ರಾಯಚೂರು: ಲಿಂಗಸುಗೂರು ತಾಲೂಕಿನ ನಡುಗಡ್ಡೆಗಳಲ್ಲೊಂದಾದ ಹಂಚಿನಾಳ ಗ್ರಾಮಸ್ಥರು ಕಳೆದ ಕೆಲ ದಿನಗಳಿಂದ ಜ್ವರ, ಕೀಲುನೋವು, ವಾಂತಿ ಭೇದಿಯಂಥ ಕಾಯಿಲೆಗಳಿಂದ ಬಳಲುತ್ತಿದ್ದಾರೆ.
ಕಳೆದೊಂದು ತಿಂಗಳಲ್ಲಿ ಸುಮಾರು 60ಕ್ಕೂ ಅಧಿಕ ಜನ ಈ ರೀತಿ ಹಾಸಿಗೆ ಹಿಡಿದಿದ್ದರೂ ಆರೋಗ್ಯ ಇಲಾಖೆ ಸಕಾಲಕ್ಕೆ ಚಿಕಿತ್ಸೆಗೆ ಮುಂದಾಗಿಲ್ಲ. ಇತ್ತೀಚೆಗೆ ನೆರೆ ಹಾವಳಿಗೆ ತುತ್ತಾಗಿದ್ದ ನದಿ ಪಾತ್ರದ ಗ್ರಾಮಗಳಲ್ಲಿ ಇದು ಕೂಡ ಒಂದು. ಬಳಿಕ ಜಿಲ್ಲಾಡಳಿತ ಆರೋಗ್ಯದ ದೃಷ್ಟಿಯಿಂದ ಮುಂಜಾಗ್ರತಾ ಕ್ರಮ ಕೈಗೊಂಡಿತ್ತು. ಆದರೆ, ಇಲ್ಲಿನ ಜನ ಕಾಯಿಲೆಯಿಂದ ಬಳಲುತ್ತಿದ್ದರೂ ತಾಲೂಕು ಆರೋಗ್ಯ ಇಲಾಖೆ ಕ್ರಮಕ್ಕೆ ಮುಂದಾಗಿಲ್ಲ. ರಾತ್ರಿ ಮಲಗುವಾಗಚೆನ್ನಾಗಿದ್ದರೂ ಬೆಳಗಾಗುವುದರೊಳಗೆ ಕೀಲು ಹಿಡಿಯುವುದು, ಜ್ವರ, ವಾಂತಿ ಭೇದಿಗೆ ತುತ್ತಾಗುವುದು ಸಾಮಾನ್ಯ ಎನ್ನುವಂತಾಗಿದೆ. ಅಬಾಲವೃದ್ಧರಾದಿಯಾಗಿ ಎಲ್ಲರಿಗೂ ಈ ಸಮಸ್ಯೆ ಕಾಡುತ್ತಿದ್ದು, ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಮನೆಗೆ ಇಬ್ಬರು, ಮೂವರಂತೆ ನಿಂರತರವಾಗಿ ಕಾಯಿಲೆಗೆ ತುತ್ತಾಗುತ್ತಲೇ ಇದ್ದಾರೆ. ಗ್ರಾಮಕ್ಕೆ ಭೇಟಿ ನೀಡುವ ವೈದ್ಯರು ಮಾತ್ರೆ, ಚುಚ್ಚುಮದ್ದು ನೀಡಿದಾಗ ತುಸು ನಿರಾಳವಾಗುತ್ತದೆ. ಒಂದೆರಡು ದಿನಗಳಲ್ಲಿ ಪುನಃ ಜ್ವರ ಕಾಣಿಸಿಕೊಳ್ಳುತ್ತಿದೆ. ಇನ್ನೂ ಅನೇಕರು ಲಿಂಗಸುಗೂರಿಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕೂನ್ ಗುನ್ಯಾ, ಡೆಂಘೀ ಇರಬಹುದು ಎಂದು ಶಂಕಿಸಲಾಗಿದೆ. ಆದರೆ, ವೈದ್ಯರು ರಕ್ತ ಪರೀಕ್ಷೆ ಮಾಡಿದರೂ ಖಚಿತಪಡಿಸುತ್ತಿಲ್ಲ. ಇದರಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿದೆ.
ಕ್ಯಾಂಪ್ ಮಾಡಲು ಒತ್ತಾಯ: ಗ್ರಾಮದಲ್ಲಿ ಈ ಸಮಸ್ಯೆ ತಲೆದೋರಿದ್ದು, ವೈದ್ಯರು ಕ್ಯಾಂಪ್ ಮಾಡಿ ಪರೀಕ್ಷಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದರೂ ಆರೋಗ್ಯ ಇಲಾಖೆ ಈವರೆಗೂ ಸ್ಪಂದಿಸಿಲ್ಲ. ಇದರಿಂದ ಗ್ರಾಮಸ್ಥರು ಆಸ್ಪತ್ರೆಗಳಿಗೆ ಬಂದು ಚಿಕಿತ್ಸೆ ಪಡೆಯಬೇಕಿದೆ. ಒಂದಿಬ್ಬರಿಗಾದರೆ ಬರಬಹುದು. ಇಡೀ ಗ್ರಾಮದಲ್ಲಿ ಒಬ್ಬರು ತಪ್ಪಿದರೆ ಒಬ್ಬರಿಗೆ ಜ್ವರ ಬರುತ್ತಿದೆ. ಇಂಥ ಸಂದರ್ಭದಲ್ಲಿಯೂ ಆರೋಗ್ಯ ಇಲಾಖೆ ನಿಷ್ಕಾಳಜಿ ತೋರಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಗ್ರಾಮದ ಯುವಕ ಬಸೆಟ್ಟೆಪ್ಪ.
ಎರಡು ಸಾವಿರ ಜನಸಂಖ್ಯೆ: ಗುಂತಗೋಳ ಗ್ರಾಪಂ ವ್ಯಾಪ್ತಿಯ ಈ ಹಳ್ಳಿಯಲ್ಲಿ ಸುಮಾರು ಎರಡು ಸಾವಿರ ಜನಸಂಖ್ಯೆಯಿದೆ.ಮಲೇರಿಯಾ ಪೀಡಿತ ಪ್ರದೇಶ ಎಂದು ಗುರುತಿಸಲ್ಪಟ್ಟಿದೆ. ಆಗಾಗ ನರ್ಸ್‌ಗಳು ಬಂದು ಚಿಕಿತ್ಸೆ ನೀಡುತ್ತಾರಾದರೂ ಹೆಚ್ಚಿನ ಚಿಕಿತ್ಸೆಗೆ ತಾಲೂಕಿಗೆ ತೆರಳುವಂತೆ ಹೇಳುತ್ತಾರೆ. ಈ ಗ್ರಾಮ ಆನೆಹೊಸೂರು ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಒಳಪಡುತ್ತಿದ್ದು, ಅಲ್ಲಿಗೆ ಹೋಗಿ ಬರುವುದು ಕಷ್ಟವಾಗುತ್ತಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ತ್ವರಿತಗತಿಯಲ್ಲಿ ಚಿಕಿತ್ಸೆ ಕೊಡಿಸಲು ಕ್ರಮ ಕೈಗೊಳ್ಳಬೇಕಿದೆ.