Advertisement

2ಎ ಮೀಸಲಾತಿ ಘೋಷಿಸದಿದ್ದರೆ ಉಗ್ರ ಹೋರಾಟ

06:35 PM Apr 03, 2022 | Team Udayavani |

ರಟ್ಟೀಹಳ್ಳಿ: 2ಎ ಮಿಸಲಾತಿಗಾಗಿ ಪಂಚಮಸಾಲಿ ಸಮಾಜದ 24 ಶಾಸಕರು ನಡೆಸಿದ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್‌ ಒಳಗಾಗಿ ಮೀಸಲಾತಿ ಕೊಡುತ್ತೇನೆಂದು ಸ್ವತಃ ಭರವಸೆ ಕೊಟ್ಟಿದ್ದರು.

Advertisement

ಬಜೆಟ್‌ ಅಧಿವೇಶನ ಇನ್ನು ಮೂರೇ ದಿನದಲ್ಲಿ ಮುಗಿಯುತ್ತದೆ. ಆದರೆ, ಮುಖ್ಯಮಂತ್ರಿಗಳಿಂದ ಸ್ಪಷ್ಟ ಭರವಸೆ ಬರುತ್ತಿಲ್ಲ. ಆರಂಭದಲ್ಲಿ ತೋರಿದ ಉತ್ಸಾಹ ಈಗ ತೋರುತ್ತಿಲ್ಲ. ಒಂದೂವರೆ ವರ್ಷದಿಂದ ಹೋರಾಟ ನಡೆಸುತ್ತಿದ್ದರೂ ಸ್ಪಂದಿಸುತ್ತಿಲ್ಲ. ಇದರಿಂದ ನಿರಾಸೆಯಾಗಿದೆ ಎಂದು ಶ್ರೀ ಬಸವಜಯ ಮೃತ್ಯುಂಜಯ ಸಾಮೀಜಿ ಬೇಸರ ವ್ಯಕ್ತಪಡಿಸಿದರು.

ರಟ್ಟೀಹಳ್ಳಿ ಪಟ್ಟಣದಲ್ಲಿ ಮೀಸಲಾತಿ ವಿಚಾರದಲ್ಲಿ ಸರ್ಕಾರದ ವಿಳಂಬ ಧೋರಣೆ ಖಂಡಿಸಿ ತಾಲೂಕು ಪಂಚಮಸಾಲಿ ಸಮಾಜ ಹಮ್ಮಿಕೊಂಡಿದ್ದ ಪ್ರತಿಜ್ಞಾ ಪಂಚಾಯತ್‌ ಮಹಾ ರ್ಯಾಲಿಯಲ್ಲಿ ಭಾಗವಹಿಸಿ, ಮಿಸಲಾತಿಗಾಗಿ ಒತ್ತಾಯಿಸಿ ತಹಶೀಲ್ದಾರ್‌ ಕಚೇರಿಯ ಎಂ.ಎಸ್‌.ಬೆನ್ನೂರುಮಠ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು.

ಮುಖ್ಯಮಂತ್ರಿಗಳಿಗೆ ಯಾವುದೇ ಒತ್ತಡವಿದ್ದರೆ ತಿಳಿಸಬೇಕು. ಕೊಟ್ಟ ಮಾತಿನಂತೆ ಮೀಸಲಾತಿ ಘೋಷಣೆ ಮಾಡಬೇಕೆಂದು ಆಗ್ರಹಿಸುತ್ತೇವೆ. ಇನ್ನು 3 ದಿನದೊಳಗೆ ಮೀಸಲಾತಿ ಘೋಷಣೆ ಮಾಡಬೇಕು. ಈಗಾಗಲೇ ಎರಡು ಗಡುವು ಕೊಟ್ಟಿದ್ದೇವೆ. ಹಿಂದುಳಿದ ವರ್ಗಗಳ ಆಯೋಗದ ವರದಿ ಪಡೆದುಕೊಳ್ಳಬೇಕು. ಏ.14 ರಂದು ನಡೆಯುವ ಅಂಬೇಡ್ಕರ್‌ ಜಯಂತಿಯೊಳಗಾಗಿ ಮೀಸಲಾತಿ ಕೊಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಏ.14 ರೊಳಗಾಗಿ ಬೇಡಕೆ ಈಡೇರದಿದ್ದರೆ 14 ರಂದು ಕೂಡಲಸಂಗಮದಲ್ಲಿ ಮತ್ತೂಮ್ಮೆ ಸಭೆ ಕರೆದು ಅಂತಿಮ ಹೋರಾಟದ ರೂಪುರೇಷಗಳನ್ನು ಸಿದ್ಧಪಡಿಸುತ್ತವೆ. ಚುನಾವಣೆ ಒಳಗಾಗಿ ಮೀಸಲಾತಿ ಘೋಷಣೆಯಾಗಬೇಕು. ಹಕ್ಕೊತ್ತಾಯವನ್ನು ನಾವು ಮಾಡದೇ ಹೋದರೆ ಇಷ್ಟೆಲ್ಲ ಹೋರಾಟ ಮಾಡಿದ್ದೂ ವ್ಯರ್ಥವಾಗುತ್ತದೆ. ಬಸವರಾಜ ಬೊಮ್ಮಾಯಿ ಅವರೇ ನಿಮ್ಮ ಮೇಲೆ ನಂಬಿಕೆ ಇಟ್ಟಿದ್ದೇವೆ. ನಂಬಿಕೆ, ವಿಶ್ವಾಸಕ್ಕೆ ಯಾವುದೇ ಕಾರಣಕ್ಕೂ ಕಳಂಕ ತರಬೇಡಿ. ನಮ್ಮ ಸಮಾಜಕ್ಕೆ ಮೀಸಲಾತಿ ಕೊಡುವುದರಿಂದ ನಿಮಗೇನಾದರೂ ತೊಂದರೆಯಾಗುವುದಾದರೆ, ಯಾವುದಾದರೂ ಒತ್ತಡವಿದ್ದರೆ ಬಹಿರಂಗವಾಗಿ ಹೇಳಿ ಬಿಡಿ. ನಾವು ತಪ್ಪು ತಿಳಿದುಕೊಳ್ಳಲ್ಲ. ಆದರೆ, ಕೊಟ್ಟ ಮಾತಿ ನಂತೆ ನಡೆದುಕೊಳ್ಳಿ. ಮೀಸಲಾತಿ ಕೊಡಲು ಆಗಲ್ಲ ಎಂಬುವುದನ್ನಾದರೂ ನೇರವಾಗಿ ಹೇಳಿಬಿಡಿ ಎಂದರು.

Advertisement

ಈ ಹಿಂದೆ ಯಡಿಯೂರಪ್ಪನವರು ಕೈಕೊಟ್ಟರು. ಈಗ ಬೊಮ್ಮಾಯಿ ಅವರು ಕೈಕೊಟ್ಟರು ಎಂದು ನಾವು ಮುಂದಿನ ದಿನದಲ್ಲಿ ದೇವರು ಶಕ್ತಿಕೊಟ್ಟರೆ ಹೋರಾಟ ಮಾಡುತ್ತವೆ. ನಿಮ್ಮ ತಂದೆಯವರು ಸಿಎಂ ಆಗುವುದಕ್ಕೆ ಹಾಗೂ ನಿವು ಸಿಎಂ ಆಗುವುದಕ್ಕೆ ನಮ್ಮ ಸಮಾಜದ ದೊಡ್ಡ ಆಶೀರ್ವಾದವಿದೆ. 31 ರಂದು ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ಮಾಡುತ್ತೇವೆ. ಈಗಾಗಲೇ ನಾಲ್ಕು ಹೋರಾಟಗಳು ಆಗಿದ್ದು, 5ನೇಯದ್ದು ಬಹುದೊಡ್ಡ ಮಟ್ಟದ ಹೋರಾಟವಾಗುತ್ತದೆ. ನರಗುಂದದ ಹೋರಾಟವಾದರೂ ಆಶ್ಚರ್ಯಪಡಬೇಕಾಗಿಲ್ಲ. ಅಂತಹ ಹೋರಾಟಕ್ಕೆ ನಮ್ಮನ್ನು ಒಳಪಡಿಸಬೇಡಿ ಎಂದು ಎಚ್ಚರಿಸಿದರು.

ನಾವು ಶಾಂತಿಪ್ರಿಯರು. ರಟ್ಟಿàಹಳ್ಳಿ-ಹಿರೇಕೆರೂರು ತಾಲೂಕಿನ ನಿಮ್ಮ ತವರು ಜಿಲ್ಲೆಯಿಂದ ಸರ್ಕಾರಕ್ಕೆ ಆಗ್ರಹ ಮಾಡುತ್ತಿದ್ದೇವೆ. ಇದು ಪಂಚಮಸಾಲಿಗಳ ಅಸ್ಥಿತ್ವದ ಹೋರಾಟ. ಮುಂದಿನ ಭವಿಷ್ಯದ ನಿರ್ಣಾಯಕ ಸಂದರ್ಭ. ನಾವು ರಾಜಕೀಯ ಮೀಸಲಾತಿ ಕೇಳುತ್ತಿಲ್ಲ. ನಮ್ಮ ಶಿಕ್ಷಣ, ಉದ್ಯೋಗಕ್ಕಾಗಿ ಮೀಸಲಾತಿ ಕೇಳುತ್ತಿದ್ದೇವೆ. ಕೂಡಲೇ ಸರ್ಕಾರ ನ್ಯಾಯ ಒದಗಿಸಬೇಕೆಂದರು. ಈ ವೇಳೆ ತಾಲೂಕು ಅಧ್ಯಕ್ಷ ಪರಮೇಶಪ್ಪ ಹಲಗೇರಿ, ವೀರಣ್ಣ ಹಲಗೇರಿ, ನಿಂಗಪ್ಪ ಚಳಗೇರಿ, ಪಿ.ಡಿ.ಬಸನ ಗೌಡ್ರ, ದಿಗ್ವಿಜಯ ಹತ್ತಿ, ವೀರನಗೌಡ ಪ್ಯಾಟಿಗೌಡ್ರ, ರಾಜನಗೌಡ ಪಾಟೀಲ್‌, ಕಾಂತೇಶ ಪಾಟೀಲ್‌, ರವಿ ಹರವಿಶೆಟ್ರ, ಮಾಲತೇಶ ಬೆಳಕೇರಿ, ವಿಜಯ ಅಮಗಡಿ, ರಾಜು ತಿಪ್ಪಶೆಟ್ಟಿ, ಕಠದಾರ ಅಂಗಡಿ, ಕುಮಾರ ಪೂಜಾರ, ಪ್ರವೀಣ ಅಬ್ಬಲೂರ, ರಾಘವೇಂದ್ರ ಹರವಿಶಟ್ರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next