ನವದೆಹಲಿ: ಭಾರತದಲ್ಲಿ 736 ಜಿಲ್ಲೆಗಳ ಪೈಕಿ 452ರಲ್ಲಿ ಕೋವಿಡ್ ಸೋಂಕು ವ್ಯಾಪಿಸಿದೆ. ಜನಸಂಖ್ಯೆಯ ಆಧಾರದಲ್ಲಿ ನೋಡುವುದಾದರೆ, ಈ ಜಿಲ್ಲೆಗಳಲ್ಲಿ ವಾಸಿಸುವ ಶೇ.77.53ರಷ್ಟು ಮಂದಿಗೆ ಸೋಂಕು ತಗಲುವ ಅಪಾಯವಿದೆ.
ಆತಂಕಕಾರಿ ಅಂಶವೆಂದರೆ, ಸೋಂಕು ವ್ಯಾಪಿಸಿರುವ ಜಿಲ್ಲೆಗಳ ಪೈಕಿ ಕೆಲವೆಡೆ ಗಣನೀಯ ಸಂಖ್ಯೆಯ ಪ್ರಕರಣಗಳು ಹಾಗೂ ಸಾವು ಸಂಭವಿಸಿದ್ದು, ಅವುಗಳು ಹಾಟ್ ಸ್ಪಾಟ್ ಜಿಲ್ಲೆಗಳಾಗಿ ಬದಲಾಗಿವೆ. ಇಲ್ಲಿನ ಸೂಪರ್ ಸ್ಪ್ರೆಡರ್‌ಗಳು, ಆಸ್ಪತ್ರೆಗಳು, ಐಸಿಯುಗಳ ಕೊರತೆ ಮತ್ತಿತರ ಕಾರಣಗಳು 15 ಪ್ರಮುಖ ಜಿಲ್ಲೆಗಳಲ್ಲಿ ಅಪಾಯದ ಮುನ್ಸೂಚನೆ ನೀಡಿದೆ.
ಸೋಂಕು ಹೆಚ್ಚಲು ಕಾರಣವೇನು?: ಮಹಾರಾಷ್ಟ್ರದ ಒಟ್ಟು ಪ್ರಕರಣಗಳ ಮೂರನೇ ಎರಡರಷ್ಟು ಕೇವಲ ಮುಂಬೈವೊಂದರಲ್ಲೇ ಪತ್ತೆಯಾಗಿದೆ. ಮುಂಬೈನಲ್ಲಿ ಜನಸಾಂದ್ರತೆ ಹೆಚ್ಚಿರುವುದೇ ಸೋಂಕು ಹೆಚ್ಚಲು ಕಾರಣ.
ಗುಜರಾತ್‌ನ ಅಹಮದಾಬಾದ್ ನಲ್ಲಿ ಸೂಪರ್ ಸ್ಪ್ರೆಡರ್‌ಗಳಿಂದಾಗಿಯೇ ಪ್ರಕರಣಗಳ ಸಂಖ್ಯೆ ದಿನೇ ದಿನೆ ಏರಿಕೆಯಾಗುತ್ತಿದೆ. ಅಲ್ಲದೆ, ತರಕಾರಿ ವ್ಯಾಪಾರಿಗಳು, ಹಾಲು, ಕಿರಾಣಿ ಅಂಗಡಿಯ ಕಾರ್ಮಿಕರಿಂದ ಸೋಂಕು ಹಬ್ಬಿರುವ ಕಾರಣ, ಅವರ ಸಂಪರ್ಕಿತರಿಗೆ ಸೋಂಕು ಬೇಗನೆ ಹಬ್ಬುತ್ತಿದೆ.
ಇನ್ನು, ಆರಂಭಿಕ ಹಂತದಲ್ಲಿ ನಿರ್ಲಕ್ಷ್ಯ ವಹಿಸಿದ್ದೇ ಮಧ್ಯಪ್ರದೇಶದ ಇಂದೋರ್‌ನಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗಲು ಕಾರಣ ಎನ್ನಲಾಗುತ್ತಿದೆ. ಇನ್ನು, ದೆಹಲಿಯ ವಿಚಾರಕ್ಕೆ ಬಂದರೆ, ನಿಜಾಮುದ್ದೀನ್ ಮರ್ಕಜ್‌ನಲ್ಲಿ ನಡೆದ ಧಾರ್ಮಿಕ ಸಮಾವೇಶದಿಂದಾಗಿಯೇ 3 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.