Advertisement

ಸರ್ಕಾರಿ ಆಸ್ಪತ್ರೆಗಳ ಖಾಸಗಿ ನಿರ್ವಹಣೆಗೆ ತೀವ್ರ ವಿರೋಧ

12:15 PM Dec 24, 2019 | Suhan S |

ವಿಜಯಪುರ: ಸರ್ಕಾರಿ ಆಸ್ಪತ್ರೆಗಳನ್ನು ಆರೋಗ್ಯ ಬಂಧು ಯೋಜನೆ ಹೆಸರಿನಲ್ಲಿ ಸರ್ಕಾರಿ ವ್ಯವಸ್ಥೆಯಿಂದ ಖಾಸಗಿ ನಿರ್ವಹಣೆಗೆ ವಹಿಸುವ ಕ್ರಮ ವಿರೋಧಿಸಿ ಜಿಪಂ ಸಾಮಾನ್ಯ ಸಭೆಯಲ್ಲಿ ಗದ್ದಲ ಏರ್ಪಟ್ಟು, ಅಧ್ಯಕ್ಷರ ಸಮಜಾಯಿಸಿಗೂ ಕಿವಿಗೊಡದ ಸದಸ್ಯರು ಸಭಾತ್ಯಾಗ ಮಾಡಿದ ಪ್ರಸಂಗ ಜರುಗಿತು.

Advertisement

ಸೋಮವಾರ ನಗರದ ಜಿಪಂ ಸಭಾಂಗಣದಲ್ಲಿ ಜಿಪಂ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ ಅಧ್ಯಕ್ಷತೆಯಲ್ಲಿ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಹಿರಿಯ ಸದಸ್ಯ ಉಮೇಶ ಕೋಳಕೂರ, ಆರೋಗ್ಯ ಬಂಧು ಯೋಜನೆ ಹೆಸರಿನಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ಖಾಸಗಿ ನಿರ್ವಹಣೆಗೆ ವಹಿಸುವಲ್ಲಿ ಕೋಟಿ ಕೋಟಿ ರೂ. ಭ್ರಷ್ಟಾಚಾರ ನಡೆದಿದ್ದು, ಕೂಡಲೇ ಪ್ರಕರಣವನ್ನು ಎಸಿಬಿ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು. ಈ ಹಂತದಲ್ಲಿ ಗದ್ದಲ ಏರ್ಪಟ್ಟರೂ ಆದರೆ ಈ ವಿಷಯ ಪ್ರಸ್ತಾಪ ಹಾಗೂ ಚರ್ಚೆಗೆ ಅಧ್ಯಕ್ಷ ಶಿವಯೋಗೆಪ್ಪ ಅನುಮತಿ ನೀಡದಿದ್ದಾಗ ಸದಸ್ಯರು ಸಭಾತ್ಯಾಗ ಮಾಡಿದರು.

ಸಾರ್ವಜನಿಕರಿಗೆ ಉತ್ತಮ, ಗುಣಮಟ್ಟ ಹಾಗೂ ವಿಶ್ವಾಸಾರ್ಹ ಅರೋಗ್ಯ ಸೇವೆ ನೀಡಬೇಕಾದುದು ಸರ್ಕಾರದ ಕರ್ತವ್ಯ. ಆದರೆ ಸರ್ಕಾರ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಸರ್ಕಾರಿ ಆಸ್ಪತ್ರೆಗಳನ್ನೇ ಖಾಸಗಿಯರಿಗೆ ವಹಿಸುವ ಕ್ರಮ ಸರಿಯಲ್ಲ. ಕೂಡಲೇ ಖಾಸಗೀಕರಣದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದಾಗ ಇತರೆ ಸದಸ್ಯರು ಉಮೇಶ ಕೋಳಕೂರ ಬೆಂಬಲಕ್ಕೆ ನಿಂತರು. ಈ ಹಂತದಲ್ಲಿ ಜಿಪಂ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ, ಉಪಾಧ್ಯಕ್ಷ ಪ್ರಭು ದೇಸಾಯಿ ಅವರು ಸಮಜಾಯಿಸಿ ನೀಡಲು ಮುಂದಾದರೂ ಸದಸ್ಯರು ಪಟ್ಟು ಸಡಿಲಿಸಲಿಲ್ಲ. ಅತ್ತ ಅಧ್ಯಕ್ಷರು ಕೂಡ ಈ ಕುರಿತು ಚರ್ಚೆಗೆ ಅವಕಾಶ ನೀಡಲಿಲ್ಲ. ಇದರಿಂದ ಕುಪಿತರಾದ ಸದಸ್ಯರು ಸಭಾತ್ಯಾಗ ಮಾಡಿದರು.

ಈ ಹಂತದಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ಖಾಸಗಿ ನಿರ್ವಹಣೆಗೆ ಒಪ್ಪಿಸಿರುವ ಉದ್ದೇಶದ ಕುರಿತು ಮಾಹಿತಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಮಹೇಂದ್ರ ಕಾಪ್ಸೆ, ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಸೇವೆ ನೀಡಲು ವೈದ್ಯರ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ನಿರ್ದೇಶನದ ಮೇರೆಗೆ ಜಿಲ್ಲೆಯ ಆಯ್ದ 6 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ವಹಣೆಗಾಗಿ ಸರ್ಕಾರೇತರ ಸಂಸ್ಥೆಗೆ ಒಪ್ಪಿಸಲಾಗಿದೆ ಎಂದು ವಿವರಿಸಿದರು.

ಡಿಎಚ್‌ಒ ಅವರ ಹೇಳಿಕೆಯಿಂದ ತೃಪ್ತರಾಗದ ಸದಸ್ಯರಾದ ಮಹಾಂತಗೌಡ ಪಾಟೀಲ, ಬಿ.ಆರ್‌. ಯಂಟಮಾನ, ಅಧಿಕಾರಿಗಳು ಅಧಿಕಾರ ವ್ಯಾಪ್ತಿ ಮೀರಿ ವರ್ತಿಸುತ್ತಿದ್ದಾರೆ. ಆರೋಗ್ಯ ಬಂಧು ಯೋಜನೆಯಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ಖಾಸಗೀಕರಣ ಮಾಡುವ ಅಧಿಕಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಇಲ್ಲ. ಹೀಗಿದ್ದರೂ ಅಧಿಕಾರ ವ್ಯಾಪ್ತಿ ಮೀರಿ ಮಾಡಿರುವ ಕೆಲಸಕ್ಕೆ ಸಮರ್ಥನೆ ನೀಡುತ್ತಿದ್ದಾರೆ. ಒಂದೊಮ್ಮೆ ಈ ಕುರಿತು ಅಧಿಕಾರ ಇದೆ ಎಂದಾದರೆ ಡಿಎಚ್‌ಒ ಅವರಿಂದ ಲಿಖೀತ ಹೇಳಿಕೆ ಕೊಡಿಸಿ ಎಂದು ಜಿಪಂ ಸಿಇಒ ಗೋವಿಂದರಡ್ಡಿ ಅವರನ್ನು ಆಗ್ರಹಿಸಿದರು.

Advertisement

ಈ ಹಿಂದಿನ ಸದಸ್ಯರ ಸಾಲಿನಲ್ಲಿದ್ದ ನೀವೇ ಸಾಮಾನ್ಯ ಸಭೆಯಲ್ಲಿ ಆರೋಗ್ಯ ಬಂಧು ಯೋಜನೆಯಲ್ಲಿ ಭಾರಿ ಹಗರಣ ನಡೆದಿದೆ ಎಂದು ಆರೋಪಿಸಿದ ನೀವೇ ಇದೀಗ ಅಧ್ಯಕ್ಷ ಕುರ್ಚಿಯಲ್ಲಿ ಕುಳಿತು ಹಗರಣ ನಡೆದಿಲ್ಲ ಎಂಬಂತೆ ಅಧಿಕಾರಿಗಳನ್ನು ಸಮರ್ಥಿಸಿಕೊಳ್ಳುತ್ತಿದ್ದೀರಿ. ಸರ್ಕಾರಿ ಆಸ್ಪತ್ರೆಗಳನ್ನು ಖಾಸಗೀಕರಣ ಮಾಡುವಲ್ಲಿ ಸುಮಾರು 1.42 ಕೋಟಿ ರೂ. ಅವ್ಯವಹಾರ ನಡೆದಿದೆ. ಹೀಗಾಗಿ ಈ ಮಟ್ಟದ ಹಗರಣದ ಕುರಿತು ಸಮಗ್ರ ತನಿಖೆಗಾಗಿ ಎಸಿಬಿ ಸಂಸ್ಥೆಗೆ ಒಪ್ಪಿಸಿ ಎಂದು ಉಮೇಶ ಕೋಳಕೂರ ಪಟ್ಟು ಹಿಡಿದರು.

ಈ ಹಂತದಲ್ಲಿ ಸಮಜಾಯಿಸಿ ನೀಡಲು ಮುಂದಾದ ಅಧ್ಯಕ್ಷ ನೇದಲಗಿ, ಖಾಸಗಿ ನಿರ್ವಹಣೆಗೆ ಒಪ್ಪಿಸಿದ ಸರ್ಕಾರಿ ಆಸ್ಪತ್ರೆಗಳಲ್ಲಿ ಈಗ ಗುಣಮಟ್ಟದ ಆರೋಗ್ಯ ಸೇವೆ ಸಿಗುತ್ತಿದೆ. ಅಂದು ಹಾಗೂ ಇಂದಿನ ಸ್ಥಿತಿಯ ಕುರಿತು ಫೋಟೋಗಳಿದ್ದು ದಯವಿಟ್ಟು ಪರಿಶೀಲಿಸಿ ಎಂದು ಮನವಿ ಮಾಡಿದರು. ಇಷ್ಟಾದರೂ ಒಪ್ಪದ ಕುಪಿತ ಸದಸ್ಯರು ಸಭೆಯಿಂದ ಹೊರ ನಡೆದರು. ಕೃಷಿ ಇಲಾಖೆಯಲ್ಲಿ ಏನು ನಡೆಯುತ್ತಿದೆ ಎಂಬುದು ಸದಸ್ಯರಾದ ನಮಗೆ ಸೂಕ್ತ ಮಾಹಿತಿ ಇಲ್ಲ ಎಂದಾದರೆ ರೈತರಿಗೆ ಸರ್ಕಾರಿ ಯೋಜನೆಗಳ ಕುರಿತು ವಿವರಿಸುವ ಬಗೆಯಾದರೂ ಹೇಗೆ ಎಂದು ಭುವನೇಶ್ವರಿ ಬಗಲಿ, ಬಿ.ಆರ್‌. ಯಂಟಮಾನ, ಪ್ರತಿಭಾ ಪಾಟೀಲ ಅಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಕುಮಾರ, ಒತ್ತಡದಲ್ಲಿ ಮಾಹಿತಿ ನೀಡುವಲ್ಲಿ ವಿಳಂಬವಾಗಿದೆ ಎಂದಾಗ, ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಎಲ್ಲ ಸದಸ್ಯರಿಗೆ ಅವರು ಕೇಳಿದ ಮಾಹಿತಿ ನೀಡಿ ಎಂದು ಸಿಇಒಗೆ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next