ಔರಾದ: ಆದರ್ಶ ಶಿಕ್ಷಕರಿಗೆ ಕಿರುಕುಳ ನೀಡುತ್ತಿರುವ ಹಾಗೂ ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಸುತ್ತಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಚವ್ಹಾಣ ಶೆಟ್ಟಿ ಅವರನ್ನು ಅಮಾನತುಗೊಳಿಸಬೇಕೆಂದು ಒತ್ತಾಯಿಸಿ ಬಾಲಾಜಿ ನರೋಟೆ ಗೆಳೆಯರ ಬಳಗದ ಸದಸ್ಯರು ಶಿಕ್ಷಣ ಇಲಾಖೆ ಉಪನಿರ್ದೇಕರಿಗೆ ಬರೆದ ಮನವಿಯನ್ನು ತಹಶೀಲ್ದಾರ್ ಎಂ.ಚಂದ್ರಶೇಖರ ಅವರಿಗೆ ಸಲ್ಲಿಸಿದರು. ಬಾಲೂಕ(ಕೆ) ಗ್ರಾಮದಲ್ಲಿ ನಿವೃತ್ತ ಶಿಕ್ಷಕ ಪ್ರಕಾಶ ವೀಠಲರಾವ್ ನಿವೃತ್ತರಾಗಿ ನಾಲ್ಕು ತಿಂಗಳು ಕಳೆದರು ಪಿಂಚಣಿ ಹಣ ಬಂದಿಲ್ಲ. ಅವರು ಅನಾರೋಗ್ಯದಿಂದ ಬಳಲಿ ಗುರುವಾರ ಮೃತ ಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಸೇವೆಯಲ್ಲಿ ನಿರ್ಲಕ್ಷ್ಯ ವಹಿಸಿದ ಶಿಕ್ಷಣಾಧಿಕಾರಿಯನ್ನು ಅಮಾನತುಗೊಳಿಸಬೇಕೆಂದು ಮನವಿ ಮಾಡಿದರು. ಚವ್ಹಾಣ ಶೆಟ್ಟಿ ಅವರು ತಾಲೂಕಿಗೆ ಶಿಕ್ಷಣಾಧಿಕಾರಿಗಳಾಗಿ ಬಂದಾಗಿನಿಂದ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಎಸ್‌ಎಸ್‌ಎಲ್ ಪರಿಕ್ಷೆ ಫಲಿತಾಂಶ ಸುಧಾರಣೆ ಮಾಡಲು ವಿಶೇಷ ತರಬೇತಿಗಳನ್ನು ಸಹ ನಡೆಸುತ್ತಿಲ್ಲ. ಶಾಲೆಯಿಂದ ಹೊರ ಉಳಿದ ಮಕ್ಕಳನ್ನು ಶಾಲೆಗೆ ಕರೆ ತರುವಲ್ಲಿ ಶಿಕ್ಷಣ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಸಂಘದ ತಾಲೂಕು ಅಧ್ಯಕ್ಷ ಶಿವಕುಮಾರ ಕಾಂಬಳೆ ಆರೋಪಿಸಿದರು. ಕನ್ನಡ ಮಾಧ್ಯಮ ಶಾಲೆಯಲ್ಲಿ ಹಿಂದಿ ಶಿಕ್ಷಕರ ಅಗತ್ಯ ಇಲ್ಲ. ಆದರು ಕೂಡ ಹಿಂದೆ ಶಿಕ್ಷಕರನ್ನು ಕನ್ನಡ ಮಾಧ್ಯಮ ಶಾಲೆಗೆ ನಿಯೋಜನೆ ಮಾಡಿ ಗಡಿಯಲ್ಲಿ ಕನ್ನಡ ಶಾಲೆಗೆ ಬೀಗ ಹಾಕುವ ಪ್ರಯತ್ನವನ್ನು ಶಿಕ್ಷಣಾಧಿಕಾರಿ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಎಸ್.ಕೆ. ಆರೀಫ್,ಗುಂಡಪ್ಪ ಮುದಾಳೆ, ಸುಂದರ ಮೇತ್ರೆ, ರವಿ ಯರನಾಳೆ, ಚಂದು ನಿಡೋದಾ, ಸಂಜುಕುಮಾರ ಖೇಡಕರ್, ಶ್ರಾವಣ ಕೋಳೆಕರ್, ಸಂದೀಪ ಮಾನೆ, ಸಾಗರ ಜಾಧವ, ರಾಜು ಮುದಾಳೆ, ರವಿ ಜೀವಾ, ಮಹೇಶ ವಾಘಮಾರೆ ಇನ್ನಿತರರು ಇದ್ದರು.