Advertisement

ಪಿಂಕ್‌ ಮತಗಟ್ಟೆಗಳಿಗೆ ಫಿದಾ ಆದ ರಾಜಧಾನಿ ಮತದಾರರು

11:40 AM May 13, 2018 | Team Udayavani |

ಬೆಂಗಳೂರು: ಮತದಾನ ಪ್ರಕ್ರಿಯೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಉದ್ದೇಶದಿಂದ ನಿರ್ಮಿಸಲಾಗಿದ್ದ “ಸಖೀ ಪಿಂಕ್‌’ ಮತಗಟ್ಟೆಗಳಿಗೆ ರಾಜಧಾನಿ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ಹೆಚ್ಚಿನ ಸಂಖ್ಯೆ ಮತದಾರರು ಪಿಂಕ್‌ ಮತಗಟ್ಟೆಗಳಿಗೆ ತೆರಳಿ ಮತ ಚಲಾಯಿಸಿದ್ದು ಕಂಡುಬಂತು. 

Advertisement

ಮಹಿಳೆಯ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಬೆಂಗಳೂರು ನಗರ ಜಿಲ್ಲೆಯ 100 ಕಡೆಗಳಲ್ಲಿ ಗುಲಾಬಿ ಬಣ್ಣದಿಂದ ಅಲಂಕರಿಸಿದ ಮತಗಟ್ಟೆಗಳನ್ನು ನಿರ್ಮಿಸಲಾಗಿತ್ತು. ಗುಲಾಬಿ ಬಣ್ಣದ ಮತಗಟ್ಟೆಗಳಿಗೆ ಮನಸೋತ ಮತದಾರರು ಮತಗಟ್ಟೆಗಳ ಎದುರು ನಿಂತು ಸೆಲ್ಫಿ  ಕ್ಲಿಕ್ಕಿಸಿಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು. 

ಪಿಂಕ್‌ ಮತಗಟ್ಟೆಗಳಲ್ಲಿ ಚುನಾವಣಾ ಕಾರ್ಯಕ್ಕೆ ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯನ್ನೇ ನಿಯೋಜಿಸಿದ್ದರಿಂದ ಮಹಿಳೆಯರು ಸಂತಸದಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಸಿಬ್ಬಂದಿಯೂ ಸಹ ಗುಲಾಬಿ ಬಣ್ಣ ಉಡುಗೆ ತೊಟ್ಟಿದ್ದು ವಿಶೇಷವಾಗಿತ್ತು. ಮತಗಟ್ಟೆಗಳಲ್ಲಿ ಕೇವಲ ಮಹಿಳೆಯರಿಗೆ ಮಾತ್ರವಲ್ಲದೆ ಪುರುಷರಿಗೂ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿತ್ತು. 

ವೃದ್ಧರನ್ನು 2 ಗಂಟೆ ಕಾಯಿಸಿದ ಅಧಿಕಾರಿಗಳು: ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ಯಡವಟ್ಟಿನಿಂದ ವೀಲ್‌ಚೇರ್‌ ಮೂಲಕ ಮತದಾನಕ್ಕೆ ಬಂದ 92 ವರ್ಷದ ವೃದ್ಧ ಸುರೇಂದ್ರ ಭಟ್ನಾಗರ್‌ ಅವರು 2 ಗಂಟೆಗಳ ಕಾಲ ಬಿಸಿಲಿನಲ್ಲಿ ನಿಲ್ಲುವಂತಾಯಿತು. ಅಧಿಕಾರಿಗಳು ಏಕಾಏಕಿ ನಿಮ್ಮ ಹೆಸರು ಪಟ್ಟಿಯಲ್ಲಿಲ್ಲ ಎಂದು ಹೇಳಿದರಿಂದ ಗಾಬರಿಗೊಂಡ ಅವರು ಎರಡು ಗಂಟೆ ಕಾದು ಮತ್ತೂಮ್ಮೆ ಪರಿಶೀಲಿಸುವಂತೆ ಸೂಚಿಸಿದ್ದು,

ಈ ವೇಳೆ ಪಟ್ಟಿಯಲ್ಲಿ ಅವರ ಹೆಸರಿರುವುದು ಕಂಡುಬಂದ ನಂತರ ಅವರಿಗೆ ಮತ ಹಾಕಲು ಅವಕಾಶ ನೀಡಲಾಯಿತು. ಇದರಿಂದ ಸಿಟ್ಟಿಗೆದ್ದ ಸುರೇಂದ್ರ ಅವರು, ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಯಲಹಂಕ ಕ್ಷೇತ್ರದಲ್ಲಿ ಜೆಡಿಎಸ್‌ ಕಾರ್ಯಕರ್ತರು ಮತಗಟ್ಟೆಯಲ್ಲಿ ಕುಳಿತು ಜೆಡಿಎಸ್‌ಗೆ ಮತ ಹಾಕುವಂತೆ ಮತದಾರರ ಮೇಲೆ ಪ್ರಭಾವಿ ಬೀರುತ್ತಿರುವ ವಿಚಾರವಾಗಿ ಬಿಜೆಪಿ ಹಾಗೂ ಜೆಡಿಎಸ್‌ ಕಾರ್ಯಕರ್ತರ ನಡುವಿನ ವಾಗ್ವಾದಕ್ಕೆ ಕಾರಣವಾಗಿತ್ತು. ಈ ವೇಳೆ ಕಾರ್ಯಕರ್ತರು ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದಾಗ ಮಧ್ಯ ಪ್ರವೇಶಿಸಿದ ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆದರು. 

Advertisement

ಬ್ಯಾಟರಾಯಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಬಹಿರಂಗವಾಗಿ ಹಣ ಹಂಚಿಕೆ ಮಾಡುತ್ತಿರುವುದು ಕಂಡುಬಂದಿದ್ದು, ಕ್ಷೇತ್ರದ ಪ್ರಮುಖ ರಸ್ತೆಯ ಮೇಲ್ಸೇತುವೆ ಕಳೆಗೆ ನಿಂತು ಮತದಾರರಿಗೆ ಕಾರ್ಯಕರ್ತರು ಹಣ ಹಂಚುತ್ತಿರುವ ದೃಶ್ಯಗಳು ವೈರಲ್‌ ಆಗಿವೆ. 

ಚುನಾವಣಾ ಕಾರ್ಯಕಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಬಳಸಿಕೊಂಡ ಹಿನ್ನೆಲೆಯಲ್ಲಿ ಬಸ್‌ಗಳ ಕೊರತೆಯುಂಟಾಗಿ ದೂರದ ಊರುಗಳಿಗೆ ಹೋಗಲು ಪ್ರಾಯಾಣಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಪರಿಸ್ಥಿತಿಯ ಲಾಭ ಪಡೆದ ಆಟೋ, ಟ್ಯಾಕ್ಸಿ ಚಾಲಕರು ಪ್ರಯಾಣಿಕರ ಸುಲಿಗೆ ಮಾಡಿದ ಪ್ರಕರಣಗಳು ಬೆಳಕಿಗೆ ಬಂದಿವೆ. ಇನ್ನು ಕೆಲವು ಕಡೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿಯೇ ಪಾಸ್‌ ಹೊಂದಿರುವವರಿಗೆ ಬಸ್‌ ಏರಲು ನಿರ್ವಾಹಕರು ಅವಕಾಶ ನೀಡದಿರುವುದು ಸಾರ್ವಜನಿಕರಿ ಆಕ್ರೋಶಕ್ಕೆ ಕಾರಣವಾಗಿತ್ತು. 

ತುಂಬಿ ತುಳುಕಿದ ಬಸ್‌ಗಳು: ಕೆಎಸ್‌ಆರ್‌ಟಿಸಿ ಬಸ್‌ಗಳ ಕೊರತೆಯಿಂದ ಖಾಸಗಿ ಬಸ್‌ಗಳು ತುಂಬಿ ತುಳುಕುತ್ತಿದ್ದ ದೃಶ್ಯಗಳು ಶನಿವಾರ ಎಲ್ಲೆಡೆ ಕಂಡುಬಂದವು. ಬಸ್‌ಗಳ ಮೇಲ್ಭಾಗದಲ್ಲಿ (ಟಾಪ್‌) ಮೇಲೆ ಪ್ರಯಾಣಿಕರನ್ನು ಕೂರಿಸಬಾರದು ಎಂಬ ನಿಯಮವಿದೆ. ಆದರೆ, ಸಂಚಾರ ಪೊಲೀಸರ ಎದುರಿನಲ್ಲಿಯೇ ಬಸ್‌ಗಳ ಟಾಪ್‌ ಮೇಲೆ ಹತ್ತಾರು ಪ್ರಯಾಣಿಕರು ಕೂರಿಸಿಕೊಂಡಿ ಸಾಗುತ್ತಿದ್ದರೂ ಅಧಿಕಾರಿಗಳು ಮಾತ್ರ ಮೂಕ ಪ್ರೇಕ್ಷಕರಾಗಿದ್ದರು. 

ವಾಹನ ದಟ್ಟಣೆಗೆ ಹೆದ್ದಾರಿಗಳು ಬಂದ್‌: ಮತದಾನಕ್ಕಾಗಿ ಜನರು ತಮ್ಮ ತಮ್ಮ ಊರುಗಳಿಗೆ ತೆರಳಿದ ಪರಿಣಾಮ ಶನಿವಾರ ನಗರದ ಪ್ರಮುಖ ಹೆದ್ದಾರಿಗಳು ಅಕ್ಷರಶಃ ಬಂದ್‌ ಆಗಿದ್ದವು. ಮೈಸೂರು, ತುಮಕೂರು ಹಾಗೂ ಹಳೆ ಮದ್ರಾಸ್‌ ರಸ್ತೆಗಳಲ್ಲಿ ಗಂಟೆಗಟ್ಟೆಲೆ ನಿಂತ ಜಾಗದಲ್ಲಿಯೇ ವಾಹನಗಳು ನಿಂತಿದ್ದರಿಂದ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಯಿತು. ಪ್ರಮುಖವಾಗಿ ಟೋಲ್‌ಗ‌ಳಿರುವ ತುಮಕೂರು ಹಾಗೂ ಮೈಸೂರು ರಸ್ತೆಗಳಲ್ಲಿ ಹತ್ತಾರು ಕಿಲೋ ಮೀಟರ್‌ ದಟ್ಟಣೆ ಉಂಟಾಗಿತ್ತು. 

ಮತ ಚಲಾಯಿಸಿದ ತೃತೀಯ ಲಿಂಗಿಗಳು: ಇದೇ ಮೊದಲ ಬಾರಿಗೆ ಮತದಾರರ ಪಟ್ಟಿಗೆ ಸೇರ್ಪಡೆಯಾಗಿರುವ ತೃತೀಯ ಲಿಂಗಿಗಳು ಪ್ರಥಮ ಬಾರಿಗೆ ಮತ ಮತಚಲಾಯಿಸುವ ಮೂಲಕ ಸಂಭ್ರಮಿಸಿದ್ದು, ತಾವು ಮತ ಚಲಾಯಿಸಿದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ. 

ಹಿರಿಯರಿಗೆ ಉಚಿತ ಸಾರಿಗೆ: ಮತಗಟ್ಟೆಗಳಿಗೆ ತೆರಳುವ ಗರ್ಭಿಣಿ, ವಯೋವೃದ್ಧರು, ವಿಕಲಚೇನತರಿಗೆ ವೃಷಭಾವತಿ ನಗರದ ಆರ್‌.ಜೆ.ಗೌಡ ಎಂಬುವರು ಉಚಿತವಾಗಿ ಆಟೋ ಸೇವೆಯನ್ನು ಒದಗಿಸುವ ಮೂಲಕ ಮತದಾನಕ್ಕೆ ಪ್ರೋತ್ಸಾಹಿಸಿದ್ದಾರೆ. ಶನಿವಾರ ಬೆಳ್ಳಗ್ಗೆಯಿಂದ ಸಂಜೆವರೆಗೆ ನೂರಕ್ಕೂ ಹೆಚ್ಚಿನ ಮತದಾರರನ್ನು ತಮ್ಮ ಆಟೋದಲ್ಲಿ ಮತಗಟ್ಟೆ ಕರೆದುಕೊಂಡು ಹೋಗಿ ಮತದಾನದ ನಂತರ ಅವರನ್ನು ಮನೆಗೆ ತಲುಪಿಸುವ ಕೆಲಸವನ್ನು ಅವರು ಮಾಡಿದ್ದಾರೆ. 

ಮತಗಟ್ಟೆಗೆ ಬಂದ “ನಾಗರಾಜ’: ಮಹದೇವಪುರ ಕ್ಷೇತ್ರ ವ್ಯಾಪ್ತಿಯ ಕಿತ್ತಗನೂರು ಮತಗಟ್ಟೆಗೆ ಬಂದ ವಿಶೇಷ ಅತಿಥಿಯನ್ನು ಕಂಡ ಮತದಾರರು ದಿಕ್ಕಾಪಾಲಾಗಿ ಓಡಿದ ಘಟನೆ ಶನಿವಾರ ನಡೆದಿದೆ. ಮತದಾರರು ಸಾಲಿನಲ್ಲಿ ನಿಂತಿರುವಾಗ ಮತಗಟ್ಟೆಯಲ್ಲಿ ನಾಗರಹಾವು ಕಾಣಿಸಿಕೊಂಡಿದ್ದು, ಇದರಿಂದ ಭಯಭೀತರಾದ ಚುನಾವಣಾ ಸಿಬ್ಬಂದಿ ಹಾಗೂ ಮತದಾರರು ಮತಗಟ್ಟೆಯಿಂದ ಹೊರಗೆ ಓಡಿದ್ದಾರೆ. ಕೊನೆಗೆ ಕೊಠಡಿಯಿಂದ ಹಾವು ಹೊರಗೆ ಹೋದ ನಂತರದಲ್ಲಿ ಅಧಿಕಾರಿಗಳು ಮತದಾನ ಪ್ರಕ್ರಿಯೆ ಮುಂದುವರಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next