ಗಜೇಂದ್ರಗಡ: ಸರ್ಕಾರ ಪ್ರತಿ ರೈತರಿಗೂ ಮಾಸಿಕ 777 ಯೂನಿಟ್ ಉಚಿತ ವಿದ್ಯುತ್ ನೀಡಬೇಕೆಂದು ಆದೇಶ ಹೊರಡಿಸಿದ್ದರೂ ಹೆಸ್ಕಾಂ ಅಧಿಕಾರಿಗಳು ರೈತರಿಗೆ ದೊರಕಬೇಕಾದ ವಿದ್ಯುತ್ ಲೂಟಿ ಮಾಡುತ್ತಿರುವುದು ಖಂಡನೀಯ. ಕೂಡಲೇ ನಮಗೆ 24 ಗಂಟೆಗಳ ಕಾಲ ವಿದ್ಯುತ್ ನೀಡಬೇಕು. ಇಲ್ಲದಿದ್ದರೆ, ಹೋರಾಟ ತೀವ್ರ ಸ್ವರೂಪ ಪಡೆಯಲಿದೆ ಎಂದು ರೈತ ಹೋರಾಟ ಸಮಿತಿ ಅಧ್ಯಕ್ಷ ಮುತ್ತಣ್ಣ ಮ್ಯಾಗೇರಿ ಎಚ್ಚರಿಕೆ ನೀಡಿದರು.
ಪಟ್ಟಣದ ಎಪಿಎಂಸಿ ಆವರಣದ ರೈತ ಭವನದಲ್ಲಿ ಬುಧವಾರ ಉಣಚಗೇರಿ ಹದ್ದಿನ ರೈತರು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 5 ಎಚ್‌ಪಿ ಮೋಟಾರ್ ಪಂಪ್‌ಸೆಟ್ ಹೊಂದಿರುವ ರೈತರಿಗೆ ಮಾಸಿನ 777 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಬೇಕೆಂದು ಸರ್ಕಾರವೇ ಯೋಜನೆ ಜಾರಿಗೆ ತಂದು ಹಲವು ವರ್ಷಗಳೇ ಕಳೆದಿವೆ. ಅದರಂತೆಯೇ ಸರ್ಕಾರ ಇದಕ್ಕೆ ತಗಲುವ ಅನುದಾನವನ್ನು ಹೆಸ್ಕಾಂ ಇಲಾಖೆಗೆ ಭರಣಾ ಮಾಡುತ್ತದೆ. ಆದರೆ, ಈ ಭಾಗದ ರೈತರ ಬಹುತೇಕ 1 ರಿಂದ 2 ಎಚ್‌ಪಿ ಮಾತ್ರ ಇವೆ. ದಿನದ 24 ಗಂಟೆ ವಿದ್ಯುತ್ ಉಪಯೋಗಿಸಿದರೂ 600 ಯೂನಿಟ್ ಬಳಕೆಯಾಗುವುದಿಲ್ಲ. ಪ್ರತಿ ತಿಂಗಳು ನೂರಾರು ಯೂನಿಟ್ ಹೆಸ್ಕಾಂಗೆ ವಿದ್ಯುತ್ ಉಳಿತಾಯವಾಗುತ್ತದೆ. ಇಷ್ಟೆಲ್ಲಾ ಇದ್ದರೂ ವಿದ್ಯುತ್ ನೀಡದೇ ಹೆಸ್ಕಾಂ ವಿದ್ಯುತ್ ಹಗಲು ದರೋಡೆ ಮಾಡುತ್ತಿದೆ ಎಂದು ಆರೋಪಿಸಿದರು.
ಉಣಚಗೇರಿ ಹದ್ದಿನಲ್ಲಿ ಒಟ್ಟು 248 ಪಂಪ್ ಸೆಟ್‌ಗಳಿಗೆ ಪ್ರತಿ ವರ್ಷ 1.92 ಲಕ್ಷ ಯೂನಿಟ್ ವಿದ್ಯುತ್ ಉಪಯೋಗವಾಗುತ್ತಿದೆ. ಆದರೆ, ಸರ್ಕಾರ ಯೋಜನೆಯಿಂದ ಉಣಚಗೇರಿಯ ರೈತರಿಗೆ ಪ್ರತಿ ವರ್ಷ 23 ಲಕ್ಷ ಯೂನಿಟ್ ವಿದ್ಯುತ್ ಪೂರೈಕೆಯಾಗುತ್ತಿದೆ. ಇನ್ನುಳಿದ ವಿದ್ಯುತ್ ಎಲ್ಲಿ ಪೂರೈಕೆಯಾಗುತ್ತಿದೆ. ಇದೊಂದು ದೊಡ್ಡ ಹಗರಣವಾಗಿದ್ದು, ಇದರ ಹಿಂದೆ ಕಾಣದ ಕೈಗಳು ಅಡಗಿವೆ ಎಂದು ಅನುಮಾನ ವ್ಯಕ್ತಪಡಿಸಿದರು.
ರೈತರಿಗೆ ಹೆಸ್ಕಾಂ ದಿನದ 24 ಗಂಟೆಗಳ ಕಾಲ ವಿದ್ಯುತ್ ಪೂರೈಸಿದರೂ ಹೆಸ್ಕಾಂಗೆ ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ಉಳಿತಾಯವಾಗುತ್ತದೆ. ಹೀಗಿದ್ದರೂ, 7 ಗಂಟೆ ಮಾತ್ರ ವಿದ್ಯುತ್ ನೀಡುವ ಮೂಲಕ ರೈತರನ್ನು ಕತ್ತಲು ಕೊಣೆಗೆ ತಳ್ಳುವ ನೀತಿ ಅನುಸರಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಹೆಸ್ಕಾಂ ಮುಗ್ಧ ರೈತರನ್ನು ವಂಚಿಸಿ, ದೊಡ್ಡ, ದೊಡ್ಡ ಕಾರ್ಖಾನೆಗಳು, ಜನಪ್ರತಿನಿಧಿಗಳ ಕಾರ್ಖಾನೆಗಳಿಗೆ ವಿದ್ಯುತ್ ಪೂರೈಕೆ ಮಾಡುವ ಜಾಲವನ್ನು ವ್ಯಾಪಕವಾಗಿ ಹರಡಿದೆ. ಈ ಕುರಿತು ದೊಡ್ಡ ಮಟ್ಟದ ತನಿಖೆಯಾಗಬೇಕು. ಉಣಚಗೇರಿ ರೈತರಿಗೆ ದಿನದ 24 ಗಂಟೆ ವಿದ್ಯುತ್ ನೀಡಲು ಮುಂದಾಗಬೇಕೆಂದು ಒತ್ತಾಯಿಸಿದರು.
ಹೋರಾಟ ಸಮಿತಿ ಉಪಾಧ್ಯಕ್ಷ ಇಸ್ಮಾಯಿಲಸಾಬ ಗೊಲಗೇರಿ ಮಾತನಾಡಿ, ಸರ್ಕಾರದ ಯೋಜನೆಯಂತೆ ಉಣಚಗೇರಿ ಹದ್ದಿನ ರೈತರಿಗೆ ದಿನದ 24 ಗಂಟೆಗಳ ಕಾಲ ವಿದ್ಯುತ್ ಪೂರೈಸಿದರೂ ಹೆಸ್ಕಾಂಗೆ ವಾರ್ಷಿಕ 51 ಸಾವಿರ ಯೂನಿಟ್ ವಿದ್ಯುತ್ ಉಳಿತಾಯವಾಗುತ್ತದೆ. ಆದರೂ, ಹೆಸ್ಕಾಂ ಅಧಿಕಾರಿಗಳು ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ರೈತರನ್ನೇ ಮೃತ್ಯುಕೂಪಕ್ಕೆ ತಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಈ ಕುರಿತು ಹೆಸ್ಕಾಂ ಎಂಡಿ ಅವರ ಜೊತೆಗೆ ರೈತರು ಚರ್ಚಿ ನಡೆಸಿ, ವಿದ್ಯುತ್ ಪೂರೈಕೆಗೆ ಮತ್ತೂಮ್ಮೆ ಒತ್ತಾಯಿಸಲಾಗುವುದು. ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಉಗ್ರ ಸ್ವರೂಪದ ಹೋರಾಟಗಳು ರೂಪುಗೊಳ್ಳಲಿವೆ ಎಂದು ಎಚ್ಚರಿಸಿದರು.
ಬಸವರಾಜ ಪಲ್ಲೇದ, ಹನೀಫ್ ಕಟ್ಟಿಮನಿ, ಅಮರೇಶ ಹಿರೇಕೊಪ್ಪ, ಮುರ್ತುಜಾ ಡಾಲಾಯತ್, ಬಸವರಾಜ ಚನ್ನಿ, ನರಸಿಂಗಸಾ ರಂಗ್ರೇಜಿ, ರಾಜಪ್ಪ ದಾರೋಜಿ, ಪುಲಕೇಶಿ ವದೆಗೋಳ, ಸಿದ್ದು ಗೊಂಗಡಶೆಟ್ಟಿಮಠ, ವಿಜಯಕುಮಾರ ಜಾಧವ, ನಾಗಪ್ಪ ವದೆಗೋಳ, ಶರಣಪ್ಪ ಭಗವತಿ, ಬಸವರಾಜ ನಂದಿಹಾಳ, ಚಂದ್ರು ಹೂಗಾರ, ಶಿವಪ್ಪ ಕುಂಬಾರ, ಯಲ್ಲಪ್ಪ ಗದ್ದಿ ಇತರರಿದ್ದರು.
ವಿಪಕ್ಷ ನಾಯಕರಿಗೆ ರೈತರ ಮನವಿ
ಕೆಲ ದಿನಗಳ ಹಿಂದೆ ಬೆಂಗಳೂರಿಗೆ ತೆರಳಿದ್ದ ಗಜೇಂದ್ರಗಡದ ಊಣಚಗೇರಿ ಹದ್ದಿನ ರೈತರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ ಅವರನ್ನು ಭೇಟಿ ಮಾಡಿ, ರೈತರಿಗೆ ಆಗುತ್ತಿರುವ ವಿದ್ಯುತ್ ಅಭಾವದ ಜೊತೆಗೆ ಹೆಸ್ಕಾಂ ವಿದ್ಯುತ್ ಹಗರಣದ ಕುರಿತು ಸದನದಲ್ಲಿ ಸರ್ಕಾರದ ಗಮನ ಸೆಳೆಯಬೇಕೆಂದು ಮನವಿ ಮಾಡಿಕೊಂಡಿದ್ದಾರೆ.