ಪುಲ್ವಾಮಾ : ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಬಾಮ್‌ನೂ ಪ್ರದೇಶದಲ್ಲಿ ಇಂದು ಸೋಮವಾರ ಬೆಳಗ್ಗಿನಿಂದ ಸಾಗಿರುವ ಉಗ್ರರೊಂದಿಗೆ ಭದ್ರತಾ ಪಡೆಗಳ ಭೀಕರ ಗುಂಡಿನ ಕಾಳಗದಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ.
ಇನ್ನೊಬ್ಬ ಉಗ್ರ ಮನೆಯೊಂದರಲ್ಲಿ ಇನ್ನೂ ಅಡಗಿಕೊಂಡಿದ್ದು ಆತನನ್ನು ಶೋಧಿಸುವ ಕಾರ್ಯಾಚರಣೆ ಸಾಗಿದೆ.
ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿರುವ ಇಬ್ಬರು ಉಗ್ರರಲ್ಲಿ ಒಬ್ಟಾತನನ್ನು ಕಿಯಾಫತ್ ಎಂದು ಗುರುತಿಸಲಾಗಿದೆ.
ಪುಲ್ವಾಮಾ ಜಿಲ್ಲೆಯ ಬಾಮ್‌ನೂ ಪ್ರದೇಶದಲ್ಲಿ ಉಗ್ರರು ಅಡಗಿಕೊಂಡಿದ್ದಾರೆ ಎಂಬ ಖಚಿತ ಮಾಹಿತಿ ದೊರಕಿದ ಪ್ರಕಾರ ಭದ್ರತಾ ಪಡೆಗಳು ಅಲ್ಲಿಗೆ ಧಾವಿಸಿ ಶೋಧ ಎನ್‌ಕೌಂಟರ್ ಆರಂಭಿಸಿದರು.
ಸ್ಪೆಶಲ್ ಆಪರೇಶನ್ ಗ್ರೂಪ್ (ಎಸ್‌ಓಜಿ) ಮತ್ತು 44 ರಾಷ್ಟ್ರೀಯ ರೈಫಲ್ ಪಡೆಗಳು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದವು.