ರಾಯಚೂರು: ಜಿಲ್ಲೆಯಲ್ಲಿ ಅಖೀಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಸ್ಥಾಪನೆಗಾಗಿ ರಾಯಚೂರು ಏಮ್ಸ್ ಹೋರಾಟ ಸಮಿತಿ ರಚಿಸಿದ್ದು, ಹಲವು ಹಂತಗಳ ಹೋರಾಟ ಹಮ್ಮಿಕೊಳ್ಳಲು ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಸಮಿತಿ ಸಂಚಾಲಕ ಬಸವರಾಜ ಕಳಸ ತಿಳಿಸಿದರು.
ನಗರದದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆರಂಭಿಕ ಹಂತದ ಹೋರಾಟದ ಭಾಗವಾಗಿ ಸೆ.16ರಂದು ಡಿಸಿ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಗುವುದು. ಸೆ.17ರಂದು ನಡೆಯಲಿರುವ ಕಲ್ಯಾಣ ಕರ್ನಾಟಕ ದಿನಾಚರಣೆ ಕಾರ್ಯಕ್ರಮಕ್ಕೆ ಆಗಮಿಸಲಿರುವ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ವಿಶೇಷ ಸಭೆ ಕರೆದು ಚರ್ಚಿಸುವಂತೆ ಮನವಿ ಮಾಡಲಾಗುವುದು. ತಾಲೂಕು, ಹೋಬಳಿ, ಗ್ರಾಮ ಮಟ್ಟದಲ್ಲೂ ಸಂಘಟನೆ ಬಲಪಡಿಸಲಾಗುವುದು. ಜಿಲ್ಲೆಯ ಜನಪ್ರತಿನಿ ಧಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರನ್ನೊಳಗೊಂಡ ಸಮಿತಿ ರಚಿಸಲಾಗುವುದು ಎಂದು ವಿವರಿಸಿದರು.
ಈ ಹಿಂದೆ ಐಐಟಿ ವಿಚಾರದಲ್ಲಿ ಜಿಲ್ಲೆಗಾದ ಅನ್ಯಾಯ ಏಮ್ಸ್ ವಿಚಾರದಲ್ಲಿ ಆಗದಂತೆ ಎಚ್ಚರಿಕೆ ವಹಿಸಲಾಗುವುದು. ಹಿಂದೆ ಐಐಟಿ ಸ್ಥಾಪನೆಗೆ ರಾಜ್ಯದ ಮೂರು ಜಿಲ್ಲೆಗಳ ಹೆಸರು ನೀಡಲಾಗಿತ್ತು. ಈ ಬಾರಿ ಏಮ್ಸ್ ಸ್ಥಾಪನೆಗೆ ಕೇವಲ ರಾಯಚೂರು ಜಿಲ್ಲೆಯ ಹೆಸರು ಮಾತ್ರ ಸೂಚಿಸಬೇಕು ಎಂಬ ಧ್ಯೇಯದೊಂದಿಗೆ ಹೋರಾಟ ನಡೆಸಲಾಗುವುದು. ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವಾಗ ಜಿಲ್ಲೆಯ ಹೆಸರನ್ನೇ ಸೂಚಿಸಬೇಕು ಎಂದು ಒತ್ತಾಯಿಸಲಾಗುವುದು.
ಹಿರಿಯ ಹೋರಾಟಗಾರ ರಾಘವೇಂದ್ರ ಕುಷ್ಟಗಿ ಮಾತನಾಡಿ, ಏಮ್ಸ್ ಸಂಸ್ಥೆ ಜಿಲ್ಲೆಗೆ ಬರಬೇಕಾದರೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಸ್ವಾರ್ಥ, ಪ್ರತಿಷ್ಠೆ, ಪಕ್ಷಭೇದ ಮರೆತು ಹೋರಾಟಕ್ಕೆ ಬೆಂಬಲಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಬೇಕು. ಈ ಭಾಗದ ಜನರ ಆರೋಗ್ಯ ಸ್ಥಿತಿ ಸುಧಾರಿಸಬೇಕಾದ ಇಂಥ ಮಹತ್ತರ ಸಂಸ್ಥೆಗಳ ಅಗತ್ಯತೆ ಇದೆ. ಇದಕ್ಕಾಗಿ ತೆಲಂಗಾಣ ರಾಜ್ಯಕ್ಕಾಗಿ ನಡೆಸಿದ ಹೋರಾಟಕ್ಕೂ ಹಿಂಜರಿಯುವುದಿಲ್ಲ ಎಂದರು.
ಹೋರಾಟಗಾರ ಅಂಬಣ್ಣ ಅರೋಲಿ, ಬಿಜೆಪಿ ಮುಖಂಡ ರವೀಂದ್ರ ಜಲ್ದಾರ್, ಶಿವಕುಮಾರ ಯಾದವ ಇತರರು ಇದ್ದರು.