Advertisement

ಸಂಘದಿಂದಲೇ ಬಿಜೆಪಿ ವಿರುದ್ಧ ಹೋರಾಟ

04:36 PM May 06, 2022 | Team Udayavani |

ಕಡೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರದ ಭ್ರಷ್ಟಾಚಾರ ಮುಗಿಲು ಮುಟ್ಟಿದ್ದು ಸಂಘ ಪರಿವಾರವೇ ಬಿಜೆಪಿ ವಿರುದ್ಧ ಹೋರಾಟ ಮಾಡಲಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಎಂ.ಡಿ.ಲಕ್ಷ್ಮೀ ನಾರಾಯಣ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುತ್ತಿಗೆದಾರರಿಗೆ ಶೇ. 40 ಕಮಿಷನ್‌ ವಿಷಯದಲ್ಲಿ ಈಗಾಗಲೇ ಗುತ್ತಿಗೆದಾರ ಸಂಘದ ಅಧ್ಯಕ್ಷರು ಕೆಂಪಣ್ಣ ಮತ್ತು ಪದಾಧಿಕಾರಿಗಳು ಮುಖ್ಯಮಂತ್ರಿಗೆ ದೂರು ನೀಡಿದ್ದಾರೆ. ಪಿಎಸ್‌ಐ ಪರೀಕ್ಷೆಯ ಅಕ್ರಮಗಳು ಬಗೆದಷ್ಟು ಬಯಲಾಗುತ್ತಿದ್ದು ಪ್ರತಿಯೊಂದು ಇಲಾಖೆಯಲ್ಲಿಯೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದನ್ನು ಕಂಡ ಸಂಘ ಪರಿವಾರವು ಬಿಜೆಪಿ ವಿರುದ್ಧವೇ ಹೋರಾಟ ಕೈಗೊಳ್ಳಬೇಕಾಗಿದೆ ಎಂದು ಹಲವು ಸಂಘ ಪರಿವಾರದ ಹಿರಿಯ ಮುಖಂಡರು ನಮ್ಮ ಜೊತೆ ಮಾತನಾಡಿದ್ದಾರೆ ಎಂದು ಹೇಳಿದರು.

ಪಿಎಸ್‌ಐ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಕ್ಕೆ ರಾಜ್ಯದ ಗೃಹ ಸಚಿವ ಅರಗ ಜ್ಞಾನೇಂದ್ರ, ಮತ್ತೋರ್ವ ಸಚಿವ ಡಾ| ಅಶ್ವತ್ಥನಾರಾಯಣ ಅವರು ಶಾಮೀಲಾಗಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದ್ದರೂ ಮುಖ್ಯಮಂತ್ರಿಗಳು ಮುಚ್ಚಿಹಾಕಲು ಮುಂದಾಗಿರುವುದು ಖಂಡನೀಯ. ಅವರು ರಾಜ್ಯದ ಜನತೆಯ ಕ್ಷಮೆ ಕೇಳಬೇಕು ಹಾಗೂ ಈ ಇಬ್ಬರು ಸಚಿವರನ್ನು ಕೂಡಲೇ ಕಿತ್ತು ಹಾಕಬೇಕೆಂದು ಒತ್ತಾಯಿಸಿದರು.

ಬಿಜೆಪಿ ಸಚಿವರೊಬ್ಬರು ಅಕ್ರಮದ ಬಗ್ಗೆ ಮುಖ್ಯಮಂತ್ರಿಗಳಿಗೆ ಮೂರು ತಿಂಗಳ ಹಿಂದೆ ಪತ್ರ ಬರೆದಿದ್ದರೂ ಕ್ರಮ ಕೈಗೊಳ್ಳದೆ ಇದ್ದು ನಮ್ಮ ಪಕ್ಷದ ಶಾಸಕರಾದ ಪ್ರಿಯಾಂಕ ಖರ್ಗೆ ಅವರಿಗೆ ಸಿಐಡಿ ನೋಟೀಸ್‌ ಜಾರಿ ಮಾಡಿದೆ. ಅವರ ಸಚಿವರಿಗೆ ಯಾಕೆ ನೀಡಲಿಲ್ಲ. ಒಂದು ಕಣ್ಣಿಗೆ ಸುಣ್ಣ ಮತ್ತೂಂದು ಕಣ್ಣಿಗೆ ಬೆಣ್ಣೆಯೇ ಎಂದು ಕುಟುಕಿದರು.

ರಾಜ್ಯದ ಜನತೆಗೆ ರಾಮರಾಜ್ಯದ ಕಲ್ಪನೆಯನ್ನು ನೀಡಿ ಅಧಿಕಾರ ನಡೆಸುತ್ತೇವೆ ಎಂದು ಬಂದ ಬಿಜೆಪಿ ಭ್ರಷ್ಟಾಚಾರದಿಂದ ಹಣ ಮಾಡುವುದೇ ದಂಧೆಯಾಗಿರಿಸಿಕೊಂಡು ರಾಜ್ಯವನ್ನು ಲೂಟಿ ಮಾಡುತ್ತಿದೆ. ಇಂತಹ ಸರಕಾರವನ್ನು ಕೂಡಲೇ ವಿಸರ್ಜಿಸಬೇಕೆಂದು ಕಾಂಗ್ರೆಸ್‌ ಒತ್ತಾಯ ಮಾಡುತ್ತದೆ ಎಂದರು.

Advertisement

ಸಿಐಡಿ ತನಿಖೆಯಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ತಪ್ಪಿತಸ್ಥರನ್ನು ರಕ್ಷಿಸುವ ಕೆಲಸವಾಗುತ್ತಿದೆ. ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಯಾಗಬೇಕು. ಸತ್ಯ ಹೊರಬೀಳಬೇಕು. ಅನ್ಯಾಯವಾಗಿರುವ ಮಕ್ಕಳಿಗೆ ನ್ಯಾಯ ದೊರಕಬೇಕು ಎಂದು ಆಗ್ರಹಿಸಿದರು.

ಕೆ.ಎಸ್. ಆನಂದ್‌ ಕಾಂಗ್ರೆಸ್‌ ಪಕ್ಷದಲ್ಲಿ ಸಕ್ರಿಯವಾಗಿದ್ದಾರೆಯೇ ಎಂಬ ಪರ್ತಕರ್ತರ ಪ್ರಶ್ನೆಗೆ ಉತ್ತರಿಸಿದ ಲಕ್ಷ್ಮೀ ನಾರಾಯಣ ಅವರು ಈಗಾಗಲೇ ಸದಸ್ಯತ್ವ ನೋಂದಣಿಯಲ್ಲಿ 45 ಸಾವಿರಕ್ಕೂ ಹೆಚ್ಚಿನ ಜನರನ್ನು ನೋಂದಣಿ ಮಾಡಿಸಿ ಪ್ರಥಮ ಸ್ಥಾನಗಳಿಸಿರುವುದೇ ಅವರು ಪಕ್ಷದಲ್ಲಿ ಸಕ್ರಿಯವಾಗಿರುವುದನ್ನು ತೋರಿಸುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಎಂ.ಎಚ್. ಚಂದ್ರಪ್ಪ, ಕೆ.ಎಸ್. ಆನಂದ್‌, ಬೆಂಕಿಶೇಖರಪ್ಪ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಾಸೂರು ಚಂದ್ರಮೌಳಿ, ಲಿಂಗರಾಜು, ನಿರಂಜನ್‌, ಕೃಷ್ಣಮೂರ್ತಿ, ಹುಚ್ಚಪ್ಪ, ನಂದೀಶ್‌, ಮಲಿಯಪ್ಪ, ರೇಣುಕ ಮತ್ತು ಹರೀಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next