ಯಲ್ಲಾಪುರ: ವಜ್ರಳ್ಳಿ ವ್ಯಾಪ್ತಿಯ ಬಾಗಿನ ಕಟ್ಟಾದಿಂದ ಕಳಚೆಗೆ ಈಗಾಗಲೇ ಎರಡು ರಸ್ತೆ ಇದ್ದಾಗ್ಯೂ, ರಸ್ತೆ ಶಾರ್ಟ್‌ಕಟ್ ಮಾಡುವ ಭರದಲ್ಲಿ ಹೊಸದಾಗಿ ಸೊಪ್ಪಿನ ಬೆಟ್ಟದಲ್ಲಿ ರಸ್ತೆ ಮಾಡಿದ್ದನ್ನು ಸಾಮಾಜಿಕ ಕಾರ್ಯಕರ್ತ ನ.ವಿ. ಗಾಂವ್ಕಾರ ಬಾಗಿನಕಟ್ಟಾ ತೀವ್ರವಾಗಿ ಖಂಡಿಸಿದ್ದಾರೆ.
ಇದರಿಂದಾಗಿ ರಸ್ತೆ ನಿರ್ಮಾಣ ಕಾರ್ಯ ವಿವಾದದ ಸುಳಿಯಲ್ಲಿ ಸಿಲುಕಿದೆ. ಅವರು ಈ ಕುರಿತು ಮಂಗಳವಾರ ಹೇಳಿಕೆ ನೀಡಿ, ಕಳಚೆ ಭಾಗದ ಕೆಲ ಜನರ ಹುನ್ನಾರದಿಂದ ಎರಡೆರಡು ರಸ್ತೆ ಇದ್ದಾಗ್ಯೂ ತಮ್ಮ ಸೊಪ್ಪಿನಬೆಟ್ಟದಿಂದ ಪ್ರತ್ಯೇಕ ರಸ್ತೆ ಮಾಡಿದ್ದಾರೆ. ಇದು ಸರಿಯಾದ ಕ್ರಮ ಅಲ್ಲ. ಹಳೆಯ ರಸ್ತೆಯಂತೆ ಹೊಸ ರಸ್ತೆ ಸುರಕ್ಷಿತವೂ ಅಲ್ಲ. ಹೊಸ ರಸ್ತೆಯಿಂದಾಗಿ ಮಳೆಗಾಲದಲ್ಲಿ ಭೂಕುಸಿತವಾಗಿ ನೀರಿನ ಕಾಲುವೆ, ಹಳೆರಸ್ತೆಗೆ ಧಕ್ಕೆ ಆಗಿ, ಅಯೋಮಯ ಉಂಟಾಗುವ ಸಾಧ್ಯತೆ ಇದೆ. ಕಾರಣ ಮೂಲ ರಸ್ತೆಯನ್ನು ಮಾತ್ರ ಸಿಂಧುವಾಗಿ ಪರಿಗಣಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಕಳಚೆ ಭಾಗದಿಂದ ಭಾಗಿನಕಟ್ಟಾ ಗ್ರಾಮಕ್ಕೆ ಕಳೆದ 40 ವರ್ಷಗಳ ಹಿಂದೆಯೇ ತಾಲೂಕು ಬೋರ್ಡ್ ಸದಸ್ಯ ವಿ.ಎನ್. ಭಟ್ಟ ಉಪಾಧ್ಯ ಅವರು ರಸ್ತೆ ಸಂಪರ್ಕ ಕಲ್ಪಿಸಿದ್ದರು. ಅದು ಭಾಗಿನಕಟ್ಟಾದ ಸರ್ವೇ ನಂ. 25 ಮತ್ತು 24 ಮಧ್ಯದಲ್ಲಿದ್ದು ಈವರೆಗೂ ಕಚ್ಚಾ ರಸ್ತೆಯಾಗಿ ಕಾಯಂ ವಾಹನ ಓಡಾಟ ನಡೆಸಲಾಗುತ್ತಿದೆ. ಅಲ್ಲದೇ ಸರ್ವೇ ನಂ.23 ರ ಹೊರಗಿನಿಂದ ಸ್ಥಳಿಯರು ಶ್ರಮದಿಂದ ನಿರ್ಮಿಸಿದ ಮತ್ತೂಂದು ರಸ್ತೆ ಕೂಡಾ ಇದೆ. ಭಾಗಿನಕಟ್ಟಾದಿಂದ ಕಳಚೆಗೆ ಎರಡು ರಸ್ತೆ ಕಾರ್ಯಾಚರಿಸುತ್ತಿದೆ. ಹೀಗಿರುವಾಗ ಕಳೆದ ವರ್ಷ ಭೂ ಕುಸಿತದಿಂದ ಅತಂತ್ರ ಸಂದರ್ಭದಲ್ಲಿ ಬೀಗಾರ ಮುಖ್ಯರಸ್ತೆಯಿಂದ ಭಾಗಿನಕಟ್ಟಾ ಮೂಲಕ ಕಳಚೆಗೆ ಹೋಗಲು ಸರ್ವ ಋತು ರಸ್ತೆ ಮಾಡಲು ಪ್ರಕೃತಿ ವಿಕೋಪ ನಿಧಿಯಿಂದ ಮುಂದಾಗಿದ್ದು, ಸ.ನಂ. 24 ಮತ್ತು 25 ರ ಹೊಂದಿನಲ್ಲಿರುವ ರಸ್ತೆ ಸುರಕ್ಷಿತವಾಗಿದೆ. ಈ ಮೂಲ ರಸ್ತೆಯ ಅಭಿವೃದ್ಧಿ ಆಗಬೇಕು ಎನ್ನುವ ಬಗ್ಗೆ ತಾವು ಜಿಲ್ಲಾಧಿಕಾರಿಗಳಿಗೆ ಈ ಹಿಂದೆಯೇ ಪತ್ರ ಬರೆದು ಆಗ್ರಹಿಸಿದ್ದೇನೆ. ಅದಕ್ಕೆ ಜಿಲ್ಲಾಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳಲು ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರು ಶಿರಸಿ ಅವರಿಗೆ ಸೂಚನೆಯನ್ನೂ ನೀಡಿದ್ದಾರೆ.
ಕಳೆದ ಮಳೆಗಾಲದ ಪ್ರಕೃತಿ ವಿಕೋಪದ ದುರ್ಲಾಭ ಪಡೆಯುವ ಸಲುವಾಗಿ ಕಳಚೆ ಭಾಗದ ಕೆಲವರ ಹಿತಾಸಕ್ತಿಯಿಂದ ರಸ್ತೆ ಮಾಡುವ ಪ್ರಯತ್ನವಾಗಿ ತಮ್ಮ ಸೊಪ್ಪಿನ ಬೆಟ್ಟದಲ್ಲಿ ಬೆಳಸಿದ ಗೇರು, ಮಾವು ಇತ್ಯಾದಿ ಗಿಡಗಳನ್ನು ನಾಶಮಾಡಿ, ರಸ್ತೆ ನಿರ್ಮಿಸಿದ್ದಾರೆ. ಇದರಿಂದ ತಮಗೆ ನಷ್ಟ ಉಂಟಾಗಿದ್ದಲ್ಲದೇ, ಇಳಿ ವಯಸ್ಸಿನಲ್ಲಿ ಮಾನಸಿಕ ಕಿರಿಕಿರಿ ಉಂಟು ಮಾಡಿದ್ದಾರೆ. ಎರಡೆರಡು ರಸ್ತೆ ಇರುವಾಗ ಶಾರ್ಟ್‌ಕಟ್ ನೆಪದಲ್ಲಿ ಮತ್ತೂಂದೆಡೆ ರಸ್ತೆ ಮಾಡಿರುವುದು ಸಮಂಜಸವಲ್ಲ. ಇದು ದುರುದ್ದೇಶಪೂರ್ವಕ ಅಂದುಕೊಳ್ಳಬೇಕಾಗುತ್ತದೆ. ಮೂಲ ರಸ್ತೆಯನ್ನೆ ಸರ್ವ ಋತು ರಸ್ತೆಯಾಗಿ ಮಾಡಬೇಕೆಂದು ಆಗ್ರಹಿಸಿದ್ದಾರೆ.