Advertisement

ಫಿಫಾ ವಿಶ್ವಕಪ್‌ ಪಂದ್ಯಾವಳಿ: ಭಾರತಕ್ಕೆ ಯಾಕಿಲ್ಲ ಅರ್ಹತೆ?

06:00 AM Jun 20, 2018 | |

ಅಂತಾರಾಷ್ಟ್ರೀಯ ಫ‌ುಟ್‌ಬಾಲ್‌ ಸಂಘಟನೆಗಳ ಮಹಾ ಒಕ್ಕೂಟ (ಫೆಡರೇಶನ್‌ ಆಫ್ ಇಂಟರ್‌ನ್ಯಾಶನಲ್‌ ಫ‌ುಟ್‌ಬಾಲ್‌ ಅಸೋಸಿಯೇಶನ್ಸ್‌) “ಫಿಫಾ’ದ ಆಸರೆಯಲ್ಲಿ ರಷ್ಯಾದಲ್ಲಿ ನಡೆ ಯುತ್ತಿರುವ ವಿಶ್ವಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿಯಲ್ಲಿ ಈ ಬಾರಿ 32 ದೇಶಗಳ ತಂಡಗಳು ಭಾಗವಹಿಸುತ್ತಿದ್ದು, ಇವುಗಳಲ್ಲಿ ಭಾರತ ಸೇರಿಲ್ಲವೆಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಸುಮಾರು 130 ಕೋಟಿ ಜನಸಂಖ್ಯೆಯಿರುವ ಭಾರತ ಪ್ರಜೆಗಳಾದ ನಾವು ಇದೆಲ್ಲ ನಮಗೆ ಸಂಬಂಧಿಸಿಲ್ಲವೇನೋ ಎಂಬ ರೀತಿಯಲ್ಲಿ ನಿತ್ಯದಂತೆ ಟಿವಿ ವೀಕ್ಷಣೆ ಮುಂದುವರಿಸಿದ್ದೇವೆ. ನಮ್ಮ ಸ್ಥಿತಿ ಹೀಗಾದರೆ, ಕೇವಲ ಮೂರು ಲಕ್ಷ ಜನಸಂಖ್ಯೆ ಹೊಂದಿರುವ ಐಸ್‌ಲ್ಯಾಂಡ್‌ ಹಾಗೆಯೇ 34 ಲಕ್ಷ ಜನಸಂಖ್ಯೆಯಿರುವ ಉರುಗ್ವೆ

Advertisement

ಕೂಡ ತಮ್ಮ ತಂಡವನ್ನು ತೊಡಗಿಸಿವೆ. ವಾಸ್ತವವಾಗಿ, ದಕ್ಷಿಣ ಅಮೆರಿಕದ ದೇಶವಾದ ಉರುಗ್ವೇ, ಮೂಲತಃ ದನಗಾಹಿಗಳ ಹಾಗೂ ಕುರಿಗಾಹಿಗಳ ನಾಡು; ಅಲ್ಲಿನ ಜನಸಂಖ್ಯೆಗಿಂತ ಮೂರು ಪಟ್ಟು ಅಧಿಕ ಸಂಖ್ಯೆಯಲ್ಲಿ ಜಾನುವಾರುಗಳನ್ನು ಹಾಗೂ ಅಸಂಖ್ಯಾತ ಕುರಿಗಳನ್ನು ಹೊಂದಿರುವ ರಾಷ್ಟ್ರ ಅದು. ಈ ಕಾಲ್ಚೆಂಡಾಟದ ಪಂದ್ಯಾವಳಿ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಯಬೇಕೆಂಬ ನಿಯಮದ ಪ್ರಕಾರ ಈ ವರ್ಷ ನಡೆಯುತ್ತಿದೆ. ಇದರ ಹಿಂದಿನ (20ನೆಯ ಹಾಗೂ 19ನೆಯ) ಆವೃತ್ತಿಗಳು ನಡೆದಿರುವುದು, ಬ್ರೆಜಿಲ್‌ನಲ್ಲಿ (2014) ಹಾಗೂ ದಕ್ಷಿಣ ಆಫ್ರಿಕದಲ್ಲಿ. ಇಲ್ಲಿ ನಾವು ಸಮಾಧಾನಪಟ್ಟುಕೊಳ್ಳಬಹುದಾದ ಅಂಶವೊಂದಿದೆ. ಅದೆಂದರೆ, ವಿಶ್ವದ ಈ ಪೂರ್ವಭಾಗದಲ್ಲಿ ಚೀನ ಹಾಗೂ ಪಾಕಿಸ್ತಾನ ಕೂಡ ಭಾಗವಹಿಸುತ್ತಿಲ್ಲ. ಈ ಹಿಂದೆ ಫಿಫಾ ವಿಶ್ವ ಕಪ್‌ ಚಾಂಪಿಯನ್‌ ಶಿಪ್‌ನ ಅರ್ಹತೆಯನ್ನು ನಾವು ಅಧಿಕೃತವಾಗಿ ಪಡೆದುಕೊಂಡಿದ್ದುದು ಬ್ರೆಜಿಲ್‌ನ ಆತಿಥ್ಯದಲ್ಲಿ ನಡೆದಿದ್ದ ಪಂದ್ಯಾ ವಳಿಯಲ್ಲಿ (1950). ಆದರೆ ಆ ದಿನಗಳಲ್ಲಿ ಪ್ರವಾಸ ಹಾಗೂ ಹಡಗುಯಾನದ ದುಬಾರಿವೆಚ್ಚ ಭರಿಸಲು ನಾವು ಅಸಮರ್ಥ ರಾಗಿದ್ದುದರಿಂದ ನಮ್ಮ ತಂಡವನ್ನು ಕಳುಹಿಸುವುದು ಸಾಧ್ಯವಾಗಿ ರಲಿಲ್ಲ. ಇನ್ನೊಂದು ಕಾರಣವೆಂದರೆ, ನಮ್ಮ ತಂಡದ ಕಾಲ್ಚೆಂಡಿಗರು ಬರಿಗಾಲಲ್ಲಿ ಆಡುತ್ತಿದ್ದುದು; ಆಟಗಾರರು ಶೂಗಳನ್ನು ಕಟ್ಟುನಿಟ್ಟಾಗಿ ಧರಿಸಬೇಕೆಂಬ ನಿಯಮವನ್ನು ಫಿಫಾ ವಿಧಿಸಿದ್ದುದು. 1948ರಲ್ಲಿ ನಮ್ಮ ತಂಡ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಬರಿಗಾಲಲ್ಲೇ ಆಡಿತ್ತು. 70 ವರ್ಷಗಳ ಹಿಂದೆ, ಅಂದಿನ ಮೈಸೂರು ರಾಜ್ಯ ಅದ್ಭುತ ಫ‌ುಟ್ಬಾಲ್‌ ಆಟಗಾರರ ತಂಡವಿದ್ದ ರಾಜ್ಯಗಳಲ್ಲಿ ಒಂದಾಗಿತ್ತು. 

ನಾವು ಆ ದಿನಗಳಲ್ಲಿ ಸಾಧಿಸಿದ್ದ ದಾಖಲೆ ನಿಜಕ್ಕೂ ಉಲ್ಲೇಖನೀಯ. ಆ ಬಾರಿಯ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಭಾರತೀಯ ತಂಡದ ಸದಸ್ಯರಲ್ಲಿ ಏಳುಮಂದಿ ಮೈಸೂರು ರಾಜ್ಯದವರೇ ಆಗಿದ್ದರು. ಅವರೆಂದರೆ – ಲಕ್ಷ್ಮೀನಾರಾಯಣನ್‌, ಮುರುಗೇಶ್‌ ರಹಮತ್‌, ಸೋಮಣ್ಣ, ಎಸ್‌.ಎ. ಬಶೀರ್‌, ಮೇವಾಲಾಲ್‌ ಹಾಗೂ ಷಣ್ಮುಗಂ. ಸೋಮಣ್ಣ ಅವರು ಸ್ವಾತಂತ್ರ್ಯ ಲಭಿಸಿದ ಬಳಿಕ ಮೈಸೂರು ಹೈಕೋರ್ಟಿನ ಎರಡನೆಯ ಮುಖ್ಯ ನ್ಯಾಯಾಧೀಶ ರಾಗಲಿದ್ದ ನ್ಯಾ| ಪಿ. ಮೇದಪ್ಪ ಅವರ ಅಳಿಯ. ಕರ್ನಾಟಕ ಕ್ರೀಡಾ ಚರಿತ್ರೆಯ ಅದ್ಭುತವೆನ್ನಬಹುದಾದ ವಿದ್ಯಮಾನಗಳಲ್ಲಿ ಇದೂ ಒಂದು. ಅಂದಿನ ದಿನಗಳಲ್ಲಿ ಕ್ರಿಕೆಟ್‌ನಲ್ಲಿ ಮುಂಬಯಿ (ಬಾಂಬೆ) ಹಲವು ದಶಕಗಳ ಕಾಲ ವಿಜೃಂಭಿಸಿದರೆ, ನಮ್ಮ ಮೈಸೂರು 1960ರ ದಶಕದ ಉತ್ತರ ಭಾಗದವರೆಗೂ ತಾರಾಮೌಲ್ಯವಿದ್ದ ಫ‌ುಟ್‌ಬಾಲ್‌ ತಂಡವನ್ನು ಹೊಂದಿತ್ತು. 1946-47, 1952-53, 1967-68 ಹಾಗೂ 1968-69ರಲ್ಲಿ ನಾವು ಸಂತೋಷ್‌ ಟ್ರೋಫಿಯನ್ನು ಗೆದ್ದು ವಿಜೃಂಭಿಸಿದ್ದು ಈಗ ಇತಿಹಾಸ.

ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ಭಾರತೀಯ ಫ‌ುಟ್‌ಬಾಲ್‌ ಕ್ರೀಡೆಯಲ್ಲಿ ಒಂದು ಪರಿವರ್ತನೆ ಕಂಡುಬಂದಿದೆ. ಈ ಪರಿವರ್ತನೆ ಈ ಆಟಕ್ಕೆ ಸಂಬಂಧಿಸಿದಂತೆ ಒಂದು ಉತ್ತಮ ಬೆಳವಣಿ ಗೆಯೇ ಹೌದು. 2014ರಲ್ಲಿ ಭಾರತದ ಪುರುಷರ ವೃತ್ತಿಪರ ಫ‌ುಟ್‌ಬಾಲ್‌ ಲೀಗ್‌ (ಇಂಡಿಯನ್‌ ಸೂಪರ್‌ಲೀಗ್‌ – ಐಎಸ್‌ಎಲ್‌) ಅಸ್ತಿತ್ವಕ್ಕೆ ಬಂದಿದೆ. ಇದು ಕ್ರಿಕೆಟ್‌ಗಾಗಿ ಇರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌)ನಂಥ ಒಂದು ಘಟಕ. ಐಎಸ್‌ಎಲ್‌ನ ಪ್ರಾಯೋಜಕತ್ವವನ್ನು ಕಾರ್ಪೊರೇಟ್‌ ಕ್ಷೇತ್ರ ವಹಿಸಿರು ವುದರಿಂದ ಇದಕ್ಕೆ ಬೃಹತ್‌ ಪ್ರಮಾಣದಲ್ಲಿ ಹಣ ಹರಿದು ಬರುತ್ತಿದೆ. ಭಾರತೀಯ ಕ್ರಿಕೆಟ್‌ ವ್ಯಾಪಾರೀಕರಣಗೊಂಡಿದೆ. ಆಟಗಾರರನ್ನು ಗುಲಾಮರಂತೆ ಹರಾಜು ಹಾಕಲಾಗುತ್ತಿದೆ ಎಂಬ ಟೀಕೆ ವ್ಯಕ್ತ ವಾಗಿರುವುದು ನಿಜ. ಆದರೆ ಫ‌ುಟ್‌ಬಾಲ್‌ನ ಮಟ್ಟಿಗೆ ಇಂಥ ದೊಂದು ವಿದ್ಯಮಾನ ನಿಜಕ್ಕೂ ಸ್ವಾಗತಾರ್ಹ. ದುರದೃಷ್ಟವಶಾತ್‌, ಐಎಸ್‌ಎಲ್‌ನಲ್ಲಿ ಅತ್ಯಧಿಕ ಮೊತ್ತಕ್ಕೆ ಹರಾಜಾಗುವ ತಾರಾ ಆಟಗಾರರು ವಿದೇಶೀಯರೇ. ಆದರೆ ಒಂದು ಅಂದಾಜಿನ ಪ್ರಕಾರ ಭಾರತೀಯ ಕಾಲ್ಚೆಂಡು ಆಟಗಾರರ ಸರಾಸರಿ ಸಂಪಾದನೆ ಮೊತ್ತದಲ್ಲಿ ದೊಡ್ಡಮಟ್ಟದ ಏರಿಕೆಯಾಗಿದೆ. ಬೈಚುಂಗ್‌ ಭುಟಿಯಾ, ಸುನೀಲ್‌ ಚೆಟ್ರಿ ಹಾಗೂ ಗೋಲ್‌ಕೀಪರ್‌ ಸುಬ್ರತಾ ಪಾಲ್‌ರಂಥ ನಮ್ಮ ಫ‌ುಟ್‌ಬಾಲ್‌ ತಾರೆಯರು ಉತ್ತಮ ಸ್ಥಿತಿಯ ಲ್ಲಿದ್ದಾರೆ. ಫ‌ುಟ್‌ಬಾಲ್‌ ಒಂದು ಭಾವನೆಗೆ ಸಂಬಂಧಿಸಿದ ಕ್ರೀಡೆ ದೊಡ್ಡ ಮೊತ್ತ ಸಂಪಾದಿಸಿಕೊಡುವ ಆಟವಲ್ಲ ಎಂಬ ಮಾತೆಲ್ಲ ಒಂದು ಕಾಲದ್ದಾಯಿತು. ಇಂದು ಐಪಿಎಲ್‌ ಕ್ರಿಕೆಟ್‌ ತಂಡಗಳಿದ್ದಂತೆ ಫ‌ುಟ್‌ಬಾಲ್‌ ಕ್ಷೇತ್ರದಲ್ಲಿ ಕೂಡ ಮಿಂಚುತ್ತಿರುವ ಹೆಸರಿನ ವೃತ್ತಿಪರ ಕ್ಲಬ್‌ಗಳೇ ಇವೆ. ಬೆಂಗಳೂರು ತಂಡ, ಮುಂಬೈ ಸಿಟಿ, ಪುಣೆ ಸಿಟಿ, ಅಥವಾ ಕೇರಳ ಬ್ಲಾಸ್ಟರ್ ಹಾಗೂ ಡೆಲ್ಲಿ ಡೈನಮೋಸ್‌ ಇತ್ಯಾದಿ. ಏನಿದ್ದರೂ ಇಂಡಿಯನ್‌ ಸೂಪರ್‌ಲೀಗ್‌ ಅಸ್ತಿತ್ವಕ್ಕೆ ಬರುವ ಮುನ್ನ ಕೂಡ ಕೋಲ್ಕತಾ ಕೇಂದ್ರಿತ ಕ್ಲಬ್‌ಗಳಾದ ಮೋಹನ್‌ ಬಗಾನ್‌, ಈಸ್ಟ್‌ ಬೆಂಗಾಲ್‌ ಅಥವಾ ಮೊಹಮ್ಮದಿಯನ್‌ ನ್ಪೋರ್ಟಿಂಗ್‌ಗಳ ಪರವಾಗಿ ಆಡುತ್ತಿದ್ದ ನಮ್ಮ ಕಾಲ್ಚೆಂಡಿಗರು ಚೆನ್ನಾಗಿ ಸಂಪಾದಿಸುತ್ತಿದ್ದವರೇ. ಆದರೆ ಆ ಕಾಲದಲ್ಲಿ ಕೂಡ ಶೈಲೇಂದ್ರನಾಥ ಮನ್ನಾರಂಥ ನಮ್ಮ ಶ್ರೇಷ್ಠ ಕಾಲ್ಚೆಂಡಾಟಗಾರ ಉದರಂಭರಣಕ್ಕಾಗಿ ಹರ ಸಾಹಸ ಪಟ್ಟದ್ದುಂಟು. ಅವರು ಭಾರತೀಯ ಭೂಗರ್ಭ ಸರ್ವೇಕ್ಷಣ ಇಲಾಖೆ ಯಲ್ಲಿ ಒಬ್ಬ ಗುಮಾಸ್ತರಾಗಿದ್ದರು. ನಮ್ಮ ಒಂದು ಕಾಲದ ಕ್ರಿಕೆಟ್‌ ಪಟುಗಳ ಕಥೆಯೂ ಇದೇ. ಭಾರತದ ಪ್ರಪ್ರಥಮ ವಿಕೆಟ್‌ ಕೀಪರ್‌ ಜಗನ್ನಾಥ್‌ ನಾವೆ ಅವರು ಕ್ರಿಕೆಟ್‌ ಕ್ರೀಡೆಯಿಂದ ನಿವೃತ್ತರಾದ ಬಳಿಕ ಪುಣೆಯಲ್ಲಿ ಒಬ್ಬ ಸೆಕ್ಯುರಿಟಿ ಗಾರ್ಡ್‌ ಆಗಿ ಕಾರ್ಯ ನಿರ್ವ ಹಿಸಬೇಕಾಗಿ ಬಂತು. ಇನ್ನೋರ್ವ ಭೂತಪೂರ್ವ ವಿಕೆಟ್‌ ಕೀಪರ್‌ ಡಿ.ಡಿ. ಹಿಂಡೆಕರ್‌ ತಮ್ಮ 40ನೆಯ ವಯಸ್ಸಿನಲ್ಲಿ ಸೂಕ್ತ 
ವೈದ್ಯಕೀಯ ಉಪಚಾರ ಸಿಗದೆ ಸಾವನ್ನಪ್ಪಬೇಕಾಯಿತು. (1948 ರಲ್ಲಿ) . ಆದರೆ 1971ರಿಂದ 2000ದ ವರೆಗಿನ ಅವಧಿಯಲ್ಲಿ ಫ‌ುಟ್‌ಬಾಲ್‌ ಕ್ರೀಡೆ ಅನುಭವಿಸಿದ ಕುಸಿತದ ಅವಸ್ಥೆಗೆ ಹೋಲಿಸಿದರೆ ಐಎಸ್‌ಎಲ್‌ನ ಆಗಮನ, ಭಾರತೀಯ ಫ‌ುಟ್‌ಬಾಲ್‌ನ ಪತನ ಪ್ರಕ್ರಿಯೆಯನ್ನು ತಡೆಗಟ್ಟಿದೆಯೆಂದೇ ಹೇಳಬೇಕಾಗುತ್ತದೆ. ಫ‌ುಟ್‌ಬಾಲ್‌ ಸಾಹಸದಲ್ಲಿ ನಮ್ಮ ಅತ್ಯಂತ ವಿಜೃಂಭಣೆಯ ಅವಧಿಯೆಂದರೆ 1950-60ರ ನಡುವಿನ ವರ್ಷಗಳು.

ಗಮನಿಸಬೇಕಾದ ಇನ್ನೂ ಒಂದು ಅಂಶವೆಂದರೆ ನಮ್ಮ ಯುವ ಜನತೆ ಫ‌ುಟ್‌ಬಾಲ್‌ ಕ್ರೀಡೆಯ ಬಗ್ಗೆ ಅದ್ಭುತ ಆಸಕ್ತಿ ತೋರುತ್ತಿದ್ದಾರೆ. ಆಟಗಾರರಾಗಿ ಅಥವಾ ಪಂದ್ಯ ವೀಕ್ಷಕರಾಗಿ ಇದಕ್ಕೆ ಕಾರಣವೆಂದರೆ ಅವರಿಗೆ ಕ್ರಿಕೆಟ್‌ ಬಗ್ಗೆ ಬೇಸರ ಹುಟ್ಟಿರುವುದು. ನಮ್ಮಲ್ಲಿ ಕ್ರಿಕೆಟ್‌ ಆಟ ಅತಿ ಎಂಬಷ್ಟು ನಡೆಯುತ್ತಿದೆ. ಬೃಹತ್‌ ಮಟ್ಟದ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳು. ಅಗತ್ಯ ಕ್ಕಿಂತಲೂ ಹೆಚ್ಚಾಗಿಯೇ ಜರಗುತ್ತಿವೆ. ಕ್ರಿಕೆಟ್‌ ಮಟ್ಟಿಗೆ ಕಂಡು ಬರುತ್ತಿರುವ ದುರದೃಷ್ಟಕರ ಬೆಳವಣಿಗೆಯೆಂದರೆ, ತಳಹಂತದ ಕ್ರಿಕೆಟ್‌ ಕ್ರೀಡೆಗೆ ಗ್ರಹಣ ಹಿಡಿದಿರುವುದು. ನಮ್ಮ ಶಾಲೆ-ಕಾಲೇಜು ಗಳು ಹೆಚ್ಚು ಕಡಿಮೆ ಬೋಧನಾ ಮಳಿಗೆಗಳಾಗಿ ಪರಿವರ್ತಿತ ವಾಗಿವೆ. ಅಲ್ಲಿ ಆಟದ ಮೈದಾನಗಳ, ಅಚ್ಚುಕಟ್ಟಾದ ಕ್ಯಾಂಪಸ್‌ ಸೌಲಭ್ಯ ಕೂಡ ಹರೋಹರ ಎಂಬಂತಾಗಿದೆ. ಇಂಥ ಪ್ರತಿಷ್ಠಿತ ಸಂಸ್ಥೆಗಳು ಮೂಲಭೂತ ಸೌಲಭ್ಯಗಳ ಕೊರತೆಯ ನಡುವೆಯೂ “ನ್ಯಾಕ್‌’ ಮನ್ನಣೆಗೆ ಪಾತ್ರವಾಗುತ್ತಿವೆ. ಇಂದು ನಮ್ಮ ಹೆಚ್ಚಿನ ಆಟಗಾರರು ರಣಜಿ ಟ್ರೋಫಿಗಾಗಿ ಆಡಲು ಹಿಂಜರಿಯುತ್ತಿದ್ದಾರೆ; ಇನ್ನು ರೋಹಿನ್‌ಟನ್‌ ಬಾರಿಯಾ ಟ್ರೋಫಿಗಾಗಿ ಏರ್ಪ ಡಿಸಲಾಗುವ ಅಂತರ ವಿ.ವಿ. ಪಂದ್ಯಗಳ ಬಗ್ಗೆ ಹೇಳುವು ದೇನಿದೆ. ಮೊಯಿನುದೌªಲ ಟ್ರೋಫಿ, ಅಥವಾ ಪಿ. ರಾಮಚಂದ್ರ ರಾವ್‌ ಟ್ರೋಫಿ ಪಂದ್ಯಗಳು ಇಂದು ಎಲ್ಲಿ ನಡೆಯುತ್ತಿವೆ? ಅಥವಾ ಶಾಲಾ ವಿದ್ಯಾರ್ಥಿಗಳ ಕ್ರೀಡೋತ್ಸವ ಉಜ್ವಲಗೊಳ್ಳಲು ಸಹಕರಿಸುತ್ತಿದ್ದ ಸ್ಥಳೀಯ ಟೂರ್ನಮೆಂಟ್‌ಗಳಾದ ವೈ.ಎಸ್‌. ರಾಮಸ್ವಾಮಿ, ನಾಸರ್‌ಲೀಗ್‌ ಅಥವಾ ಬಿ.ಟಿ. ಕೆಂಪಣ್ಣ ಟೂರ್ನ್ಮೆಂಟ್‌ಗಳ ಗತಿ ಏನಾಗಿದೆ? ಹಿಂದೂ ಟ್ರೋಫಿ ಪಂದ್ಯಗಳೇನೋ ನಡೆಯುತ್ತಿವೆ. ಶ್ರೀಲಂಕಾ ಒಂದು ಟೆಸ್ಟ್‌ ಆಟಗಾರ ದೇಶವಾದ ಬಳಿಕ ವರ್ಷಂಪ್ರತಿ ಶ್ರೀಲಂಕಾ ಹಾಗೂ ತಮಿಳ್ನಾಡಿನ ನಡುವೆ ನಡೆಯುತ್ತಿದ್ದ ಎಂ.ಜೆ. ಗೋಪಾಲನ್‌ ಟ್ರೋಫಿ ಪಂದ್ಯಕ್ಕೆ ಸೋಡಾ ಚೀಟಿ ನೀಡಲಾಗಿದೆ. 

Advertisement

ಈ ನಡುವೆ ಗಮನಿಸಲೇಬೇಕಾದ ಅಂಶವೆಂದರೆ, ಭಾರತೀಯ ಫ‌ುಟ್‌ಬಾಲ್‌ ಕ್ಷೇತ್ರಕ್ಕೆ ಎಷ್ಟೇ ದೊಡ್ಡ ಪ್ರಮಾಣದಲ್ಲಿ ಹಣ ಹರಿದುಬರುತ್ತಿದ್ದರೂ, ಈ ಕ್ರೀಡೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ರೀತಿಯ ನೆರವು ಅಥವಾ ಉಪಕಾರ ದೊರೆತಿಲ್ಲ. ಫಿಫಾದ 211 ಸದಸ್ಯ ರಾಷ್ಟ್ರಗಳಲ್ಲಿ ಭಾರತದ ಸ್ಥಾನ 159ನೆಯದು. ನಾವು ಇದ್ದುದರಲ್ಲಿ ಅತ್ಯುತ್ತಮವೆನ್ನಬಹುದಾದ ರ್‍ಯಾಂಕಿಂಗ್‌ ಗಳಿಸಿದ್ದು 1964ರಲ್ಲಿ; ಅಂದು ನಾವು 48ನೆಯ ಸ್ಥಾನದಲ್ಲಿದ್ದೆವು. ಆದರೆ ಚೀನಾ ನಮಗಿಂತ ಮುಂದಿದೆ; 78ನೆಯ ಸ್ಥಾನದಲ್ಲಿದೆ; ಆದರೆ ವಿಶ್ವಕಪ್‌ ಪಂದ್ಯಾವಳಿಗೆ ಅರ್ಹತೆ ಪಡೆಯಲು ಈ ರ್‍ಯಾಂಕಿಂಗ್‌ ಸಾಲದು. ಪಾಕಿಸ್ಥಾನವೂ ಕೆಳಗಿನ ಸ್ಥಾನದಲ್ಲೇ ಇದೆ (201). ಕ್ರಿಕೆಟ್‌ ಮತ್ತು ಸ್ಕ್ವಾಶ್‌ ಹೊರತು ಪಡಿಸಿದರೆ ಪಾಕಿಸ್ಥಾನ ಕ್ರೀಡಾಕ್ಷೇತ್ರದಲ್ಲಿ ಹೇಳಿಕೊಳ್ಳುವಂಥ ಸಾಧನೆಯನ್ನು ತೋರಿಸುತ್ತಿಲ್ಲ. 

ಭಾರತೀಯ ಫ‌ುಟ್‌ಬಾಲ್‌ ಕ್ರೀಡೆಗೆ ಸರಕಾರದ ಪ್ರಾಯೋಜಕತ್ವ ಬೇಕಾಗಿದೆ; ಅದೂ ದೊಡ್ಡಮಟ್ಟಿನ ಪ್ರಾಯೋಜಕತ್ವ. ಅಖೀಲ ಭಾರತ ಫ‌ುಟ್‌ಬಾಲ್‌ ಒಕ್ಕೂಟ (ಆಲ್‌ ಇಂಡಿಯಾ ಫ‌ುಟ್‌ಬಾಲ್‌ ಫೆಡರೇಶನ್‌)ಕ್ಕೆ ಸರಕಾರ ಇನ್ನಷ್ಟು ಹೆಚ್ಚಿನ ಮೊತ್ತ ನೀಡಬೇಕು; ಕಾರ್ಪೊರೇಟ್‌ ಕ್ಷೇತ್ರ ಕೂಡ ಇತ್ತ ನೋಡಬೇಕು. ದೇಶದಲ್ಲಿ ಫ‌ುಟ್‌ಬಾಲ್‌ಗೆಂದೇ ಮೀಸಲಾದ ಆಟದ ಮೈದಾನಗಳ ಕೊರತೆ ಸಂಕಟ ಹೆಚ್ಚಿಸುವಷ್ಟು ಎದ್ದು ತೋರುತ್ತಿದೆ. ಭಾರತದಂಥ ವಿಶಾಲ ದೇಶದಲ್ಲಿ ಫ‌ುಟ್‌ಬಾಲ್‌ಗೆಂದು ಮೀಸಲಾಗಿರುವ ಆಟದ ಕಣಗಳು (ಸ್ಟೇಡಿಯಮ್‌ಗಳಲ್ಲ) ಕೇವಲ 30. ಬೆಂಗಳೂರಿನ ಫ‌ುಟ್‌ಬಾಲ್‌ ಸ್ಟೇಡಿಯಂ ಕಾಮಗಾರಿ ಪೂರ್ಣಗೊಳ್ಳಲು ದಶಕಗಟ್ಟಲೆ ಸಮಯ ಬೇಕಾಯಿತು. ಕೇಂದ್ರ ಸರಕಾರದ ಬಳಿಯಾಗಲಿ, ರಾಜ್ಯ ಸರಕಾರಗಳ ಬಳಿಯಾಗಲಿ ಅಥವಾ ನಮ್ಮ ಬೃಹನ್ನಗರಗಳ ಸ್ಥಳೀ ಯಾಡಳಿತ ಘಟಕಗಳಲ್ಲಾಗಲಿ ಹಣದ ಕೊರತೆ ಇಲ್ಲವೆಂಬುದು ಈಗಾಗಲೇ ಸಾಬೀತಾಗಿರುವ ಸತ್ಯ. ಇನ್ನು ಫ‌ುಟ್‌ಬಾಲ್‌ ವಿಶ್ವಕಪ್‌ಗೆ ಆಡಲು ಆರ್ಹತೆ ಗಳಿಸಿರುವ ಹೆಚ್ಚಿನ ರಾಷ್ಟ್ರಗಳು ಏಕ ಕ್ರೀಡಾ ರಾಷ್ಟ್ರಗಳೆಂದು ವಾದಿಸುವವರಿದ್ದಾರೆ. ಆದರೆ ಈ ಮಾತು ನಿಜವಲ್ಲ. ಉದಾಹರಣೆಗೆ ಆಸ್ಟ್ರೇಲಿಯನ್ನರು ಎಲ್ಲ ಕ್ರೀಡೆಗಳಲ್ಲೂ – ಕ್ರಿಕೆಟ್‌, ಟೆನಿಸ್‌, ಹಾಕಿ, ಅಥ್ಲೆಟಿಕ್‌- ಹೀಗೆ ಎಲ್ಲ ಆಟಗಳಲ್ಲೂ ಸಕ್ರಿಯ ರಾಗಿದ್ದಾರೆ. ದಕ್ಷಿಣಾಫ್ರಿಕದ ಪೆರುವಿನಂಥ ದೇಶಗಳು ದಶಕಗಳ ಹಿಂದೆಯೇ ವಿಂಬಲ್ಡನ್‌ ಟೆನಿಸ್‌ ಚಾಂಪಿಯನ್‌ಗಳನ್ನು ನೀಡಿ ದ್ದುಂಟು. (ಉದಾ ಅಲೆಕ್ಸ್‌ ಅಲ್ಮೇಡೋ). ವಾಸ್ತವವಾಗಿ ಇಂಗ್ಲೆಂಡಿ ನಲ್ಲಿ ಫ‌ುಟ್‌ಬಾಲ್‌ ಕ್ರೀಡೆ ಕ್ರಿಕೆಟಿಗಿಂತಲೂ ಹೆಚ್ಚು ಜನಪ್ರಿಯತೆ ಗಳಿಸುತ್ತಿದೆ. ಹಿಂದಿನ ಕಾಲದಲ್ಲಿ ಕೂಡ ಕನಿಷ್ಠ ಪಕ್ಷ ವಿಖ್ಯಾತ ಕ್ರಿಕೆಟಿಗ ಟೆನಿಸ್‌ ಕಾಂಪ್ಟನ್‌ರಂಥ ಅಂತಾರಾಷ್ಟ್ರೀಯ ಮಟ್ಟದ ಉಭಯ ಕ್ರೀಡಾ ವಿಶಾರದರಿದ್ದರು. ಕ್ರಿಕೆಟಿಗರಾಗಿದ್ದೂ ಅವರು ಆರ್ಸೆನಲ್‌ ಟೀಮ್‌ಗಾಗಿ ದೊಡ್ಡ ಮಟ್ಟದ, ಅರ್ಥಾತ್‌ ಅಂತಾರಾಷ್ಟ್ರೀಯ ಮಟ್ಟದ (ಫ‌ುಟ್‌ಬಾಲ್‌) ಪಂದ್ಯಾಟಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಬ್ಯಾಡ್ಮಿಂಟನ್‌, ರೈಫ‌ಲ್‌ ಶೂಟಿಂಗ್‌, ಭಾರ ಎತ್ತುಗೆ, ಬಾಕ್ಸಿಂಗ್‌ ಹಾಗೂ ರೆಸ್ಲಿಂಗ್‌ಗಳ ಮಾತು ಬಂದಾಗ ಭಾರತದ ಸಾಧನೆ ಕೂಡ ಉಲ್ಲೇಖನೀಯವೇ. ಸರಿಯಾದ ರೀತಿಯಲ್ಲಿ ಪ್ರಯತ್ನಗಳನ್ನು ಕೈಗೊಂಡೆವಾದರೆ ಮುಂದಿನ ಫಿಫಾ ವಿಶ್ವಕಪ್‌ ಪಂದ್ಯಾವಳಿಯ ಹೊತ್ತಿಗಾದರೂ ಭಾರತೀಯ ತಂಡವನ್ನು ಕಳುಹಿಸಿಕೊಡಲು ನಮಗೆ ಖಂಡಿತಾ ಸಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next