Advertisement

ಕಾರ್‌ ಬಾಂಬ್‌ ಮಹಾಸ್ಫೋಟಕ್ಕೆ ಉಗ್ರ ಸಂಚು

07:15 AM Feb 13, 2018 | Team Udayavani |

ಹೊಸದಿಲ್ಲಿ: ಕೆಲವು ದಿನಗಳ ಹಿಂದೆ ಶ್ರೀನಗರದಲ್ಲಿ ಪೊಲೀಸ್‌ ವಶದಿಂದ ತಪ್ಪಿಸಿಕೊಂಡಿದ್ದ ಲಷ್ಕರ್‌ ಕಮಾಂಡರ್‌ ನವೀದ್‌ ಜುಟ್‌ ಸಂಚು ಈಗ ಬಯಲಾಗಿದೆ. ಕಾಶ್ಮೀರದಲ್ಲಿ ಕಾರ್‌ ಬಾಂಬ್‌ ಸ್ಫೋಟ ನಡೆಸಲು ಉದ್ದೇಶಿಸಿರುವುದು ತಿಳಿದುಬಂದಿರುವುದಾಗಿ ಗುಪ್ತಚರ ಮೂಲಗಳು ಹೇಳಿವೆ.

Advertisement

ಈವರೆಗೆ ಕಾಶ್ಮೀರದಲ್ಲಿ ಸೇನಾ ನೆಲೆಗಳನ್ನೇ ಗುರಿಯಾಗಿಸಿಕೊಳ್ಳುತ್ತಿದ್ದ ಜೈಶ್‌-ಎ- ಮೊಹಮ್ಮದ್‌, ಲಷ್ಕರ್‌ ಹಾಗೂ ಹಿಜ್ಬುಲ್‌ ಮುಜಾಹಿದೀನ್‌ ಒಟ್ಟಾಗಿ ನವೀದ್‌ ಮೂಲಕ ಕಾರ್‌ ಅಥವಾ ಟ್ರಕ್‌ನಲ್ಲಿ ಸ್ಫೋಟಕ ತುಂಬಿಕೊಂಡು ಬಂದು ದಾಳಿ ನಡೆಸುವ ಸಂಚು ರೂಪಿಸಿವೆ. ಉಗ್ರರ ದೂರವಾಣಿ ಮಾತುಕತೆ ಛೇದಿಸಿ ದಾಗ ಈ ಮಾಹಿತಿ ಬಹಿರಂಗವಾಗಿದೆ.

ಪಾಕ್‌ನ ಮುಲ್ತಾನ್‌ ಪ್ರದೇಶದವನಾದ ನವೀದ್‌, ಶೋಪಿಯಾನ್‌ ಮತ್ತು ಕುಲ್ಗಾಂವ್‌ ಸಹಿತ ಕಣಿವೆ ಪ್ರದೇಶಗಳಲ್ಲಿ ಹಲವೆಡೆ ಸುತ್ತಾಡಿರುವುದು ತಿಳಿದು ಬಂದಿದೆ. ಅಷ್ಟೇ ಅಲ್ಲ, ಈತ ಕಾಶ್ಮೀರ ಕಣಿವೆಯಲ್ಲಿ ಯುವಕರನ್ನು ಸೆಳೆಯಲೂ ಯೋಜಿಸುತ್ತಿದ್ದಾನೆ. 2014ರಲ್ಲಿ ಈತ ಬಂಧಿತನಾಗಿದ್ದು, ಆಗ ಈತ ಲಷ್ಕರ್‌ಗೆ ಉಪ ಮುಖ್ಯಸ್ಥನಾಗಿದ್ದ.

ದೊಡ್ಡ ಮಟ್ಟದಲ್ಲಿ ದಾಳಿ ನಡೆಸಲು ಉಗ್ರರು ಯೋಜಿಸುತ್ತಿದ್ದು, ಭಾರೀ ಸ್ಫೋಟಕಗಳನ್ನು ತುಂಬಿ ಕಾರು ಅಥವಾ ಲಾರಿಯನ್ನು ಪ್ರಮುಖ ಪ್ರದೇಶಗಳಿಗೆ ನುಗ್ಗಿಸುವುದು ಇವರ ಉದ್ದೇಶವಾಗಿದೆ. ಸರಕಾರದ ಉನ್ನತ ಅಧಿಕಾರಿಗಳ ಕಚೇರಿ, ಹಿರಿಯ ಸೇನಾಧಿಕಾರಿಗಳ ಕಚೇರಿ, ಸೇನಾ ನೆಲೆ, ಹೊಟೇಲ್‌ ಅಥವಾ ವಿಧಾನಸೌಧದ ಮೇಲೆ ದಾಳಿ ನಡೆಸಲು ಯೋಜಿಸಲಾಗಿದೆ.

ಪಾಕ್‌ಗೆ ಸರ್ಜಿಕಲ್‌ ದಾಳಿ ಭೀತಿ: ಸಂಜ್ವಾನ್‌ನಲ್ಲಿ ನಡೆದ ಉಗ್ರ ದಾಳಿಯ ಪ್ರತೀಕಾರ ತೀರಿಸಿಕೊಳ್ಳಲು ಭಾರತ ಸರ್ಜಿಕಲ್‌ ದಾಳಿ ನಡೆಸುವ ಭೀತಿ ಪಾಕಿಸ್ಥಾನಕ್ಕೆ ಎದುರಾಗಿದೆ. ಗಡಿ ದಾಟಿ ಯಾವುದೇ ದಾಳಿ ನಡೆಸದಂತೆ ಭಾರತಕ್ಕೆ ಎಚ್ಚರಿಕೆ ನೀಡಿದೆ. ಪಾಕಿಸ್ಥಾನ ಮೂಲದ ಜೈಶ್‌ ಉಗ್ರರೇ ಈ ದಾಳಿ ನಡೆಸಿದ್ದಾರೆ ಎಂದು ಭಾರತ ಹೇಳಿದ್ದು, ಯಾವುದೇ ತನಿಖೆ ನಡೆಸದೇ ಈ ನಿರ್ಧಾರಕ್ಕೆ ಬರಬಾರದು ಎಂದಿದೆ.

Advertisement

ಮತ್ತೂಂದು ದಾಳಿ ತಡೆದ ಸೇನೆ
ಸಂಜ್ವಾನ್‌ನಲ್ಲಿ  ಸೇನಾ ನೆಲೆಯ ಮೇಲೆ ದಾಳಿ ಘಟನೆ ಮರೆಯುವ ಮುನ್ನವೇ, ಈಗ ಉಗ್ರರ ಮತ್ತೂಂದು ದಾಳಿ ಪ್ರಯತ್ನವನ್ನು ಸೇನೆ ವಿಫ‌ಲಗೊಳಿಸಿದೆ. ಈ ವೇಳೆ ನಡೆದ ಭಾರೀ ಗುಂಡಿನ ಚಕಮಕಿಯಲ್ಲಿ ಅರೆಸೇನಾ ಪಡೆಯ ಯೋಧ ಹುತಾತ್ಮರಾಗಿದ್ದಾರೆ. ಸೇನಾ ನೆಲೆಯ ಸಮೀಪವಿರುವ ಕರಣ್‌ ನಗರದ ಮನೆಯೊಂದರಲ್ಲಿ ಉಗ್ರರು ಅವಿತುಕೊಂಡಿದ್ದರು. ಈ ಬಗ್ಗೆ ಮಾಹಿತಿ ತಿಳಿದು ಬಂದ ಸೇನೆ ದಾಳಿ ನಡೆಸಿದೆ. ಈ ಮಧ್ಯೆ ಮನೆಯಲ್ಲಿ ಅಡಗಿದ್ದ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುವ ವೇಳೆ ಸುತ್ತಲಿನ ನಿವಾಸಿಗಳು ಸೇನೆಯ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆಯೂ ನಡೆದಿದೆ. ಕಾರ್ಯಾಚರಣೆ ತಡರಾತ್ರಿಯವರೆಗೂ ಮುಂದುವರಿದಿತ್ತು.

ದುಸ್ಸಾಹಸಕ್ಕೆ ಪಾಕ್‌ ಬೆಲೆ ತೆರುತ್ತದೆ
ಜಮ್ಮುವಿನ ಸಂಜ್ವಾನ್‌ನಲ್ಲಿ ದಾಳಿ ನಡೆಸಿದ ಪಾಕಿಸ್ಥಾನ ತಕ್ಕ ಬೆಲೆ ತೆರುತ್ತದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಜೈಶ್‌-  ಎ-ಮೊಹಮ್ಮದ್‌ ಉಗ್ರರು ಈ ದಾಳಿ ನಡೆಸಿದ್ದು, ಈ ಸಂಘಟನೆಗೆ ಮಸೂದ್‌ ಅಜರ್‌ ರೂವಾರಿ. ಇವರಿಗೆ ಸ್ಥಳೀಯ ಬೆಂಬಲವೂ ಇದೆ. ಗಡಿಯಾಚೆಗೆ ಇವರಿಗೆ ಪಾಕಿಸ್ಥಾನದ ಬೆಂಬಲವೂ ಸಿಕ್ಕಿದೆ ಎಂದು ನಿರ್ಮಲಾ ಹೇಳಿದ್ದಾರೆ. ಜಮ್ಮು ಕಾಶ್ಮೀರ ಸಿಎಂ ಮೆಹಬೂಬಾ ಮುಫ್ತಿ ಜತೆಗಿನ ಸಭೆಯ ಬಳಿಕ ನಿರ್ಮಲಾ ಪತ್ರಿಕಾಗೋಷ್ಠಿ ನಡೆಸಿ ಈ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next