Advertisement

ಕ್ಷೇತ್ರಾಭಿವೃದ್ದಿಗೆ ಎಲ್ಲರ ಸಹಕಾರ ಅಗತ್ಯ

03:51 PM Dec 31, 2021 | Shwetha M |

ಸಿಂದಗಿ: ಅಧಿಕಾರಿಗಳು ತಮ್ಮ ಇಲಾಖೆ ಮಾಹಿತಿ ಸರಿಯಾಗಿ ಒದಗಿಸಬೇಕು. ನಿಮಗೇನಾದರು ಸಮಸ್ಯೆಯಾದಲ್ಲಿ ನನಗೆ ನೇರವಾಗಿ ಭೇಟಿ ನೀಡಿ ಬಗೆಹರಿಸಿಕೊಳ್ಳಬಹುದು. ಕ್ಷೇತ್ರದ ಅಭಿವೃದ್ಧಿಗೆ ಎಲ್ಲ ಅಧಿಕಾರಿಗಳ ಸಹಕಾರ ಅಗತ್ಯ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.

Advertisement

ಪಟ್ಟಣದ ತಾಪಂ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತ್ತೈಮಾಸಿಕ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈಗ ಆಡಳಿತಾವಧಿ ಕೇವಲ 15 ತಿಂಗಳು ಉಳಿದಿದ್ದು, ಆಡಳಿತ ಯಂತ್ರ ಚುರುಕುಗೊಂಡು ಅಭಿವೃದ್ಧಿ ಕಾರ್ಯ ವೇಗವಾಗಿ ನಡೆಯಬೇಕು. ಆದ್ದರಿಂದ ಎಲ್ಲ ಇಲಾಖೆ ಅಧಿಕಾರಿಗಳು ಅಭಿವೃದ್ಧಿ ಕೆಲಸಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿದರು. ಕ್ಷೇತ್ರದಲ್ಲಿ ಜಲ ಜೀವನ ಮಿಷನ್‌ ಯೋಜನೆಯಡಿ ಕುಡಿವ ನೀರು ಪೂರೈಕೆ ಕಾರ್ಯ ಮಂದಗತಿಯಲ್ಲಿ ಸಾಗುತ್ತಿದೆ ಎಂದು ತಿಳಿದುಬಂದಿದೆ. ಆದ್ದರಿಂದ ಯೋಜನೆ ಕಾಮಗಾರಿ ಶೀಘ್ರ ಪೂರ್ಣಗೊಳ್ಳಬೇಕು. ಯಾವ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಇದೆಯೋ ಅಲ್ಲಿ ಶಾಶ್ವತ ಕುಡಿವ ನೀರಿನ ವ್ಯವಸ್ಥೆ ಮಾಡಬೇಕು. ಬೇಸಿಗೆಯಲ್ಲಿ ಕುಡಿವ ನೀರಿನ ಸಮಸ್ಯೆ ಉದ್ಭವಿಸದಂತೆ ಮುಂಜಾಗ್ರತಾ ಕ್ರಮ ಕೈಕೊಳ್ಳಬೇಕೆಂದು ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಭಾಗ್ಯಶ್ರೀ ಕಟಗೇರಿ ಅವರಿಗೆ ಸೂಚಿಸಿದರು.

ಕ್ಷೇತ್ರದಲ್ಲಿ ವಿವಿಧ ಹಳ್ಳಿಗಳಲ್ಲಿ 51 ಶುದ್ಧ ಕುಡಿವ ನೀರಿನ ಘಟಕಗಳಿದ್ದರೂ ಕೇವಲ 14 ಘಟಕಗಳು ಚಾಲ್ತಿಯಲ್ಲಿವೆ. ಘಟಕಗಳ ನಿರ್ವಹಣೆ ಏಜೆನ್ಸಿ ಅವರಿಗೆ ನೋಟಿಸ್‌ ನೀಡಿ. ಸರಿಯಾಗಿ ನಿರ್ವಹಣೆ ಮಾಡದಿದ್ದಲ್ಲಿ ಏಜೆನ್ಸಿ ಬದಲಾವಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕ್ಷೇತ್ರದಲ್ಲಿ 76 ಹಳ್ಳಿಗಳಿವೆ. ಅಲ್ಲಿ ಕುಡಿವ ನೀರಿನ ಸಮಸ್ಯೆ ಉದ್ಭವಿಸದಂತೆ ಕ್ರಿಯಾಯೋಜನೆ ಸಿದ್ಧಪಡಿಸಬೇಕು. ಜಲ ಜೀವನ್‌ ಮಿಷನ್‌ ಯೋಜನೆ ಕಾಮಗಾರಿಗಳ ಪ್ರೊಗ್ರೆಸ್‌ ಚೆನ್ನಾಗಿರಬೇಕು. ಯಾವ ಹಳ್ಳಿಯಲ್ಲಿ ನೀರಿನ ಸಮಸ್ಯೆ ಇರುವ ಬಗ್ಗೆ ಗ್ರಾಮಸ್ಥರಿಂದ ನನಗೆ ದೂರು ಬರಬಾರದು. ಈ ನಿಟ್ಟಿನಲ್ಲಿ ಕಾರ್ಯ ಮಾಡಬೇಕು ಎಂದರು.

Advertisement

ಕೆಡಿಪಿ ಸದಸ್ಯ ಶಿವು ಬಿರಾದಾರ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಶುದ್ಧ ಕುಡಿವ ನೀರಿನ ಘಟಕ ನಾಮಕೆವಾಸ್ತೆಯಲ್ಲಿವೆ. ಇವುಗಳ ನಿರ್ವಹಣೆ ಹೊಣೆ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಉಪವಿಭಾಗಕ್ಕಿದೆ. ಆದರೆ ಈ ಇಲಾಖೆ ಅಧಿಕಾರಿಗಳು ಘಟಕಗಳ ಕಡೆಗೆ ಹೊರಳಿ ನೋಡಿಲ್ಲ. ಗ್ರಾಮೀಣ ಪ್ರದೇಶದಲ್ಲಿ ನೀರಿನ ಕಾಮಗಾರಿ ಕುಂಠಿತಗೊಂಡಿವೆ. ಗ್ರಾಮೀಣ ಪ್ರದೇಶದಲ್ಲಿ ನೀರಿನ ಸಮಸ್ಯೆ ಬಾರದಂತೆ ನೋಡಿಕೊಳ್ಳಬೇಕು ಎಂದರು.

ತೋಟಗಾರಿಕೆ ಮಾಜಿ ಸಚಿವರಿಗೆ ಇಲಾಖೆಯಿಂದ ಪೀಠೊಪಕರಣ, ಕಂಪ್ಯೂಟರ್‌, ವಿವಿಧ ಸಾಮಗ್ರಿ ಸೇರಿ ಅಂದಾಜು 10 ಲಕ್ಷ ಮೌಲ್ಯದ ವಸ್ತುಗಳನ್ನು ನೀಡಿದ್ದೀರಿ. ಅವುಗಳನ್ನು ಈಗ ಇಲಾಖೆಯವರು ಏಕೆ ಮರಳಿ ಪಡೆದಿಲ್ಲ?. ಶೀಘ್ರ ಅವುಗಳನ್ನು ಮರಳಿ ಪಡೆಯುವಂತೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಿಗೆ ಒತ್ತಾಯಿಸಿದರು.

ಕೆಡಿಪಿ ಸದಸ್ಯ ಶಿವು ಆಲಮೇಲ ಮಾತನಾಡಿ, ವಿವಿಧ ಇಲಾಖೆಗಳ ಮಾಹಿತಿ, ಕಾಮಗಾರಿ ಕುರಿತು ಚರ್ಚಿಸಿದರು. ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ| ಎಚ್‌.ವೈ. ಸಿಂಗೆಗೋಳ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ರಾಘವೇಂದ್ರ ಬಗಲಿ, ಹೆಸ್ಕಾಂ ಎಇಇ ಚಂದ್ರಕಾಂತ ನಾಯಕ, ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ| ಎಸ್‌.ಡಿ. ಅವಟಿ, ಬಿಇಒ ಆರ್‌.ಎಸ್‌. ನೀರಲಗಿ, ವಲಯ ಅರಣ್ಯಾಧಿಕಾರಿ ಇರ್ಸಾದ್‌ ನೇವಾರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆ ಪ್ರಗತಿ ವಿವರಿಸಿದರು.

ಇದೇ ಸಂದರ್ಭದಲ್ಲಿ ನೂತನ ಶಾಸಕ ರಮೇಶ ಭೂಸನೂರ ಹಾಗೂ ಕೆಡಿಪಿ ಸದಸ್ಯರನ್ನು ತಾಪಂ ಅಧಿಕಾರಿಗಳು ಸನ್ಮಾನಿಸಿದರು. ಈ ವೇಳೆ ತಾಪಂ ಇಒ ಹೊಂಗಯ್ಯ ಕೆ., ಆಡಳಿತಾಧಿಕಾರಿ ನಿಂಗಪ್ಪ ಗೊಠೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next