ಹಾವೇರಿ: ಧಾರವಾಡ ಹೈಕೋರ್ಟ್ ನ ಹಿರಿಯ ವಕೀಲ ಬಿ.ಡಿ.ಹಿರೇಮಠ ನೇತೃತ್ವದಲ್ಲಿ ಹಾವೇರಿ ಜಿಲ್ಲೆ ರಟ್ಟೀಹಳ್ಳಿ ಪಟ್ಟಣದಲ್ಲಿ ನೀರಾವರಿ ಯೋಜನೆಗೆ ಭೂಸ್ವಾಧೀನ ವಿರೋಧಿಸಿ ನಡಿತಿರೋ ಹೋರಾಟ ಮತ್ತು ಉಪವಾಸ ಸತ್ಯಾಗ್ರಹ ಕೈ ಬಿಡುವಂತೆ ಮನವಿ ಮಾಡಿದ್ದೇನೆ ಎಂದು ಸತ್ಯಾಗ್ರಹನಿರತ ರೈತರ ಭೇಟಿ ನಂತರ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಪ್ರತಿಭಟನಾಕಾರರು ತುಂಗಾ ಮೇಲ್ದಂಡೆ ಯೋಜನೆಗೆ ಭೂಸ್ವಾಧೀನಗೊಂಡ ರೈತರಿಗೆ ಪರಿಹಾರ ಕೊಡಿಸುವಂತೆ ಬೇಡಿಕೆ ಇಟ್ಟಿದ್ದಾರೆ. ನೀರಾವರಿಯ ಪೈಪಲೈನ್ ಕಾಮಗಾರಿಗೆ ಹತ್ತು ಮೀಟರ್ ಬದಲಾಗಿ ನಾಲ್ಕು ಮೀಟರ್ ಭೂಸ್ವಾಧೀನ ಮಾಡಲಾಗುವುದು. ಈ ಕುರಿತು ಕಂದಾಯ ಇಲಾಖೆಯ ಪ್ರಿನ್ಸಿಪಲ್ ಆಯುಕ್ತರು ಈಗಾಗಲೇ ಆದೇಶ ಮಾಡಿದ್ದಾರೆ.
ರೈತರ ಭೂಮಿ ಸ್ವಾಧೀನದ ಬದಲು ವಕೀಲರಾದ ಹಿರೇಮಠ ಅವರು ಪರ್ಯಾಯ ಮಾರ್ಗದ ಬಗ್ಗೆ ಹೇಳಿದ್ದಾರೆ. ಈ ಬಗ್ಗೆ ಪರಿಶೀಲನೆಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ವಕೀಲರಾದ ಹಿರೇಮಠರು ಕಾನೂನಿನ ಜ್ಞಾನ ಉಳ್ಳವರಾಗಿದ್ದಾರೆ. ಅವರ ಜೊತೆಗೆ ಕುಳಿತು ಪರಿಹಾರದ ಬಗ್ಗೆ ಚರ್ಚಿಸಲಾಗುವುದು.
ಈ ಬಗ್ಗೆ ನಮ್ಮ ಸರಕಾರಕ್ಕೆ ಸಕಾರಾತ್ಮಕ ಚಿಂತನೆ ಇದೆ. ಇಲ್ಲಿ ನಡೆದ ಮಾತುಕತೆ ವಿಚಾರವನ್ನ ಸಿಎಂ ಜೊತೆಗೆ ಚರ್ಚಿಸಿ ಬಗೆಹರಿಸುತ್ತೇನೆ. ಸಿಎಂಗೆ ಇಲ್ಲಿ ನಡೆದ ಮಾತುಕತೆಯ ವರದಿಯನ್ನ ಹೇಳಿದ ಮೇಲೆ ಮತ್ತೊಮ್ಮೆ ಇಲ್ಲಿಗೆ ಬಂದು ವಕೀಲ ಹಿರೇಮಠ ಅವರ ಜೊತೆ ಮಾತುಕತೆ ಮಾಡುತ್ತೇನೆ. ಆ ಮಾತುಕತೆ ಫಲ ನೀಡುವ ವಿಶ್ವಾಸವಿದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಇದನ್ನೂ ಓದಿ: ಈ ಸ್ಮಾರ್ಟ್ ಪೋನ್ ಗಳಲ್ಲಿ 2021ರಿಂದ ವಾಟ್ಸಾಪ್ ಬಂದ್ – ಕಾರಣವೇನು ?