Advertisement

ಅರಬ್‌ ನಾಡಿನಲ್ಲಿ ವಿಶ್ವಕಪ್‌ ಫುಟ್ ಬಾಲ್ ಅಬ್ಬರ; ಏಷ್ಯಾ ದೇಶಕ್ಕೆ ಲಭಿಸಿದ ಅಪರೂಪದ ಆತಿಥ್ಯ

11:43 PM Nov 19, 2022 | Team Udayavani |

ದೋಹಾ: ಜಾಗತಿಕ ಕ್ರೀಡೆಯ ಮಹಾಸಮರ, ಪ್ರತಿಷ್ಠಿತ ಫಿಫಾ ವಿಶ್ವಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿ ಕತಾರ್‌ನಲ್ಲಿ ರವಿವಾರದಿಂದ ಕಾವೇರಿಸಿಕೊಳ್ಳಲಿದೆ. ಯೂರೋಪ್‌ ಮತ್ತು ಅಮೆರಿಕ ಫ‌ುಟ್‌ಬಾಲ್‌ನ ಬೃಹತ್‌ ಕೇಂದ್ರಗಳಾದರೂ, ಈವರೆಗಿನ ಅಷ್ಟೂ “ಕಪ್‌’ಗಳನ್ನು ಈ ಎರಡೇ ಖಂಡದವರು ಎತ್ತಿದರೂ ಈ ಬಾರಿ ಏಷ್ಯಾದಲ್ಲಿ ಕಾಲ್ಚೆಂಡಿನ ಮಹಾಮೇಳ ನಡೆಯುತ್ತಿರುವುದು ವಿಶೇಷ. ವಿಶ್ವದ 32 ರಾಷ್ಟ್ರಗಳು ಡಿ. 18ರ ತನಕ ಫ‌ುಟ್‌ಬಾಲ್‌ ಸಾಮ್ರಾಜ್ಯವನ್ನು ಆಳಲು ಪೈಪೋಟಿ ನಡೆಸಲಿವೆ. ಹೀಗಾಗಿ ವಿಶ್ವದ ಫ‌ುಟ್‌ಬಾಲ್‌ ಪ್ರೇಮಿಗಳೆಲ್ಲ ಈ ಅರಬ್‌ ನಾಡಿನ ಮೇಲೆ ನೆಟ್ಟ ನೋಟ ಬೀರಲಾರಂಭಿಸಿದ್ದಾರೆ.

Advertisement

ಇದು ಏಷ್ಯಾದಲ್ಲಿ ನಡೆಯುತ್ತಿರುವ ಕೇವಲ 2ನೇ ವಿಶ್ವಕಪ್‌ ಪಂದ್ಯಾವಳಿ. 2002ರಲ್ಲಿ ದಕ್ಷಿಣ ಕೊರಿಯಾ ಮತ್ತು ಜಪಾನ್‌ ಜಂಟಿಯಾಗಿ ಸಂಘಟಿಸಿದ್ದವು. ಹಾಗೆಯೇ 32 ತಂಡಗಳು ಪಾಲ್ಗೊಳ್ಳಲಿರುವ ಕೊನೆಯ ವಿಶ್ವಕಪ್‌ ಕೂಡ ಇದಾಗಬಹುದು. 2026ರಲ್ಲಿ ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾ ಜಂಟಿಯಾಗಿ ಆಯೋಜಿಸಲಿರುವ ಕೂಟದಲ್ಲಿ 48 ತಂಡಗಳು ಸೆಣಸಲಿವೆ.

ನ. 20ರ ರವಿವಾರ ಕತಾರ್‌ ಪಾಲಿಗೆ ಐತಿಹಾಸಿಕ ದಿನವಾಗಲಿದೆ. ಅದು ತನ್ನ ಮೊದಲ ವಿಶ್ವಕಪ್‌ ಪಂದ್ಯವನ್ನು ಆಡಲಿಳಿಯಲಿದ್ದು, ಫಿಫಾ ರ್‍ಯಾಂಕಿಂಗ್‌ನಲ್ಲಿ ತನಗಿಂತ ಕೇವಲ 5 ಸ್ಥಾನ ಮೇಲಿರುವ ಈಕ್ವಡಾರ್‌ ವಿರುದ್ಧ ಗೆಲುವಿನ ನಿರೀಕ್ಷೆಯಲ್ಲಿದೆ.

ಕತಾರ್‌: ಮೊದಲ ವಿಶ್ವಕಪ್‌
ಭಾರತೀಯ ಕಾಲಮಾನದಂತೆ ಸಂಜೆ 7.30ಕ್ಕೆ ಕತಾರ್‌ ಹಾಗೂ ಅರಬ್‌ ಸಂಸ್ಕೃತಿಯನ್ನು ಬಿಂಬಿಸುವ ಉದ್ಘಾಟನ ಸಮಾರಂಭ ನಡೆಯಲಿದೆ. ಇದು ಮುಗಿದ ಬಳಿಕ ಕತಾರ್‌-ಈಕ್ವಡಾರ್‌ ತಂಡಗಳು ಕೂಟಕ್ಕೆ ಚಾಲನೆ ನೀಡಲಿವೆ. ಅಂದಹಾಗೆ, ಕತಾರ್‌ ಫಿಫಾ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುತ್ತಿರುವುದು ಇದೇ ಮೊದಲು. ಆತಿಥೇಯ ರಾಷ್ಟ್ರವಾದ ಕಾರಣ ಇದಕ್ಕೆ ನೇರ ಪ್ರವೇಶ ಲಭಿಸಿದೆ.

ಕತಾರ್‌ನ ವಿಶ್ವಕಪ್‌ ಆತಿಥ್ಯದ ಹಾದಿ ದುರ್ಗವಾಗಿಯೇ ಸಾಗಿ ಬಂದಿದೆ. ಇದರೊಂದಿಗೆ ಅದೆಷ್ಟೋ ವಿವಾದಗಳು ತಳುಕು ಹಾಕಿಕೊಂಡಿವೆ. ಆದರೂ ಕೂಟವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿ, ಜಾಗತಿಕ ಮಟ್ಟದಲ್ಲಿ ತನ್ನ ಛಾತಿಯನ್ನು ಹೆಚ್ಚಿಸಿಕೊಳ್ಳುವುದು ಕತಾರ್‌ನ ಗುರಿಯಾಗಿದೆ.

Advertisement

ಫ‌ುಟ್‌ಬಾಲ್‌ ಇತಿಹಾಸದಲ್ಲೇ ಇದು ಅತ್ಯಂತ ಶ್ರೀಮಂತ ವಿಶ್ವಕಪ್‌ ಆಗಿದೆ. ಕೂಟದ ಸಂಪೂರ್ಣ ವೆಚ್ಚ 16.35 ಲಕ್ಷ ಕೋಟಿ ರೂ.ಗಳಷ್ಟಾಗಲಿದೆ. ನೈಸರ್ಗಿಕವಾಗಿಯೂ ಶ್ರೀಮಂತವಾಗಿರುವ ಕತಾರ್‌ ಈ ವೆಚ್ಚಕ್ಕಾಗಿ ತಲೆ ಕೆಡಿಸಿಕೊಂಡಿಲ್ಲ.

ಫ‌ುಟ್‌ಬಾಲ್‌ ರಾಯಭಾರ
ಕಾರ್ಮಿಕರ ಹಕ್ಕು, ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಕತಾರ್‌ ಬರೀ ನಕಾರಾತ್ಮಕ ಸುದ್ದಿಗಳನ್ನೇ ಕೇಳುತ್ತ ಬಂದಿದೆ. ಟೀಕಾಕಾರರ ಬಾಯಿ ಮುಚ್ಚಿಸಬೇಕಾದರೆ ಈ ತೈಲ ರಾಷ್ಟ್ರದ ಮುಂದಿರುವ ಏಕೈಕ ಮಾರ್ಗವೆಂದರೆ, ಕೂಟವನ್ನು ಮಾದರಿಯಾಗಿ ನಡೆಸಿ ಏಷ್ಯಾ ಕೂಡ ಫ‌ುಟ್‌ಬಾಲ್‌ನಲ್ಲಿ ಹಿಂದುಳಿದಿಲ್ಲ ಎಂದು ತೋರಿಸಿ ಕೊಡುವುದು. ಏಷ್ಯಾದಲ್ಲಿ ತಮ್ಮ ರಾಷ್ಟ್ರವನ್ನು “ನ್ಪೋರ್ಟ್ಸ್ ಹಬ್‌’ ಆಗಿ ರೂಪಿಸುವುದು ಈ ಕೂಟದ ಉದ್ದೇಶವಾಗಿದೆ. ಶಾರ್ಜಾ, ಅಬುಧಾಬಿ, ದುಬಾೖಗಳೆಲ್ಲ ಕ್ರಿಕೆಟ್‌ಗೆ ಹೆಸರುವಾಸಿಯಾದರೆ, ಕತಾರ್‌ ವಿಶ್ವದ ನಂ.1 ಕ್ರೀಡೆಯಾದ ಫ‌ುಟ್‌ಬಾಲ್‌ ರಾಯಭಾರ ವಹಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ಪಂದ್ಯಾವಳಿ ಕುವೈಟ್‌ ದೊರೆ ಶೇಖ್‌ ತಮಿಮ್‌ ಬಿನ್‌ ಹಮದ್‌ ಅಲ್‌ ಥಾನಿ ಅವರಿಗೆ ವಿಶ್ವ ಮಟ್ಟದಲ್ಲಿ ದೊಡ್ಡ ಹೆಸರು ತಂದುಕೊಡಲಿದೆ ಎಂಬುದೊಂದು ಲೆಕ್ಕಾಚಾರ.

32 ರಾಷ್ಟ್ರಗಳ ಸೆಣಸಾಟ
ಒಟ್ಟು 32 ರಾಷ್ಟ್ರಗಳು ಫ‌ುಟ್‌ಬಾಲ್‌ ಚಾಂಪಿಯನ್‌ ಎನಿಸಿಕೊಳ್ಳಲು ಬಿರುಸಿನ ಪೈಪೋಟಿ ನಡೆಸಲಿವೆ. ಇವುಗಳನ್ನು ತಲಾ 4 ದೇಶಗಳ 8 ಗ್ರೂಪ್‌ಗ್ಳಾಗಿ ವಿಂಗಡಿಸಲಾಗಿದೆ. ಪ್ರತೀ ಗ್ರೂಪ್‌ನ 2 ಅಗ್ರಸ್ಥಾನಿ ತಂಡಗಳು ಪ್ರಿ-ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲಿವೆ. ಬಳಿಕ ಕ್ವಾರ್ಟರ್‌ ಫೈನಲ್‌, ಸೆಮಿಫೈನಲ್‌. ಡಿ. 18ರಂದು ಪ್ರಶಸ್ತಿ ಸಮರ ಏರ್ಪಡಲಿದೆ.

 

Advertisement

Udayavani is now on Telegram. Click here to join our channel and stay updated with the latest news.