ನವದೆಹಲಿ: ಮಾಧ್ಯಮ ಕ್ಷೇತ್ರದಲ್ಲಿ ಟಿವಿ ಮಾಧ್ಯಮವು ಹೆಚ್ಚು ಜನರಿಗೆ ತಲುಪಿದ ಕ್ಷೇತ್ರ ಎನ್ನುವ ಖ್ಯಾತಿ ಪಡೆದಿದೆಯಾದರೂ ದಿನಪತ್ರಿಕೆಗಳೇ ಹೆಚ್ಚು ನಂಬಿಕಸ್ಥ ಮಾಹಿತಿ ಮೂಲ ಎನ್ನುವ ನಂಬಿಕೆಯನ್ನು ಜನರು ಹೊಂದಿದ್ದಾರೆ.
ಸುಧಾರಿತ ಸಮಾಜಕ್ಕಾಗಿ ಕಲಿಕಾ ಕೇಂದ್ರ (ಸಿಎಸ್‌ಡಿಎಸ್)ದ ಲೋಕನೀತಿ ಪ್ರೋಗ್ರಾಂನಿಂದ ನಡೆಸಲಾದ “ಮಾಧ್ಯಮ ಬಳಕೆಯ ನಡವಳಿಕೆ’ ಸಮೀಕ್ಷೆಯಿಂದ ಈ ಅಂಶ ಹೊರಬಿದ್ದಿದೆ.
ಕರ್ನಾಟಕ ಸೇರಿದಂತೆ 19 ರಾಜ್ಯಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. 15 ವರ್ಷ ಮೇಲ್ಪಟ್ಟ 7,463 ಮಂದಿ ಇದರಲ್ಲಿ ಭಾಗಿಯಾಗಿದ್ದಾರೆ. ಅವರು ಹೇಳುವ ಪ್ರಕಾರ ಬೇರೆ ಮಾಧ್ಯಮಕ್ಕೆ ಹೋಲಿಕೆ ಮಾಡಿದರೆ ದಿನಪತ್ರಿಕೆಯ ಮಾಹಿತಿಗಳನ್ನು ಸುಲಭವಾಗಿ ನಂಬಬಹುದಾಗಿದೆ.
3 ವರ್ಷಗಳಲ್ಲಿ ಅಂತರ್ಜಾಲದ ಬಳಕೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದೂ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಂತರ್ಜಾಲ ಬಳಸುವ 10ರಲ್ಲಿ 9 ಮಂದಿ ಸಾಮಾಜಿಕ ಜಾಲತಾಣ ಬಳಸುತ್ತಾರೆ. 10ರಲ್ಲಿ 7 ಮಂದಿ ಸುದ್ದಿಗಳಿಗಾಗಿ ವೆಬ್‌ಸೈಟ್‌ಗಳನ್ನು ನೋಡುತ್ತಾರೆ. 4ನೇ 3 ಮಂದಿ ಸರ್ಚ್ ಇಂಜಿನ್‌ಗಳನ್ನು ಹಾಗೂ 3ನೇ 2 ಮಂದಿ ಇ-ಮೇಲ್ ಬಳಕೆ ಮಾಡುತ್ತಾರೆ.
ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ.46 ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಜನರು ಏನು ಹಾಕಬೇಕು ಎನ್ನುವ ಬಗ್ಗೆ ಸರ್ಕಾರ ನಿರ್ಧಾರ ಮಾಡಬಾರದು ಎಂದಿದ್ದಾರೆ. ಶೇ.37 ಮಂದಿ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ಅಂತರ್ಜಾಲ ಸ್ಥಗಿತಗೊಳಿಸುವುದು ಸರಿಯೆಂದಿದ್ದರೆ, ಶೇ.36 ಮಂದಿ ತಪ್ಪು ಎಂದಿದ್ದಾರೆ.
ಶೇ.40 ಮಂದಿ ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ವಿರುದ್ಧ ಹೇಳಿಕೆಗೆ ಅವಕಾಶವಿರಬೇಕೆಂದಿದ್ದರೆ, ಶೇ.35 ಮಂದಿ ಅವಕಾಶ ಇರಬಾರದು ಎಂದಿದ್ದಾರೆ.