ಮುಂಬಯಿ: ಭಾರತ-ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯ ರದ್ದಾದ ಬಳಿಕ ಹಲವು ರೀತಿಯ ಆರೋಪ, ಪ್ರತ್ಯಾರೋಪಗಳು ಕೇಳಿಬಂದವು. ಇದಕ್ಕೆ ಸಂಬಂಧಿಸಿದ ಊಹಾಪೋಹಗಳನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಿರಾಕರಿಸಿದ್ದಾರೆ.
ಈ ಟೆಸ್ಟ್ ಆಡಲು ಭಾರತೀಯ ಆಟಗಾರರು ನಿರಾಕರಿಸಿದ ಕಾರಣ ರದ್ದು ಮಾಡಬೇಕಾಯಿತು, ಇದಕ್ಕೂ ಐಪಿಎಲ್‌ಗೂ ಸಂಬಂಧವಿಲ್ಲ ಎಂದಿದ್ದಾರೆ.
“ತಂಡದೊಂದಿಗೆ ಅತ್ಯಂತ ನಿಕಟ ಒಡನಾಟ ಹೊಂದಿದ್ದ ಫಿಸಿಯೊ ಯೋಗೇಶ್ ಪರ್ಮಾರ್‌ಗೆ ಕೊರೊನಾ ತಗುಲಿತು. ಅವರು ಪ್ರತಿನಿತ್ಯ ಆಟಗಾರರಿಗೆ ಅಂಗಮರ್ದನ ಮಾಡುತ್ತಿದ್ದರು. ಅವರಿಗೇ ಬಂದಿರುವ ಕೊರೊನಾ ತಮಗೆ ಸಹಜವಾಗಿ ಅಂಟಿಕೊಂಡಿರುತ್ತದೆ ಎಂಬ ಹೆದರಿಕೆ ಆಟಗಾರರಲ್ಲಿತ್ತು. ಆದ್ದರಿಂದಲೇ ಟೆಸ್ಟ್ ರದ್ದುಪಡಿಸಲು ನಿರ್ಧರಿಸಿದೆವು. ಇದಕ್ಕೂ ಐಪಿಎಲ್‌ಗೂ ಯಾವ ಕಾರಣಕ್ಕೂ ಸಂಬಂಧವಿಲ್ಲ’ ಎಂದು ಗಂಗೂಲಿ ಸ್ಪಷ್ಟಪಡಿಸಿದರು.
“ಆಟಗಾರರು ಪಂದ್ಯವಾಡಲು ನಿರಾಕರಿಸಿದ್ದು ಸಹಜ. ಅದಕ್ಕೆ ಅವರನ್ನು ದೂರುವಂತಿಲ್ಲ. ಅಂತಹ ಸ್ಥಿತಿಯಲ್ಲಿ ಹೇಗೆ ಆಡಿ ಎನ್ನುತ್ತೀರಿ?’ ಎಂದು ಗಂಗೂಲಿ ಪ್ರಶ್ನಿಸಿದ್ದಾರೆ.
ಎರಡು ಹೆಚ್ಚುವರಿ ಟಿ20 ಆಫರ್ :
ಇದರಿಂದ ಇಸಿಬಿಗೆ 406 ಕೋಟಿ ರೂ. ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವರ್ಷ ಸೀಮಿತ ಓವರ್‌ಗಳ ಸರಣಿಗಾಗಿ ಇಂಗ್ಲೆಂಡ್‌ಗೆ ತೆರಳಲಿರುವ ಭಾರತ ತಂಡ 2 ಹೆಚ್ಚುವರಿ ಟಿ20 ಪಂದ್ಯವಾಡುವ ಆಫರ್ ನೀಡಿದೆ. ಇದರಿಂದ ಇಂಗ್ಲೆಂಡ್ ಮಂಡಳಿಗೆ ಪೂರ್ತಿ ಹಣ ಬರದಿದ್ದರೂ ಹತ್ತಿರ ಹತ್ತಿರ ನಷ್ಟ ಭರ್ತಿಯಾಗುತ್ತದೆ.