Advertisement

ಕಾಲುವೆಗೆ ನೀರು ಬಿಡದಿದ್ದರೆ ಉಗ್ರ ಹೋರಾಟ

11:24 AM Sep 10, 2019 | Suhan S |

ಐಗಳಿ: ಅಥಣಿ ತಾಲೂಕಿನ ಪೂರ್ವಭಾಗದ ಐಗಳಿ, ಅರಟಾಳ, ಬಾಡಗಿ ಮತ್ತು ಕೊಕಟನೂರ ಸೇರಿದಂತೆ ಹಲವಾರು ಹಳ್ಳಿಗಳಲ್ಲಿ ಮಳೆಯಾಗದೇ ಇರುವುದರಿಂದ ಈ ಹಳ್ಳಿಗಳಿಗೆ ಕಾಲುವೆ ನೀರು ಹರಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ನೂರಾರು ರೈತರು ಐಗಳಿ ಕ್ರಾಸ್‌ ರಸ್ತೆ ತಡೆಗೆ ಮುಂದಾದಾಗ ಪೊಲೀಸ್‌ ಇಲಾಖೆ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಅವರನ್ನು ಸಮಾಧಾನ ಪಡಿಸಿ ಮರಳಿ ಕಳಿಸಿದ ಘಟನೆ ಸೋಮವಾರ ನಡೆದಿದೆ.

Advertisement

ಈ ಮುಂಚೆ ಮಳೆಯಾಗಿ ಅಲ್ಪ ಸ್ವಲ್ಪ ಭೂಮಿ ಹಸಿಯಾಗಿದ್ದರಿಂದ ಕೆಲ ರೈತರು ಬಿತ್ತನೆ ಮಾಡಿದ್ದು ಮಳೆ ಇಲ್ಲದೇ ಹಾಗೂ ಕಾಲುವೆ ನೀರು ಕೂಡ ಬಾರದೇ ಬೆಳೆಗಳು ಒಣಗುತ್ತಿವೆ. ಜನ ಜಾನುವಾರುಗಳ ಬದುಕು ದುಸ್ತರವಾಗುತ್ತಿದೆ. ಕೂಡಲೇ ಕಾಲುವೆ ನೀರು ಹರಿಸಬೇಕೆನ್ನುವುದು ರೈತರ ಬೇಡಿಕೆಯಾಗಿತ್ತು.

ಈ ಸಂದರ್ಭದಲ್ಲಿ ಸ್ಥಳಕ್ಕೆ ಧಾವಿಸಿ ರೈತರನ್ನು ಸಮಾಧಾನ ಪಡಿಸಿ ಮಾತನಾಡಿದ ಪಿಎಸ್‌ಐ ರಾಕೇಶ ಬಗಲಿ, ನೀರಾವರಿ ಅಧಿಕಾರಿಗಳು ಬರುವವರೆಗೆ ರಸ್ತೆ ತಡೆ ಮಾಡುವುದು ಬೇಡ ನಮ್ಮೊಂದಿಗೆ ಸಹಕರಿಸಿ ಎಂದು ಹೇಳಿದಾಗ ಒಪ್ಪಿದ ರೈತರು ರಸ್ತೆ ಬದಿ ಧರಣಿ ಕುಳಿತರು. ಈ ವೇಳೆ ರೈತ ಮುಖಂಡರಾದ ರಮೇಶ ಮಡಿವಾಳ, ಸಚಿನ ಬಳ್ಳೊಳ್ಳಿ, ದುಂಡಪ್ಪ ತನಂಗಿ, ನಿಂಗೊಡಾ ತೆಲಸಂಗ, ಸಂಗಪ್ಪ ಕರೆಗಾರ, ಜಗದೀಶ ತೆಲಸಂಗ ಸೇರಿದಂತೆ ಅನೇಕರು ಮಾತನಾಡಿ, ನಾವು ತಾಳ್ಮೆ ಕಳೆದುಕೊಳ್ಳುವುದು ಬೇಡ. ನಮ್ಮ ಸಮಸ್ಯೆ ಬಗೆ ಹರಿಯುವವರೆಗೆ ಇಲ್ಲೇ ಧರಣಿ ಕುಳಿತುಕೊಳ್ಳೋಣ ಎಂದರು.

ಸ್ಥಳಕ್ಕಾಗಮಿಸಿದ ನೀರಾವರಿ ನಿಗಮದ ತಾಲೂಕು ಅಧಿಕಾರಿ ಎಂ.ಜಿ.ಕೆ.ನಾಗಪ್ಪ ರೈತರನ್ನುದ್ದೇಶಿಸಿ ಮಾತನಾಡಿ, ಮಹಾಪೂರದಿಂದ ವ್ಯವಸ್ಥೆ ಹಾಳಾಗಿತ್ತು. ಅದನ್ನು ದುರಸ್ತಿಗೊಳಿಸಿ ನೀರು ಬಿಡುವಲ್ಲಿ ವಿಳಂಬವಾಗಿದೆ. ಅಲ್ಲದೇ ಹಿಂದಿನ ರೈತರು ಸಹಕಾರ ನೀಡುತ್ತಿಲ್ಲ ಮತ್ತು ಅನುದಾನ ಕೂಡ ಇಲ್ಲ ಎಂದಾಗ ರೈತರು ಪ್ರತಿರೋಧ ವ್ಯಕ್ತಪಡಿಸಿ ಅಧಿಕಾರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಆಗ ಪಿಎಸ್‌ಐ ಬಗಲಿ ರೈತರನ್ನು ಸಮಾಧಾನ ಪಡಿಸಿದರು. ಸೆ. 10ರಿಂದ 20 ರವರೆಗೆ ಐಗಳಿ, ಕೊಕಟನೂರ, ಅರಟಾಳ ಹಾಗೂ ಬಾಡಗಿ ಗ್ರಾಮಗಳ ವ್ಯಾಪ್ತಿಯ ರೈತರಿಗೆ ನೀರು ಹರಿಸುವುದಾಗಿ ಹೇಳಿದರು.

ಮಂಗಳವಾರ ಕಾಲುವೆಗೆ ನೀರು ಹರಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿ ರೈತರು ಪ್ರತಿಭಟನೆ ಹಿಂಪಡೆದರು. ಪ್ರತಿಭಟನೆಯಲ್ಲಿ ಸಿದರಾಯ ಬಳ್ಳೊಳ್ಳಿ, ಚಂದು ವಾಘಮೋರೆ, ಶಿವಪ್ಪ ಬಂಡರಬಟ್ಟಿ, ಸದಾಶಿವ ಏಳೂರ, ಮಚ್ಚೇಂದ್ರ ತೆಲಸಂಗ, ಈಶ್ವರ ಬಳ್ಳೊಳ್ಳಿ, ಸದಾಶಿವ ಶಿಂದೂರ ಸೇರಿದಂತೆ ಐಗಳಿ, ಅರಟಾಳ, ಬಾಡಗಿ, ಕೊಕಟನೂರ ಗ್ರಾಮಗಳ ನೂರಾರು ರೈತರು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next