾಮೆ ಅಂಗೀಕಾರವಾಗುವ ಸಾಧ್ಯತೆಯಿದೆ. ಅಲ್ಲದೇ 15 ದಿನ ಅವಧಿ  ಮುಗಿದ ಹಿನ್ನೆಲೆಯಲ್ಲಿ ರಾಜೀನಾಮೆ ಅಂಗೀಕಾರವಾಗಿದೆ ಎಂದೆನ್ನಲಾಗುತ್ತಿದೆ. ರಾಜೀನಾಮೆ ಅಂಗೀಕಾರದ ಮಾಹಿತಿ ಕಲಬುರಗಿ ಪ್ರಾದೇಶಿಕ ಆಯುಕ್ತರಿಗೆ ರವಾನೆಯಾಗಲಿದೆ. ಅವರು ಚುನಾವಣಾ ಪ್ರಕ್ರಿಯೆ ಕೈಗೊಳ್ಳಲಿದ್ದಾರೆ.

ಇತ್ತ ಕಾಂಗ್ರೆಸ್‌ನಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ರಾಜೀನಾಮೆ ಅಂಗೀಕಾರವಾದ ಬಳಿಕ ಹೊಸ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯ ಕುರಿತು ಹಿರಿಯರ ಸಮ್ಮುಖದಲ್ಲಿ ಚರ್ಚೆ ನಡೆಸಲು ಕಾದು ಕುಳುತ್ತಿದ್ದಾರೆ. ಇನ್ನೂ ಯಾರನ್ನು ಅಂತಿಮವಾಗಿ ಆಯ್ಕೆ ಮಾಡಿಲ್ಲ ಎನ್ನುತ್ತಿವೆ ಕಾಂಗ್ರೆಸ್‌ ಮೂಲಗಳು. ಈ ಮೊದಲಿನ ಒಪ್ಪಂದದಂತೆ, ಗಂಗಾವತಿ ತಾಲೂಕಿಗೆ ಅಧ್ಯಕ್ಷ ಸ್ಥಾನ ಬಿಟ್ಟು ಕೊಟ್ಟಿದ್ದು, ಸಿದ್ದಾಪೂರ ಕ್ಷೇತ್ರದ ವಿಶ್ವನಾಥ ರಡ್ಡಿ ಹಾಗೂ ಹೇರೂರು ಜಿಪಂ ಕ್ಷೇತ್ರದ ಅಮರೇಶ ಗೋನಾಳ ಅವರು ಪೈಪೋಟಿ ನಡೆಸಿದ್ದಾರೆ. ಅದರಲ್ಲೂ ವಿಶ್ವನಾಥ ರಡ್ಡಿ ಅವರ ಹೆಸರೇ ಮುಂಚೂಣಿಯಲ್ಲಿದೆ ಎನ್ನವು ಮಾಹಿತಿ ಹರಿದಾಡುತ್ತಿದ್ದು, ಯಾರು ಆಯ್ಕೆಯಾಗಲಿದ್ದಾರೆ ಎನ್ನುವುದು ಇನ್ನೂ ಗೌಣವಾಗಿದೆ. ಇನ್ನೂ ಉಪಾಧ್ಯಕ್ಷ ಸ್ಥಾನ ಕೊಪ್ಪಳ-ಯಲಬುರ್ಗಾ ತಾಲೂಕಿಗೆ ಹಂಚಿಕೆ ಮಾಡಿಕೊಂಡಿದ್ದು, ಈ ಪೈಕಿ ಅಳವಂಡಿ ಕ್ಷೇತ್ರದಲ್ಲಿ ರತ್ನಮ್ಮಾ ಅವರ ಹೆಸರು ಮುಂಚೂಣಿಯಲ್ಲಿದೆ. ಇದಲ್ಲದೇ, ಈ ಬಾರಿ ಅಲ್ಪಸಂಖ್ಯಾತ ಸಮುದಾಯದ ಸದಸ್ಯರಿಗೆ ಉಪಾಧ್ಯಕ್ಷ ಸ್ಥಾನ ನೀಡಬೇಕೆನ್ನುವ ಲೆಕ್ಕಾಚಾರವೂ ಕೇಳಿ ಬಂದಿದೆ.

ಒಂದು ರಾಜಕೀಯ ಲೆಕ್ಕಾಚಾರದ ಪ್ರಕಾರ, ಈಗಾಗಲೇ ಹೊಸ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಬಹುತೇಕ ನಡೆದಿದ್ದು, ಮುಂದೆ ಲೋಕಸಭಾ ಚುನಾವಣೆಯಿದ್ದು, ಆಗ ಅಸಮಾಧಾನ ಏಳದಂತೆ ತಡೆಯುವ ಉದ್ದೇಶದಿಂದ ಕೈ ನಾಯಕರೇ ಎಲ್ಲವನ್ನೂ ಗೌಪ್ಯವಾಗಿಟ್ಟಿದ್ದಾರೆ ಎಂದೆನ್ನಲಾಗುತ್ತಿದೆ. ಒಟ್ಟಿನಲ್ಲಿ ಇನ್ನೂ ಕೆಲವೇ ದಿನದಲ್ಲಿ ಜಿಪಂನ ರಾಜಕೀಯ ರಂಗಿನಾಟಕ್ಕೆ ತೆರೆ ಬೀಳಲಿದೆ. 

Advertisement

ಅಧ್ಯಕ್ಷ-ಉಪಾಧ್ಯಕ್ಷರ ರಾಜೀನಾಮೆ ಇನ್ನೂ ಅಂಗೀಕಾರಾಗಬೇಕಿದೆ. ಅವರ ರಾಜೀನಾಮೆ ಅಂಗೀಕಾರದ ಬಳಿಕ ಹೊಸಬರ ಆಯ್ಕೆಯ ಕುರಿತು ಪಕ್ಷದ ಹಿರಿಯರ ಜೊತೆ ಸಭೆ ನಡೆಸಿ ಚರ್ಚಿಸಲಾಗುವುದು. ಇನ್ನೂ ಕುರಿತು ಯಾವುದೇ ಸಭೆ ನಡೆಸಿಲ್ಲ. ಅಧ್ಯಕ್ಷ ಸ್ಥಾನಕ್ಕೆ ಹಲವರು ಪೈಪೋಟಿ ನಡೆಸಿದ್ದಾರೆ.
 ಶಿವರಾಜ ತಂಗಡಗಿ,
 ಕಾಂಗ್ರೆಸ್‌ ಜಿಲ್ಲಾಧ್ಯಕ್ಷ 

ದತ್ತು ಕಮ್ಮಾರ 

Advertisement

Udayavani is now on Telegram. Click here to join our channel and stay updated with the latest news.

Next