ಗುವಾಹಟಿ: ಕತಾರ್‌ನಲ್ಲಿ ನಡೆಯಲಿರುವ 2022ರ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಏಶ್ಯ ವಿಭಾಗದ ಅರ್ಹತಾ ಸುತ್ತಿನಲ್ಲಿ ಗುರುವಾರ ಭಾರತ ತಂಡ ಬಲಿಷ್ಠ ಒಮಾನ್ ವಿರುದ್ಧ ಸೆಣಸಲಿದೆ. ಸುನೀಲ್ ಚೆಟ್ರಿ ನಾಯಕತ್ವದ ಭಾರತವನ್ನು ಮುಂದಡಿ ಇಡುವಂತೆ ಮಾಡುವುದು ಕ್ರೊವೇಶಿಯನ್ ಮೂಲದ ಕೋಚ್ ಐಗರ್ ಸ್ಟಿಮಾಕ್ ಪಾಲಿಗೆ ದೊಡ್ಡ ಸವಾಲಾಗಿರುವುದರಲ್ಲಿ ಅನುಮಾನವಿಲ್ಲ.
ಥಾಯ್ಲೆಂಡ್‌ನಲ್ಲಿ ನಡೆದ ಕಳೆದ ‘ಕಿಂಗ್ಸ್ ಕಪ್’ನಲ್ಲಿ ತೃತೀಯ ಸ್ಥಾನಿಯಾಗಿದ್ದ ಭಾರತ, ಅನಂತರದ ಇಂಟರ್ ಕಾಂಟಿನೆಂಟಲ್ ಕಪ್ ಕೂಟದಲ್ಲಿ ಕಳಪೆ ಪ್ರದರ್ಶನ ನೀಡಿತ್ತು. ಇದು 2ನೇ ಸುತ್ತಿನ ಅರ್ಹತಾ ಪಂದ್ಯಾವಳಿಯಾಗಿದ್ದು, ಒಮಾನ್ ಮತ್ತು ಕತಾರ್ ತಂಡಗಳುಳ್ಳ ಗುಂಪಿನಲ್ಲಿ ಭಾರತ ಸ್ಥಾನ ಪಡೆದಿದೆ.
ಭಾರತವಿಲ್ಲಿ ಕನಿಷ್ಠ ದ್ವಿತೀಯ ಸ್ಥಾನಿಯಾಗಿ ಸ್ಪರ್ಧೆ ಮುಗಿಸಿದರೆ 3ನೇ ಅರ್ಹತಾ ಸುತ್ತಿನಲ್ಲಿ ಆಡುವ ಅವಕಾಶ ಪಡೆಯಲಿದೆ. ಆದರೆ ಏಶ್ಯನ್ ಅರ್ಹತಾ ಸುತ್ತಿನಲ್ಲಿ ಈ ಎರಡೂ ತಂಡಗಳ ವಿರುದ್ಧ ಭಾರತ ಈವರೆಗೆ ಜಯ ಕಂಡಿಲ್ಲ.
ಕಿಯಾಮ್ ಗಾಯಾಳು
ಪಂದ್ಯಕ್ಕೂ ಮೊದಲೇ ಭಾರತಕ್ಕೆ ಆಘಾತವೊಂದು ಎದುರಾಗಿದ್ದು, ಅಂಡರ್-17 ತಂಡದ ನಾಯಕನಾಗಿದ್ದ ಯುವ ಮಿಡ್ ಫೀಲ್ಡರ್ ಅಮರ್‌ಜೀತ್ ಸಿಂಗ್ ಕಿಯಾಮ್ ಗಾಯಾಳಾಗಿ ಹೊರಬಿದ್ದಿದ್ದಾರೆ. ಸ್ಟಿಮಾಕ್ ಕೋಚ್ ಆದ ಬಳಿಕ ಭಾರತ ಆಡಿದ ಎಲ್ಲ 5 ಪಂದ್ಯಗಳಲ್ಲಿ ಆಡಿದ ಹೆಗ್ಗಳಿಕೆ ಕಿಯಾಮ್ ಅವರದಾಗಿತ್ತು.
ಅಂದಹಾಗೆ, 2018ರ ವಿಶ್ವಕಪ್ ಅರ್ಹತಾ ಕೂಟದ ಇದೇ ಹಂತದ ಸ್ಪರ್ಧೆಯಲ್ಲಿ ಒಮಾನ್ ವಿರುದ್ಧ ಆಡಿದ ಎರಡೂ ಪಂದ್ಯಗಳಲ್ಲಿ ಭಾರತ ಸೋಲನುಭವಿಸಿತ್ತು. ತವರಿನ ಪಂದ್ಯವಾದ್ದರಿಂದ ಇದಕ್ಕೆ ಚೆಟ್ರಿ ಪಡೆ ಸೇಡು ತೀರಿಸೀತೇ ಎಂಬುದೊಂದು ಕುತೂಹಲ.