Advertisement

ಒಂದಾಗಿ ಕೋವಿಡ್ ಓಡಿಸೋಣ

12:14 AM May 05, 2021 | Team Udayavani |

ಬೆಂಗಳೂರು: ಇದು ರಾಜಕಾರಣ ಮಾಡುವ ಸಮಯ ಖಂಡಿತ ಅಲ್ಲ…! ಹಾಗೆಂದು ಸರಕಾರದ ತಪ್ಪುಗಳನ್ನು ಎತ್ತಿ ತೋರಿಸಲೇಬಾರದು ಎಂದಲ್ಲ. ಆದರೆ ತಪ್ಪುಗಳನ್ನು ತೋರಿಸುತ್ತಲೇ ಸರಕಾರದ ಕೋವಿಡ್ಆಡಳಿತ ಮತ್ತು ವಿಪಕ್ಷ ನಾಯಕರು ಒಟ್ಟಾಗಿ ಕೆಲಸ ಮಾಡುವ ತುರ್ತು ಸಂದರ್ಭ ಇದು.

Advertisement

ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ನಿರೀಕ್ಷೆಗೂ ಮೀರಿ ವ್ಯಾಪಿಸುತ್ತಿದೆ. ಒಂದೆಡೆ ಏರುತ್ತಲೇ ಇರುವ ಪ್ರಕರಣಗಳು ಮತ್ತು ಸಾವಿನ ಸಂಖ್ಯೆ, ಮತ್ತೂಂದೆಡೆ ಹಾಸಿಗೆ, ಆಮ್ಲಜನಕ, ಐಸಿಯು, ವೆಂಟಿಲೇಟರ್‌ಗಳ ಕೊರತೆ. ಇವೆಲ್ಲ ಕಾರಣದಿಂದಾಗಿ ಆರೋಗ್ಯ ತುರ್ತು ಪರಿಸ್ಥಿತಿ ಅಘೋಷಿತವಾಗಿ ಜಾರಿಯಲ್ಲಿದೆ. ಇಂಥ ಸಮಯದಲ್ಲಿ ಸರಕಾರದಿಂದ ಏಕಾಂಗಿಯಾಗಿ ಎಲ್ಲ ಕೆಲಸ ಮಾಡಲಾಗದು. ಜನರ ಆರೋಗ್ಯ ಕಾಪಾಡಲು ಎಲ್ಲ ರಾಜಕೀಯ ಪಕ್ಷಗಳು ರಾಜಕಾರಣವನ್ನು ಬದಿಗೊತ್ತಿ ರಂಗಕ್ಕಿಳಿಯಬೇಕಾಗಿದೆ.

ಇಂಥ ಜನಪರ ಕಾಳಜಿಯನ್ನು ರಾಜ್ಯದ ರಾಜಕೀಯ ನಾಯಕರಿಂದ ಜನತೆ ಬಯಸುತ್ತಿದ್ದಾರೆ. ಆಡಳಿತದಲ್ಲಿ ಅಪಾರ ಅನುಭವ ಇರುವ ಸಿಎಂ ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ -ಈ ಮೂವರೂ ಜತೆಗೂಡಿದರೆ ಈಗ ಉದ್ಭವಿಸಿರುವ ಸಮಸ್ಯೆ ಬಗೆಹರಿಸಬಹುದು ಎಂಬುದು ಜನರ ಆಶಯ. ಕಳೆದ ಬಾರಿ ಅನಿರೀಕ್ಷಿತವಾಗಿ ಎದುರಾದ ಕೊರೊನಾ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಪ್ರಾಮಾಣಿಕ ಪ್ರಯತ್ನ ನಡೆಯಿತು. ಈಗ ಎರಡನೇ ಅಲೆ ಎದುರಿಸಲು ಕಷ್ಟವಾಗದು. ಇದಕ್ಕೆ ಇಚ್ಛಾಶಕ್ತಿ ಬೇಕಷ್ಟೆ.

ಎಲ್ಲ ರಾಜಕಾರಣಿಗಳು ಒಟ್ಟಾಗಲಿ ಎಂಬುದು “ಉದಯವಾಣಿ’ಯ ಆಶಯ. ವಿಧಾನ ಪರಿಷತ್‌ನ ಮಾಜಿ ಸಭಾಪತಿಗಳು, ಹಿರಿಯ ರಾಜಕೀಯ ನಾಯಕರು ಪಕ್ಷಾತೀತವಾಗಿ ಇದಕ್ಕೆ ಧ್ವನಿಗೂಡಿಸಿದ್ದಾರೆ.

ಏನು ಮಾಡಬಹುದು?  :

Advertisement

ಕೋವಿಡ್ ನಿಯಂತ್ರಣಕ್ಕಾಗಿ ಸಿಎಂ ಸರ್ವಪಕ್ಷಗಳ ಒಂದು ಸಮಿತಿಯನ್ನು ರಚನೆ ಮಾಡಬೇಕು. ಇದರಲ್ಲಿ ಎರಡೂ ಸದನಗಳ ವಿಪಕ್ಷ ನಾಯಕರು, ಮೂರೂ ಪಕ್ಷಗಳ ರಾಜ್ಯಾಧ್ಯಕ್ಷರು, ಕೊರೊನಾ ನಿರ್ವಹಣೆಯ ಹೊಣೆಗಾರಿಕೆ ಹೊಂದಿರುವ ಐವರು ಸಚಿವರು, ಆರೋಗ್ಯ ಮತ್ತು ವೈದ್ಯಕೀಯ ಸಚಿವರು, ಮುಖ್ಯ ಕಾರ್ಯದರ್ಶಿ, ಹಣಕಾಸು ಇಲಾಖೆ ಕಾರ್ಯದರ್ಶಿ, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಆಯುಕ್ತರು ಮತ್ತು ತಜ್ಞರು ಇರಬೇಕು. ಈ ಸಮಿತಿ ಆಗಿಂದಾಗ್ಗೆ ವೀಡಿಯೋ ಕಾನ್ಫರೆನ್ಸ್‌ ನಡೆಸಿ ಪರಿಸ್ಥಿತಿಯ ಸಮರ್ಪಕ ನಿರ್ವಹಣೆಗೆ ಪ್ರಯತ್ನಿಸಬಹುದು. ಪ್ರತಿಯೊಬ್ಬರ ಸಲಹೆ, ಸೂಚನೆಗಳನ್ನು ಆಲಿಸಿ ಕ್ರಮ ಕೈಗೊಳ್ಳಬಹುದು. ಅಧಿಕಾರಿಗಳ ಸಹಿತ ಯಾರದೇ ತಪ್ಪುಗಳ ಬಗ್ಗೆ ಮಾಹಿತಿ ಇದ್ದರೆ ಸಭೆಯಲ್ಲಿ ಬಹಿರಂಗಪಡಿಸಿ ತಪ್ಪುಗಳು ಆಗದಂತೆ ನೋಡಿಕೊಳ್ಳಬಹುದು.

ವೈದ್ಯರ ತಂಡ ರಚಿಸಲಿ :

ರಾಜ್ಯ ವಿಧಾನಸಭೆ ಮತ್ತು ವಿಧಾನಪರಿಷತ್ತಿನಲ್ಲಿ ಹಲವಾರು ವೈದ್ಯರಿದ್ದಾರೆ. ಇವರೆಲ್ಲರನ್ನೂ ಒಂದುಗೂಡಿಸಿ ಒಂದು ವೈದ್ಯ ಸದಸ್ಯರ ತಂಡ ರಚಿಸಬಹುದು. ಇವರು ಜಿಲ್ಲಾ ಮಟ್ಟದಲ್ಲಿ ಪರಿಸ್ಥಿತಿ ನಿರ್ವಹಣೆಗೆ ಸಹಕಾರ ನೀಡಬಹುದು.

ಮತ್ತೆ 15 ದಿನ ಲಾಕ್‌ಡೌನ್‌? :

ರಾಜ್ಯದಲ್ಲಿ ಜಾರಿಯಲ್ಲಿರುವ ಕರ್ಫ್ಯೂ ಮತ್ತೆ 15 ದಿನ ಮುಂದುವರಿಯುವ ಸಾಧ್ಯತೆಯಿದೆ. ಮಂಗಳವಾರ ನಡೆದ ಸಂಪುಟ ಸಭೆಯಲ್ಲಿ  ಕೊರೊನಾ ಪ್ರಕರಣಗಳ ಹೆಚ್ಚಳ ಬಗ್ಗೆಯೂ ಆತಂಕ ವ್ಯಕ್ತವಾಗಿದೆ. ಲಾಕ್‌ಡೌನ್‌ ಮಾಡುವಂತೆ ಸುಪ್ರೀಂ ಕೋರ್ಟ್‌ ಸಲಹೆ ನೀಡಿರುವ ಬಗ್ಗೆಯೂ ಚರ್ಚೆಯಾಯಿತು ಎನ್ನಲಾಗಿದೆ. ಸಚಿವರ ಅಭಿಪ್ರಾಯ ಪಡೆದ ಅನಂತರ ಮೇ 12ರ ಬಳಿಕ ಮತ್ತೆ 15 ದಿನ ಕರ್ಫ್ಯೂ ಮುಂದುವರಿಸೋಣ ಎಂದು ಸಿಎಂ ಹೇಳಿದರು ಎನ್ನಲಾಗಿದೆ.

ಎಲ್ಲರನ್ನು ಒಳಗೊಂಡ ಕಾರ್ಯಪಡೆ :

ಸರಕಾರ ಮತ್ತು ವಿಪಕ್ಷ ನಾಯಕರು ಮಾತ್ರ ಸೇರಿ ಕಾರ್ಯಪಡೆ ಮಾಡಲಾ ಗದು. ಕಾರ್ಯಪಡೆಯಲ್ಲಿ ಸಚಿವರು, ತಜ್ಞರು, ಅಧಿಕಾರಿಗಳು ಇರಬೇಕಾಗುತ್ತದೆ. ಸಿಎಂ 2 ದಿನಕ್ಕೊಮ್ಮೆ ಸಮಾಲೋಚನೆ ನಡೆಸಬಹುದು. ವಾಸ್ತವಾಂಶ ವಿವರ ಒದ ಗಿಸಿ, ಸರಕಾರ ಏನು ಮಾಡುತ್ತಿದೆ ಎಂಬುದರ ಮಾಹಿತಿ ನೀಡಬಹುದು. ಸಭೆಗೆ ಉಭಯ ಸದನಗಳ ನಾಯಕರು, ಪಕ್ಷಗಳ ರಾಜ್ಯಾಧ್ಯಕ್ಷರನ್ನೂ ಕರೆಯಬಹುದು.  ಬಿ.ಎಲ್‌. ಶಂಕರ್‌, ವಿಧಾನಪರಿಷತ್‌ ಮಾಜಿ ಸಭಾಪತಿ

ಯಡಿಯೂರಪ್ಪ ಮಾದರಿಯಾಗಲಿ :

ಚುನಾವಣೆ ಸಮಯದಲ್ಲಿ ರಾಜಕೀಯ ಮಾಡೋಣ. ಆದರೆ ಜನರ ಜೀವ ರಕ್ಷಣೆ ಈಗಿನ ಅಗತ್ಯ. ಸಿಎಂ ಯಡಿಯೂರಪ್ಪ ಹೆಜ್ಜೆ ಮುಂದಿಟ್ಟು ಎಲ್ಲರನ್ನೂ ಜತೆಗೂಡಿಸಿ ಕೆಲಸ ಮಾಡಿ ಮಾದರಿಯಾಗಲಿ. ಕೇಂದ್ರದಲ್ಲಿ ಪ್ರಧಾನಿ ಕೂಡ ಈ ಕಾರ್ಯ ಮಾಡಬೇಕಿತ್ತು. ಆಗ ರಾಜ್ಯ ಸರಕಾರಗಳು ಅದನ್ನು ಅನುಸರಿಸು ತ್ತಿದ್ದವೇನೋ. ಈಗಲೂ ಕಾಲ ಮಿಂಚಿಲ್ಲ. ಸಿಎಂ ಮೊದಲ ಹೆಜ್ಜೆ ಇರಿಸಬೇಕು. ಎಂ.ಸಿ. ನಾಣಯ್ಯ, ಹಿರಿಯ ರಾಜಕಾರಣಿ

ಜನರು ಮೆಚ್ಚಿಕೊಳ್ಳುತ್ತಾರೆ :

ಈ ಕ್ಲಿಷ್ಟ ಸಂದರ್ಭದಲ್ಲಿ ನಾವೆಲ್ಲರೂ ರಾಜಕೀಯ ಮಾನಸಿಕತೆಯಿಂದ ಹೊರ ಬರಬೇಕು. ವಿಪಕ್ಷಗಳಲ್ಲೂ ಅನುಭವಿಗಳು ಹಲವರಿದ್ದಾರೆ. ಅವರು ಮುಂಚೂ ಣಿಯಲ್ಲಿ ನಿಂತು ಕೆಲಸ ಮಾಡಬೇಕು. ಇದು ಯಾರೂ ಯಾರನ್ನೂ ದ್ವೇಷಿಸುವ ಅಥವಾ ಆರೋಪ- ಪ್ರತ್ಯಾರೋಪ ಮಾಡುವ ಸಮಯವಲ್ಲ. ಎಲ್ಲರೂ ಒಟ್ಟಾಗಿ ಕೊರೊನಾದ ವಿರುದ್ಧ ಹೋರಾಡಬೇಕು. ಇದು ಸಂಕಷ್ಟ ಪರಿಸ್ಥಿತಿ. ವಿಪಕ್ಷಗಳ ನಾಯಕರು ಕೂಡ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವರು

ಹೊಂದಾಣಿಕೆ ಅಗತ್ಯ :

ಕೋವಿಡ್ ನಿಯಂತ್ರಣ ವಿಚಾರದಲ್ಲಿ ಸರಕಾರ ಮತ್ತು ವಿಪಕ್ಷಗಳು ರಾಜಕೀಯ ಲೆಕ್ಕಾಚಾರ ಹಾಕದೆ ರಾಜ್ಯದ ಜನರ ಹಿತದೃಷ್ಟಿಯಿಂದ ಹೊಂದಾ ಣಿಕೆಯ ಕೆಲಸ ಮಾಡುವ ಅಗತ್ಯ ಇದೆ. ಎಲ್ಲ ಪಕ್ಷಗಳ ನಾಯಕರನ್ನು ಒಳಗೊಂಡ ಒಂದು ಸಮಿತಿ ರಚನೆಗೆ ಸ್ಪೀಕರ್‌ ಮುಂದಾಳತ್ವ ವಹಿಸಿ, ಸಭೆ ನಡೆಸಬಹುದು.  ಡಿ.ಎಚ್‌. ಶಂಕರಮೂರ್ತಿ, ವಿಧಾನಪರಿಷತ್‌ ಮಾಜಿ ಸಭಾಪತಿ

ಎಲ್ಲರೂ ಜತೆಗೂಡಿ ಕೆಲಸ ಮಾಡಬೇಕು :

ಇದು ರಾಷ್ಟ್ರೀಯ ದುರಂತ. ಈ ಸಂದರ್ಭದಲ್ಲಿ ಆಡಳಿತ, ವಿಪಕ್ಷ ಅಂತ ಇರಬಾರದು. ಎಲ್ಲರಿಗೂ ಸೇರಿ ಕೆಲಸ ಮಾಡಬೇಕು. ಈ ಬಗ್ಗೆ ಅಧಿಕಾರ ನಡೆಸುವವರು ಗಮನ ಹರಿಸಿ, ಎಲ್ಲರನ್ನು ಸೇರಿಸಿಕೊಂಡು ಕೆಲಸ ಮಾಡುವುದು ಒಳ್ಳೆಯದು.ರಾಮಚಂದ್ರ ಗೌಡ, ಹಿರಿಯ ರಾಜಕಾರಣಿ

ಇಂದಿನ ಪರಿಸ್ಥಿತಿಯಲ್ಲಿ  ಖಂಡಿತ ಸಾಧ್ಯ :

ಮುಖ್ಯಮಂತ್ರಿ, ವಿಪಕ್ಷ ನಾಯಕರು, ಉಭಯ ಸದನಗಳ ನಾಯಕರು, ಆರೋಗ್ಯ ಸಚಿವರು, ಮುಖ್ಯ ಕಾರ್ಯದರ್ಶಿಯವರನ್ನು ಸದಸ್ಯ ಕಾರ್ಯದರ್ಶಿಯಾಗಿ ಮಾಡಿಕೊಂಡು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅಥವಾ ಆಯುಕ್ತರನ್ನು ಒಳಗೊಂಡ ತಂಡವಾಗಿ ಕೆಲಸ ಮಾಡಬಹುದು. ಸಿಎಂ ವಾರಕ್ಕೊಮ್ಮೆ ಎಲ್ಲರ ಜತೆ ಚರ್ಚಿಸಬೇಕು. ಸರಕಾರ ಎಲ್ಲರನ್ನೂ ಹೇಗೆ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತದೆ ಎಂಬುದರ ಮೇಲೆ ಇದು ನಿರ್ಧಾರ. ತಜ್ಞರನ್ನೂ ಆ ಸಮಿತಿ ಅಥವಾ ಸಭೆಗೆ ಆಹ್ವಾನಿಸಬೇಕು. ತಜ್ಞರ ತಂಡವು ಜಿಲ್ಲಾಧಿಕಾರಿಗಳು, ಆರೋಗ್ಯಾಧಿಕಾರಿಗಳಿಂದ ಮಾಹಿತಿ ಪಡೆದು ಸಿಎಂಗೆ ವರದಿ ನೀಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತದ ತಪ್ಪುಗಳ ಬಗ್ಗೆ ಸದುದ್ದೇಶ ಇರಿಸಿಕೊಂಡು ಟೀಕಿಸಬಹುದು. ಹಾಗಾದಾಗ ಮಾತ್ರ ಸಮಸ್ಯೆ ನಿರ್ವಹಣೆ ಸಾಧ್ಯ. ವಿ.ಆರ್‌. ಸುದರ್ಶನ್‌, ವಿಧಾನ ಪರಿಷತ್‌ ಮಾಜಿ ಸಭಾಪತಿ

Advertisement

Udayavani is now on Telegram. Click here to join our channel and stay updated with the latest news.

Next