Advertisement

ಕ್ಷೇತ್ರದಲ್ಲಿ ಬೆಟ್ಟಿಂಗ್‌ ಭರಾಟೆ ಜೋರು!

08:36 PM Apr 21, 2019 | sudhir |

ಕೋಲಾರ: ಲೋಕಸಭಾ ಚುನಾವಣೆಗೆ ಕೋಲಾರ ಕ್ಷೇತ್ರದಲ್ಲಿ ಮತದಾನ ಶಾಂತಿಯುತವಾಗಿ ನಡೆದಿದೆ.

Advertisement

ಮತದಾನದ ನಂತರ ಸೋಲು ಗೆಲುವಿನ ಲೆಕ್ಕಾಚಾರದ
ಬೆಟ್ಟಿಂಗ್‌ ಭರಾಟೆ ಜೋರಾಗಿದೆ.

ಜಿಲ್ಲೆಯಲ್ಲಿ ಜಿದ್ದಾಜಿದ್ದಿನ ರಾಜಕಾರಣ ಸಾಮಾನ್ಯ. ಹಾಲಿನ ಡೇರಿ ಚುನಾವಣೆಯಿಂದ ಹಿಡಿದು ಲೋಕಸಭಾ ಚುನಾವಣೆವರೆಗೂ ಚುರುಕಿನ ಪೈಪೋಟಿ ಇದ್ದೇ ಇರುತ್ತದೆ.

ಹಿಂಸೆಗೆ ಕಡಿವಾಣ: ಜಿಲ್ಲೆಯಲ್ಲಿ ಚುನಾವಣೆ ಎಂದರೆ ಅದು ಗಲಭೆಗಳಿಗೆ ನಾಂದಿ ಎನ್ನುವಂತೆ ನಡೆಯುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಜಾಗೃತ ಮತದಾರ ತನ್ನ ಪೈಪೋಟಿಯನ್ನು ಹೊಡೆದಾಟದವರೆಗೂ
ತೆಗೆದುಕೊಂಡು ಹೋಗುತ್ತಿಲ್ಲ. ಶ್ರೀನಿವಾಸಪುರ, ಚಿಂತಾಮಣಿ, ಮುಳಬಾಗಿಲು ಭಾಗದಲ್ಲಿ ಚುನಾವಣೆ ನಡೆದ ದಿನ ಕನಿಷ್ಠ 50 ಮಂದಿ ತಲೆ ಹೊಡೆದುಕೊಂಡು ಆಸ್ಪತ್ರೆಗೆ ದಾಖಲಾಗುವುದು. ಮತದಾನಕ್ಕೆ
ಅಡ್ಡಿಪಡಿಸುವುದು. ಮತಪೆಟ್ಟಿಗೆಗೆ ನೀರು, ಇಂಕು ಸುರಿಯುವುದು. ಮತದಾನದ ಹಾಳೆ ಹರಿಯುವುದು.

ಇದರಿಂದ ಐದಾರು ಮತಗಟ್ಟೆಗಳಲ್ಲಾದರೂ ಮರು
ಮತದಾನವಾಗುವುದು ಸಾಮಾನ್ಯ ಎನ್ನುವಂತಾಗಿತ್ತು.
ಆದರೆ, ಈಗ, ಇಂತಹ ಘಟನೆಗಳಿಗೆ ಆಸ್ಪದ ನೀಡುತ್ತಿಲ್ಲ.
ಇದರಿಂದ ಜಿಲ್ಲೆಯಲ್ಲಿ ಚುನಾವಣೆಗಳು ರಕ್ತರಂಜಿತವಾಗಿ ನಡೆಯುವುದರ ಬದಲು ಶಾಂತಿಯುತವಾಗಿ ನಡೆಯುತ್ತಿವೆ.

Advertisement

ಪೈಪೋಟಿಗೆ ಕೊರತೆ ಇಲ್ಲ: ಚುನಾವಣೆಗಳು ಶಾಂತಿ ಯುತವಾಗಿ ನಡೆದರೂ, ಚುನಾವಣಾ ಪೈಪೋಟಿ ಯಾವುದೇ ರೀತಿಯಿಂದಲೂ ಕಡಿಮೆಯಾಗಿಲ್ಲ. ತಾವು ಬೆಂಬಲಿಸುವ ಅಭ್ಯರ್ಥಿ ಹಾಗೂ ರಾಜಕೀಯ
ಪಕ್ಷಕ್ಕಾಗಿ ಕಟಿಬದ್ಧವಾಗಿ ದುಡಿಯುವ ಛಾತಿ ಕಡಿಮೆಯಾಗಿಲ್ಲ. ಸಾಮಾನ್ಯವಾಗಿ ಜಿಲ್ಲೆಯ ರಾಜಕಾರಣ ಕಾಂಗ್ರೆಸ್‌ -ಜೆಡಿಎಸ್‌ ನಡುವೆಯೇ ನಡೆಯುತ್ತಿತ್ತು.

ಆದರೆ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌-ಬಿಜೆಪಿ ನಡುವೆ ಇರುತ್ತಿತ್ತು. ಈ ಬಾರಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಮತ್ತು ಬಿಜೆಪಿ ನಡುವೆ ಮಾತ್ರವೇ ಚುನಾವಣೆ ನಡೆದಿದೆ.

ಅದರಲ್ಲೂ, ಬಿಜೆಪಿ ಅಭ್ಯರ್ಥಿ ಪರವಾಗಿ ಮೈತ್ರಿ ಮುಖಂಡರೇ ನಿಂತಿದ್ದರಿಂದ ಯಾರು ಯಾರನ್ನು ಬೆಂಬಲಿಸುತ್ತಿದ್ದಾರೆ. ಯಾರು ಯಾರಿಗೆ ಓಟು ಕೇಳುತ್ತಿದ್ದಾರೆಂಬುದನ್ನು ಅರ್ಥ ಮಾಡಿಕೊಳ್ಳುವುದೇ
ಸಾಮಾನ್ಯ ಮತದಾರರಿಗೆ ಕಷ್ಟವಾಗುವಂತಾಗಿತ್ತು.

ಆದರೂ, ಚುನಾವಣೆಯಲ್ಲಿ ಶೇ.77.15 ಪ್ರಮಾಣದಲ್ಲಿ
ಮತದಾನವಾಗಿರುವುದು ದಾಖಲೆಯೇ.

ಬೆಟ್ಟಿಂಗ್‌ ಭರಾಟೆ: ಜಿಲ್ಲೆಯಲ್ಲಿ ಯಾವುದೇ ಚುನಾವಣೆ ನಡೆದರೂ ಬೆಟ್ಟಿಂಗ್‌ ನಡೆಯಲೇ ಬೇಕು. ಅದರಲ್ಲೂ ಮುಖ್ಯವಾಗಿ ಶ್ರೀನಿವಾಸಪುರ, ಚಿಂತಾಮಣಿ, ಶಿಡ್ಲಘಟ್ಟ, ಮುಳಬಾಗಿಲು ತಾಲೂಕುಗಳಲ್ಲಿ ಪಕ್ಷಗಳ ಕಾರ್ಯಕರ್ತರು ಕೋಟ್ಯಂ ತರ ರೂ., ಮೌಲ್ಯದ, ತೋಟ, ಮನೆ, ನಿವೇಶನಗಳ ಮೇಲೆ ಬೆಟ್ಟಿಂಗ್‌
ಕಟ್ಟುವುದು ನಡೆಯುತ್ತದೆ.

ಈ ಲೋಕಸಭಾ ಚುನಾವಣೆಯಲ್ಲಿಯೂ ಇದು ಕಡಿಮೆಯಾಗಿಲ್ಲ. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದ್ದರಿಂದ ಬೆಟ್ಟಿಂಗ್‌ ಲೆಕ್ಕಾಚಾರಗಳು ಬೇರೆ ರೀತಿಯದೇ
ಆಗಿವೆ. ಯಾವಾಗಲೂ ಸ್ವಂತ ಪಕ್ಷ ಮತ್ತು ತಮ್ಮ ನಾಯಕರ ಪರವಾಗಿ ಬೆಟ್ಟಿಂಗ್‌ ಕಟ್ಟುತ್ತಿದ್ದವರು ಈಗ ತಾವು ಚುನಾವಣೆಯಲ್ಲಿ ಕೆಲಸ ಮಾಡಿರುವ ಕಾರಣಕ್ಕಾಗಿ ಬೆಟ್ಟಿಂಗ್‌ ಕಟ್ಟುತ್ತಿದ್ದಾರೆ. ಮೈತ್ರಿ ಅಭ್ಯರ್ಥಿ
ಪರವಾಗಿಯೂ ಕಾಂಗ್ರೆಸ್‌, ಜೆಡಿಎಸ್‌ ಮುಖಂಡರು ಕಾರ್ಯಕರ್ತರು ಹಾಗೂ ಬಿಜೆಪಿ ಅಭ್ಯರ್ಥಿ ಪರವಾಗಿಯೂ ಕಾಂಗ್ರೆಸ್‌-ಜೆಡಿಎಸ್‌ ಮುಖಂಡರು ಮಂಚೂಣಿಯಲ್ಲಿ ನಿಂತು ಚುನಾವಣೆ ನಡೆಸಿದ್ದೇ
ಇದಕ್ಕೆ ಪ್ರಮುಖ ಕಾರಣ.

ಮಿತ್ರರು, ಬಂಧುಗಳನ್ನು ಮಾತಿನ ಮೂಲಕ ಕೆಣಕಿ ಬೆಟ್ಟಿಂಗ್‌ಗೆ ಆಹ್ವಾನಿಸುತ್ತಿದ್ದಾರೆ. ಬೆಟ್ಟಿಂಗ್‌ನಲ್ಲಿ ಸದ್ಯಕ್ಕೆ ನಗದು, ಹಣ, ಆಭರಣ, ಜಮೀನು ತೋಟದ ದಾಖಲೆ ಪತ್ರ, ಮೊಬೈಲ್‌ ಮತ್ತಿತರ ವಸ್ತುಗಳ ಬೆಟ್ಟಿಂಗ್‌ ಜನಪ್ರಿಯವಾಗಿದೆ. ಸಾಮಾನ್ಯವಾಗಿ ನಡೆ ಯುತ್ತಿದ್ದ
ಕ್ರಿಕೆಟ್‌ ಐಪಿಎಲ್‌ ಬೆಟ್ಟಿಂಗ್‌ಗಿಂತಲೂ ಚುನಾವಣೆ ಬೆಟ್ಟಿಂಗ್‌ ಸಾರ್ವತ್ರಿಕವಾಗಿ ಕಾಣಿಸಿಕೊಳ್ಳುತ್ತಿದೆ.

ಬಿಜೆಪಿ ಫೇವರೇಟ್‌: ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪರವಾಗಿ ಬೆಟ್ಟಿಂಗ್‌ ಜೋರಾಗಿದೆ. ಒಂದಕ್ಕೆ ಎರಡು ಪ್ರಮಾಣದಲ್ಲಿಯೂ ಬಿಜೆಪಿ ಪರವಾಗಿ ಬೆಟ್ಟಿಂಗ್‌ದಾರರು ಜೋರು ಬ್ಯಾಟಿಂಗ್‌ ನಡೆಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆಂಬ
ವಿಶ್ವಾಸದಲ್ಲಿರುವ ಮುಖಂಡರು, ಒಂದಕ್ಕೆ ಎರಡರ ದರದಲ್ಲಿ ಬೆಟ್ಟಿಂಗ್‌ ಕಟ್ಟಲು ಆಹ್ವಾನಿಸುತ್ತಿದ್ದಾರೆ.

ಇದೀಗ ತಾನೇ ಬೆಟ್ಟಿಂಗ್‌ ಭರಾಟೆ ಆರಂಭವಾಗಿದ್ದು, ಇನ್ನು ಫ‌ಲಿತಾಂಶದವರೆಗೂ ಬೆಟ್ಟಿಂಗ್‌ ಸದ್ದು ಮಿತಿ ಮೀರಲಿದೆ ಎಂದು ಹೇಳಲಾಗುತ್ತಿದೆ.

ಸೋಲು ಗೆಲುವಿನ ಲೆಕ್ಕಾಚಾರ
ಚುನಾವಣೆ ನಂತರ ಸೋಲು ಗೆಲುವಿನ ಲೆಕ್ಕಾಚಾರ ಸಾಮಾನ್ಯ. ಆದರೆ, ಈ ಬಾರಿ ಮತದಾನದ ದಿನಕ್ಕೂ, ಮತ ಎಣಿಕೆಗೂ
ಬರೋಬ್ಬರಿ 35 ದಿನಗಳ ಕಾಲಾವಕಾಶ ಇರುವುದರಿಂದ ಲೆಕ್ಕಾಚಾರಕ್ಕೆ ಸುದೀರ್ಘ‌ ಅವಧಿ ಸಿಕ್ಕಂತಾಗಿದೆ. ಮತದಾನ ಮುಗಿದು,
ಮತಯಂತ್ರಗಳು ಸ್ಟ್ರಾಂಗ್‌ ರೂಂ ಸೇರಿದ ತಕ್ಷಣದಿಂದಲೇ ಲೆಕ್ಕಾಚಾರಗಳ ಭರಾಟೆಯೂ ಆರಂಭವಾಗಿದೆ. ವಿಧಾನಸಭಾ ಕ್ಷೇತ್ರವಾರು, ಪಂಚಾಯಿತಿ ವಾರು, ಗ್ರಾಮಗಳವಾರು, ಧರ್ಮಗಳ ಆಧಾರವಾರು, ಜಾತೀವಾರು, ಉಪ ಜಾತೀವಾರು, ಪಕ್ಷಗಳವಾರು, ಅಭ್ಯರ್ಥಿಗಳವಾರು ಹೀಗೆ ಅನೇಕ ಆಯಾಮಗಳಲ್ಲಿ ಲೆಕ್ಕಾಚಾರ ಶುರುವಾಗಿದೆ. ಯಾವುದೇ ಭಾಗದಲ್ಲಿ ಐದಾರು ಮಂದಿ ನಿಂತು ಮಾತನಾಡುತ್ತಿದ್ದಾರೆಂದರೆ ಅಲ್ಲಿ ರಾಜಕೀಯದ್ದೇ ಲೆಕ್ಕಾಚಾರ
ಎನ್ನುವುದು ಹೇಳಬಹುದು. ಅಷ್ಟರ ಮಟ್ಟಿಗೆ ಸೋಲು ಗೆಲುವಿನ ಲೆಕ್ಕಾಚಾರ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next