Advertisement

Agri: ರೈತರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ತೀವ್ರ ಹೋರಾಟ: ಕೋಟ

11:45 PM Oct 12, 2023 | Team Udayavani |

ಬೆಂಗಳೂರು: ವಿದ್ಯುತ್‌ ಲೋಡ್‌ಶೆಡ್ಡಿಂಗ್‌ ಸಹಿತ ರೈತರ ಸಮಸ್ಯೆ ಗಳಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯ ಸರಕಾರದ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.

Advertisement

ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಅನಾಹುತ ಸೃಷ್ಟಿಸಿದೆ. ರೈತರಿಗೆ ವಿದ್ಯುತ್‌ ಪೂರೈಕೆಯನ್ನು ಎರಡು ಗಂಟೆಗೆ ಇಳಿಸಿದ್ದಾರೆ. ಬಿತ್ತನೆ ಬೀಜ ಹಾಳಾಗಿದೆ, ಗೊಬ್ಬರ ಸಮಸ್ಯೆ ಇದೆ. ಏನು ಬೇಕಾದರೂ ಮಾಡಿ, ಆದರೆ ರೈತರ ಬದುಕಿನಲ್ಲಿ ಆಟ ಆಡಬೇಡಿ ಎಂದು ಕಿಡಿಕಾರಿದರು.

ಕೃಷಿ ಸಚಿವ ಚಲುವರಾಯಸ್ವಾಮಿ ರೈತರಿಗೆ ಅನ್ಯಾಯ ಆಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಇದನ್ನು ಇಂಧನ ಸಚಿವರು ಒಪ್ಪಿಕೊಳ್ಳುತ್ತಿಲ್ಲ. ಇಲಾಖೆಯಲ್ಲಿ ಸಮನ್ವಯದ ಕೊರತೆ ಇದೆ. ಸಿಎಂ ಸಿದ್ದರಾಮಯ್ಯ, ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್‌ ಈ ಬಗ್ಗೆ ಗಮನ ಹರಿಸಬೇಕೆಂದು ಆಗ್ರಹಿಸಿದ್ದಾರೆ.

ಸಿದ್ದರಾಮಯ್ಯ ಸರಕಾರ ಯಾವ್ಯಾವ ದಸರಾಗೆ ಅವಕಾಶ ಕೊಟ್ಟಿದೆ ಗೊತ್ತಿಲ್ಲ. ಈಗ ರಾಕ್ಷಸ ದಸರಾಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಕಾಂಗ್ರೆಸ್‌ನವರು ನಮ್ಮ ಧಾರ್ಮಿಕ ವ್ಯವಸ್ಥೆ ಹಾಳು ಮಾಡುತ್ತಿದ್ದಾರೆ. ಚಾಮುಂಡಿ ದಸರಾ ಹೆಮ್ಮೆಯ ವಿಚಾರ. ಅದಕ್ಕೆ ಅವಕಾಶ ಮಾಡಿಕೊಡಬೇಕು ಎಂದರು.
ಮಾಜಿ ಸಚಿವ ಮುರುಗೇಶ್‌ ನಿರಾಣಿ ಕೂಡ ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಕಾಣೆಯಾಗಿದ್ದಾರೆ ಎಂದು ಡಿಕೆ ಫೋಟೋ ಹಾಕಿದ ಬಿಜೆಪಿ
ಕಾಣೆಯಾದವರ ಪತ್ತೆಗೆ ಪೊಲೀಸರು ಹೊರಡಿಸುವ ಲುಕ್‌ಔಟ್‌ ನೋಟಿಸ್‌ ಮಾದರಿಯಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರ ಪೋಟೋ ಪ್ರಕಟಿಸಿ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

Advertisement

ಮೈತ್ರಿ ಉಳಿಸಿಕೊಳ್ಳಲು ಸ್ಟಾಲಿನ್‌ರ ಕಟ್ಟಪ್ಪಣೆ ಮೇರೆಗೆ ಕಾವೇರಿ ನೀರು ಹರಿಸಿ ಕಾಣೆಯಾಗಿದ್ದಾರೆ. ಹುಡುಕಿ ಕೊಟ್ಟವರಿಗೆ ಐದು ಗ್ಯಾರಂಟಿಗಳನ್ನು ಕೊಡುವುದು ಉಚಿತ, ಖಚಿತ, ನಿಶ್ಚಿತ ಎಂದು ಬಿಜೆಪಿ ಟೀಕಿಸಿದೆ. ಲೋಡ್‌ ಶೆಡ್ಡಿಂಗ್‌ ವಿಚಾರದಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್‌ ಬಗ್ಗೆಯೂ ಇಂಥದ್ದೇ ಪೋಸ್ಟರನ್ನು ಬಿಜೆಪಿ ಪ್ರಕಟಿಸಿದೆ. ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಕರ್ನಾಟಕ ಬೆಳಕಿನಿಂದ ಕತ್ತಲೆಯೆಡೆಗೆ’ ಎಂದು ಬಿಜೆಪಿ ವ್ಯಂಗ್ಯವಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next