ಭಾರತೀನಗರ: ಇಲ್ಲಿಗೆ ಸಮೀಪದ ಗುರುದೇವರಹಳ್ಳಿ ಗ್ರಾಮದಲ್ಲಿ ಭಾನುವಾರ ರಾತ್ರಿ ಜೆಡಿಎಸ್ ಕಾರ್ಯಕರ್ತರು ಹಾಗೂ ಅಂಬರೀಶ್ ಅಭಿಮಾನಿಗಳ ನಡುವೆ ಘರ್ಷಣೆ ನಡೆದಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.
ಕೆ.ಎಂ.ದೊಡ್ಡಿ ವ್ಯಾಪ್ತಿಯಲ್ಲಿ ಭಾನುವಾರ ಸುಮಲತಾ ಪ್ರಚಾರ ಹಮ್ಮಿಕೊಂಡಿದ್ದರು. ಹೀಗಾಗಿ, ಗುರುದೇವರಹಳ್ಳಿ ಗ್ರಾಮದ ಕೆರೆ ಸರ್ಕಲ್ ಬಳಿ ರಾತ್ರಿ 8 ಗಂಟೆ ಸಮಯದಲ್ಲಿ ನೂರಾರು ಅಂಬಿ ಅಭಿಮಾನಿಗಳು ಸುಮಲತಾಗೆ ಕಾದು ನಿಂತಿದ್ದರು.
ಈ ವೇಳೆ, ಬೈಕ್‌ನಲ್ಲಿ ತೆರಳುತ್ತಿದ್ದ ಜೆಡಿಎಸ್ ಕಾರ್ಯಕರ್ತ ವಿ.ಕೆ.ಕಾರ್ತಿಕ್ ಎಂಬಾತ ಹಾರನ್ ಮಾಡಿ ಬೈಕ್ ಮುಂದೆ ಸಾಗಲು ಸ್ಥಳಾವಕಾಶ ನೀಡುವಂತೆ ಮನವಿ ಮಾಡಿದ. ಈ ವೇಳೆ, ಅಂಬಿ ಅಭಿಮಾನಿಗಳ ಗುಂಪು ಹಾಗೂ ಕಾರ್ತಿಕ್ ಗುಂಪಿನ ನಡುವೆ ಘರ್ಷಣೆ ನಡೆಯಿತು.
ಇದಾದ ನಂತರ, ರಾತ್ರಿ 11.30ರ ಸುಮಾರಿಗೆ ಮರುಕಳಿಸಿ ಗ್ರಾಮದ ಈಶ್ವರ ದೇವಾಲಯದ ಮುಂಬಾಗಿಲ ರಸ್ತೆಯಲ್ಲಿ ಅಂಬಿ ಅಭಿಮಾನಿಗಳು ಹಾಗೂ ಕಾರ್ತಿಕ್, ಮತ್ತವರ ಗುಂಪಿನ ನಡುವೆ ಮತ್ತೆ ಘರ್ಷಣೆ ನಡೆಯಿತು.
ಈ ವೇಳೆ, 6 ಮಂದಿ ಗಾಯಗೊಂಡಿದ್ದು, ಗಾಯಾಳುಗಳು ಕೆ.ಎಂ.ದೊಡ್ಡಿ ಹಾಗೂ ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಗ್ರಾಮದೊಳಗೆ ಉದ್ವಿಗ್ನ ಪರಿಸ್ಥಿತಿ ನೆಲೆಸಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತಂದಿದ್ದಾರೆ.
ನಿಖಿಲ್ ಸಾಂತ್ವನ: ಈ ಮಧ್ಯೆ, ಗ್ರಾಮಕ್ಕೆ ಭೇಟಿ ಕೊಟ್ಟು, ಗಾಯಗೊಂಡಿರುವ ಜೆಡಿಎಸ್ ಕಾರ್ಯಕರ್ತರಿಗೆ ಸಾಂತ್ವನ ಹೇಳಿದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆಯಾಗಿದೆ. ಇನ್ನು ಮುಂದೆ ಸುಮ್ಮನೆ ಕೂರಲು ಸಾಧ್ಯವಿಲ್ಲ. ನಮ್ಮ ವರಿಷ್ಠರೊಂದಿಗೆ ಚರ್ಚೆ ನಡೆಸಿ ಗಾಯಾಳುಗಳಿಗೆ ನ್ಯಾಯ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.