Advertisement

ಜೀವನದಲ್ಲಿ ಹೋರಾಡಿ, ಸಾಧನೆ ಮಾಡಬೇಕು

11:44 AM Dec 10, 2019 | Suhan S |

ದಾವಣಗೆರೆ: ಅಂಗವಿಕಲರು ಉತ್ತಮ ಸಾಧನೆಯ ಮೂಲಕ ಯಾರಿಗೇನು ಕಡಿಮೆ ಇಲ್ಲ ಎಂಬುದನ್ನು ತೋರಿಸಬೇಕು ಎಂದು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.. ರವೀಂದ್ರನಾಥ್‌ ತಿಳಿಸಿದರು.

Advertisement

ಸೋಮವಾರ ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿ ಅಂಗವಿಕಲರ ಆಶಾಕಿರಣ ಟ್ರಸ್ಟ್‌ ವತಿಯಿಂದ ಆಯೋಜಿಸಿದ್ದ ವಿಶೇಷ ಮಕ್ಕಳ ರಾಜ್ಯಮಟ್ಟದ ವಿಶೇಷ ಒಲಿಂಪಿಕ್‌ ಅಥ್ಲೆಟಿಕ್ಸ್‌ ಉದ್ಘಾಟಿಸಿ ಮಾತನಾಡಿದ ಅವರು, ಅಂಗವಿಕಲರು ಜೀವನದಲ್ಲಿ ಹೋರಾಡಿ, ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.

ಅಂಗವಿಕಲರಾಗಿ ಜನಿಸಿದರೂ ಅದನ್ನೂ ಮೀರಿ ಬೆಳೆದು ಸಾಧನೆ ಮಾಡಬೇಕು. ಸಾಮಾನ್ಯ ಮಕ್ಕಳು ಆಡುವುದು ನೋಡಿದ್ದೇವೆ. ಅಂಗವಿಕಲ ಮಕ್ಕಳು ಜಾಣ್ಮೆಯಿಂದ ಆಡುತ್ತಾರೆ. ಈಜು ಸೇರಿ ವಿವಿಧ ಕ್ರೀಡೆಗಳಲ್ಲಿ ಸಾಕಷ್ಟು ಸಾಧಕರು ಇದ್ದಾರೆ. ನೀವು ಜೀವನದಲ್ಲಿ ಹೋರಾಡಿ, ಸಾಧನೆ ಮಾಡಬೇಕು ಎಂದು ಹೇಳಿದರು.

ಬೆಂಗಳೂರಿನ ಎಸ್‌ಒಬಿಕೆ ವಲಯ ನಿರ್ದೇಶಕಿ ಕುಮುದಾ ಮಾತನಾಡಿ, ವಿಶೇಷ ಮಕ್ಕಳು ಏನು ಮಾಡಬಲ್ಲರು ಎಂಬ ತಪ್ಪು ಕಲ್ಪನೆ ಇದೆ. ಅನೇಕ ವಿಕಲಚೇತನರು ಸಾಮಾನ್ಯರಂತೆ ಆಡಬಲ್ಲೆವು, ಎಲ್ಲರಂತೆ ನಾವು ಸಮರ್ಥರು ಎಂಬುದನ್ನು ಸಾಬೀತುಪಡಿಸಿದ್ದಾರೆ. ಇನ್ನೂ ಹೆಚ್ಚಿನ ಪ್ರೋತ್ಸಾಹ ದೊರೆತಲ್ಲಿ ಸಾಧನೆ ಮಾಡಲಿದ್ದಾರೆ ಎಂದು ತಿಳಿಸಿದರು. ಹಿಂದಿನ ಅಂತಾರಾಷ್ಟ್ರೀಯ ವಿಶೇಷ ಮಕ್ಕಳ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ 398 ಕ್ರೀಡಾಪಟುಗಳು 358 ಪದಕ ತಂದಿದ್ದಾರೆ. 11 ಜನರು ನಮ್ಮ ರಾಜ್ಯದವರು ಎಂದು ತಿಳಿಸಿದರು.

ಜಿಲ್ಲಾ ಚಿಗಟೇರಿ ಆಸ್ಪತ್ರೆ ಅಧೀಕ್ಷಕ ಡಾ| ನಾಗರಾಜ್‌ ಮಾತನಾಡಿ, ಪ್ರತಿಯೊಬ್ಬರಲ್ಲೂ ಒಂದು ವಿಶೇಷ ಶಕ್ತಿ ಇದೆ. ಗುರಿ ತಲುಪಲು ಸತತ ಪ್ರಯತ್ನ, ಮನಸಿದ್ದರೆ ಉತ್ತೇಜನ ಅಗತ್ಯ ಎಂದರು. ಮಹಾನಗರ ಪಾಲಿಕೆ ಸದಸ್ಯೆ ರೇಖಾ ಸುರೇಶ್‌ ಗಂಡಗಾಳೆ, ಅಂಗವಿಕಲರ ಆಶಾಕಿರಣ ಟ್ರಸ್ಟ್‌ ಕಾರ್ಯದರ್ಶಿ ಪೋಪಟ್‌ಲಾಲ್‌ ಜೈನ್‌, ಕಾರ್ಯಾಧ್ಯಕ್ಷ ರಮಣ್‌ ಲಾಲ್‌ ಪಿ.ಸಂಘವಿ, ಬಾಪೂಜಿ ವಿದ್ಯಾಸಂಸ್ಥೆಯ ಅಧ್ಯಕ್ಷ ರಾಜನಹಳ್ಳಿ ರಮಾನಂದ್‌, ದಾವಣಗೆರೆಯ ಸಿಆರ್‌ಸಿ ಕೇಂದ್ರದ ನಿರ್ದೇಶಕ ಡಾ| ಜ್ಞಾನವೇಲು, ಎಸ್‌ಒಬಿಕೆ ಕ್ರೀಡಾ ನಿರ್ದೇಶಕ ಎ.ಅಮರೇಂದ್ರ, ಡಾ|ಪಿ.ಎಂ.ಮರುಳಸಿದ್ದಪ್ಪ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next