ಮೈಸೂರು/ಕೆ.ಆರ್.ನಗರ: ನ್ಯಾಯ-ಅನ್ಯಾಯ, ಸತ್ಯ-ಅಸತ್ಯದ ನಡುವೆ ನಡೆಯುತ್ತಿರುವ ಹೋರಾಟ ಈ ಚುನಾವಣೆ. ನಾವೆಲ್ಲರೂ ಸತ್ಯದ ಪರ ನಿಂತಿದ್ದೇವೆ. ಕಾಂಗ್ರೆಸ್-ಜೆಡಿಎಸ್ ಸೇರಿ ಮೋದಿ ಬಿಜೆಪಿ, ಆರ್‌ಎಸ್‌ಎಸ್ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ. ಸ್ಥಳೀಯವಾಗಿ ಎರಡೂ ಪಕ್ಷಗಳು ಒಟ್ಟಾಗಿ ಹೋರಾಡಿ ರಾಜ್ಯದಲ್ಲಿ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಿ, ಬಿಜೆಪಿ ತೊಲಗಿಸಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ ಮನವಿ ಮಾಡಿದರು.
ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೆ.ಆರ್.ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪರ್ವದ ಪರಿವರ್ತನಾ ಸಮಾವೇಶದಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಅಭ್ಯರ್ಥಿಗಳಿಗೆ ಸಂಪೂರ್ಣ ಬೆಂಬಲ ನೀಡಿ ಗೆಲ್ಲಿಸಿ. ನಮ್ಮ ಗುರಿ ಬಿಜೆಪಿ ಸೋಲಿಸಿ ಮೋದಿ ತೊಲಗಿಸುವುದು. ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್‌ನ ನಿಖೀಲ್ ಕುಮಾರಸ್ವಾಮಿ, ಮೈಸೂರು ಕ್ಷೇತ್ರದಲ್ಲಿ ಸಿ.ಎಚ್.ವಿಜಯಶಂಕರ್, ಚಾಮರಾಜನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್ .ಧ್ರುವನಾರಾಯಣ್ ಗೆಲ್ಲಿಸಿ ಎಂದರು.
2019ರ ಲೋಕಸಭಾ ಚುನಾವಣೆ ಎರಡು ವಿಚಾರ ಧಾರೆಗಳ ಮೇಲೆ ನಡೆಯಲಿದೆ. ಒಂದು ಸುಳ್ಳು, ದ್ವೇಷ, ಹಿಂಸೆ ಕೋಮುವಾದ. ಎರಡನೆಯದು ಪ್ರೀತಿ, ವಿಶ್ವಾಸ, ಸಚ್ಛಾರಿತ್ರ್ಯಗಳ ಮೇಲೆ ನಡೆಯುತ್ತದೆ. ಪ್ರಧಾನಿ ನರೇಂದ್ರ ಮೋದಿ ಪ್ರತೀ ಚುನಾವಣೆಗೊಂದು ಹೊಸ ಸುಳ್ಳು ಹೇಳುತ್ತಿದ್ದರೆ. 2014ರಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗಸೃಷ್ಟಿ, ದೇಶದ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಣ ಹಾಕುವುದಾಗಿ ಭರವಸೆ ನೀಡಿದ್ದರು. ಈ ಐದು ವರ್ಷಗಳಲ್ಲಿ ಕೊಟ್ಟಿದ್ದ ಭರವಸೆ ಈಡೇರಿಸದ ಪ್ರಧಾನಿ ಈಗ ಚೌಕಿದಾರ್ ಎಂದು ಹೊರಟಿದ್ದಾರೆ. ಈ ಚೌಕಿದಾರ್ ದೇಶದ ರೈತರು, ಸಣ್ಣ ಉದ್ದಿಮೆದಾರರು, ಯುವಜನರ ಮನೆಯ ಮುಂದೆ ಕಾಣಿಸಲ್ಲ. ಬದಲಿಗೆ ಅಂಬಾನಿ ಮನೆ ಮುಂದೆ ಕಾಣುತ್ತಾರೆ. ಈ ಒಬ್ಬ ಚೌಕಿದಾರ್ ಹಿಂದೂಸ್ಥಾನದ ಎಲ್ಲಾ ಚೌಕಿದಾರರ ಹೆಸರು ಹಾಳು ಮಾಡಿದ್ದಾರೆ ಎಂದು ಲೇವಡಿ ಮಾಡಿದರು.
ಕಳೆದ ಎರಡು ಲೋಕಸಭಾ ಚುನಾವಣೆಗಳಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹಸಿ ಸುಳ್ಳುಗಳನ್ನು ಹೇಳುತ್ತಾ ಬರುತ್ತಿದ್ದು, ದೇಶದ ಜನರನ್ನು ವಂಚಿಸುತ್ತಿದ್ದಾರೆ ಎಂದರು. ರೈತರ ಸಾಲಮನ್ನಾ ಮಾಡದ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆಯ ಹಣವನ್ನು ಕಾರ್ಪೊàರೇಟ್ ಸಂಸ್ಥೆಗಳಿಗೆ ಹೋಗುವಂತೆ ಮಾಡಿದೆ. ಆದರೆ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ರೈತರ 11 ಸಾವಿರ ಕೋಟಿ ಸಾಲಮನ್ನಾ ಮಾಡಿದೆ. ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸುವುದರ ಜತೆಗೆ ರೈತರ ಬೆಳೆಗಳಿಗೆ ಉತ್ತಮ ಬೆಂಬಲ ಬೆಲೆ ನಿಗದಿಪಡಿಸುತ್ತೇವೆ. ಬ್ಯಾಂಕುಗಳಿಂದ ಸಾವಿರಾರು ಕೋಟಿ ಸಾಲ ಮಾಡಿ ದೇಶ ಬಿಟ್ಟು ಓಡಿ ಹೋದ ನೀರವ್‌ಮೋದಿ, ವಿಜಯಮಲ್ಯ, 32 ಸಾವಿರ ಕೋಟಿ ಸಾಲ ಮಾಡಿರುವ ಅನಿಲ್‌ಅಂಬಾನಿ ಅವರಿಗೆ ಯಾವುದೇ ಶಿಕ್ಷೆ ಇಲ್ಲ ಎಂದು
ಟೀಕಿಸಿದ ಅವರು 20 ಸಾವಿರ ರೂ. ಸಾಲ ಪಡೆದು ಮರು ಪಾವತಿ ಮಾಡದ ರೈತರ ಮೇಲೆ ಕ್ರಿಮಿನಲ್ ಕೇಸು ದಾಖಲಿಸುತ್ತಾರೆ. ನಾವು ಅಧಿಕಾರಕ್ಕೆ ಬಂದರೆ ಕ್ರಿಮಿನಲ್ ಕೇಸ್ ದಾಖಲಿಸದಂತೆ ಕಾನೂನು ಜಾರಿಗೆ ತರುತ್ತೇವೆ ಎಂದು ಭರವಸೆ ನೀಡಿದರು.
ಗಬ್ಬರ್‌ಸಿಂಗ್ ಟ್ಯಾಕ್ಸ್: ನೋಟು ಅಮಾನ್ಯಿàಕರಣ ಮಾಡಿ ಜಿಎಸ್‌ಟಿ ಎಂಬ ಗಬ್ಬರ್‌ಸಿಂಗ್ ಟ್ಯಾಕ್ಸ್ ಜಾರಿಗೆ ತಂದ ಕೇಂದ್ರ ಸರ್ಕಾರ ಕೆಲವೇ ಮಂದಿಗೆ ಅನುಕೂಲ ಮಾಡಿಕೊಟ್ಟಿತು. ಇದರಿಂದ ದೊಡ್ಡ ಉದ್ಧಿಮೆದಾರರಿಗೆ ಅನುಕೂಲವಾಗಿದೆ. ಆದರೆ, ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಜಿಎಸ್‌ಟಿ ಸೇರಿದಂತೆ ಇತರ ಎಲ್ಲಾ ಬಗೆಯ ತೆರಿಗೆ ಪದ್ಧತಿಯನ್ನು ಸರಳೀಕರಣ ಗೊಳಿಸಲಾಗುವುದು ಎಂದರು. ನಮ್ಮ ನ್ಯಾಯಯುತವಾದ ಬಡವರು ಮತ್ತು ರೈತರಿಗೆ ಹಣವನ್ನು ನೀಡಿ ಅವರಿಗೆ ಉದ್ಯೋಗ ನೀಡಿ ದೇಶದ ಅರ್ಥ ವ್ಯವಸ್ಥೆಯನ್ನು ಉತ್ತಮಪಡಿಸಿ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವುದರ ಜತೆಗೆ ಕೇಂದ್ರ ಸರ್ಕಾರದಲ್ಲಿ ಖಾಲಿ ಇರುವ 22 ಲಕ್ಷ ಹುದ್ಧೆಗಳನ್ನು ಭರ್ತಿ ಮಾಡುವುದರ ಜತೆಗೆ ದೇಶದಲ್ಲಿರುವ ಪಂಚಾಯ್ತಿಗಳಲ್ಲಿ 10 ಲಕ್ಷ ಸೃಷ್ಟಿ ಮಾಡುತ್ತೇನೆ ಎಂದರು.
ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಸಚಿವರಾದ ಡಿ.ಕೆ.ಶಿವಕುಮಾರ್, ಸಾ.ರಾ.ಮಹೇಶ್, ಪುಟ್ಟರಾಜು, ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್, ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡ ಸ್ವಾಮೇಗೌಡ, ರಾಜ್ಯಸಭಾ ಸದಸ್ಯ ಚಂದ್ರಶೇಖರ್, ರಾಜ್ಯಸಭೆ ಮಾಜಿ ಉಪಾಧ್ಯಕ್ಷ ರೆಹಮಾನ್‌ಖಾನ್, ಮಾಜಿ ಸಚಿವರಾದ ಮಹದೇವಪ್ಪ, ಬಿ.ಎಲ್.ಶಂಕರ್, ಶಾಸಕರಾದ ಕೆ.ಮಹದೇವ್, ಅನಿಲ್ ಚಿಕ್ಕಮಾದು, ಅಶ್ವಿನ್‌ಕುಮಾರ್, ಆರ್.ಧರ್ಮಸೇನ, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪಅಮರನಾಥ್, ಕೆಪಿಸಿಸಿ ಕಾರ್ಯದರ್ಶಿ ಅಶ್ವಿನ್‌ಕುಮಾರ್ ರೈ, ಎಐಸಿಸಿ ವಕ್ತಾರೆ ಐಶ್ವರ್ಯ ಮಹದೇವ್ ಇತರರು ಹಾಜರಿದ್ದರು.